9 ತಿಂಗಳೊಳಗೆ ಕಟ್ಟಡ ನಿರ್ಮಿಸದಿದ್ದರೆ ನಿವೇಶನ ಮುಟ್ಟುಗೋಲು: ಅಂಜಿನಪ್ಪ

| Published : Jul 10 2024, 12:38 AM IST

9 ತಿಂಗಳೊಳಗೆ ಕಟ್ಟಡ ನಿರ್ಮಿಸದಿದ್ದರೆ ನಿವೇಶನ ಮುಟ್ಟುಗೋಲು: ಅಂಜಿನಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕಂಪ್ಲಿ ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಮಂಗಳವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭೆ ಜರುಗಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಮಂಗಳವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭೆ ಜರುಗಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ಅಂಜಿನಪ್ಪ ಮಾತನಾಡಿ, ಎಪಿಎಂಸಿಯ 25 ಎಕರೆ ಜಾಗದಲ್ಲಿ 91 ನಿವೇಶನಗಳಿದ್ದು, 75 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ 64 ಕಟ್ಟಡಗಳನ್ನು ವರ್ತಕರು ನಿರ್ಮಿಸಿಕೊಂಡಿದ್ದು, ಇನ್ನು 11 ನಿವೇಶನಗಳಲ್ಲಿ ಕಟ್ಟಡ ಕಟ್ಟಿಕೊಂಡಿಲ್ಲ. ಸರ್ಕಾರದ ಆದೇಶದಂತೆ 9 ತಿಂಗಳ ಒಳಗಾಗಿ ಕಟ್ಟಡವನ್ನು ನಿರ್ಮಿಸಿಕೊಳ್ಳದಿದ್ದಲ್ಲಿ ಅಂತಹ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆಯ ಸುತ್ತು ಗೋಡೆಯು ಶಿಥಿಲಗೊಂಡಿದ್ದು ನಿರ್ವಹಣೆ ಮಾಡುವುದರೊಂದಿಗೆ ಎತ್ತರಿಸುವುದು, ಪ್ರವೇಶ ದ್ವಾರಗಳಿಗೆ ಕ್ಯಾಟಲ್ ಗಾರ್ಡ್ ಅಳವಡಿಸಿ ಗೇಟ್ ಗಳನ್ನು ನಿರ್ಮಿಸುವುದು, ಸಭಾ ಭವನ, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಕೊಠಡಿಗಳೊಂದಿಗೆ ಸುಸಜ್ಜಿತವಾದ ಡೂಪ್ಲೆಕ್ಸ್ ಮಾದರಿಯ ಆಡಳಿತ ಕಚೇರಿ ಕಟ್ಟಡ ನಿರ್ಮಿಸುವುದು, ನೂತನ ರೈತ ಭವನ ಕಟ್ಟಡ ನಿರ್ಮಿಸುವುದು, ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ವಿಚಾರ ಕುರಿತು ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಜೆ.ಎನ್. ಗಣೇಶ್, ಎಪಿಎಂಸಿ ಉಪಾಧ್ಯಕ್ಷರಾದ ಶರಣಬಸವ, ಸದಸ್ಯರಾದ ಗುರುಮೂರ್ತಿ, ಹಬೀಬ್ ರೆಹಮಾನ್, ಟಿ. ಸುರೇಶ್ ರೆಡ್ಡಿ, ಜಿ. ದೊಡ್ಡ ಯರಿಸ್ವಾಮಿ, ಜಿ.ಸುರೇಶ್ ಬಾಬು, ಎಚ್ ಕೃಷ್ಣ ಪಂಪಾಪತಿ, ಖಾಸಿಂಸಾಬ್, ಚೆನ್ನಬಸಪ್ಪ, ಹೆಚ್.ತಿಪ್ಪಯ್ಯ, ಯಲ್ಲವ್ವ, ಎಪಿಎಂಸಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುದರ್ಶನ್, ಜೂನಿಯರ್ ಎಂಜಿನಿಯರ್ ಮಂಜುನಾಥ್, ಪ್ರಭಾರಿ ಕಾರ್ಯದರ್ಶಿ ರಾಜುಕೊಂಚಿಗೇರಿ, ಮೇಲ್ವಿಚಾರಕ ಸುಕ್ರು ಸ್ವಾಮಿ ಸೇರಿದಂತೆ ಸಿಬ್ಬಂದಿ ಇದ್ದರು.