ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಪ್ರತಿ ವಾರ್ಡ್‌ಗೆ ನಾಗರಿಕರನ್ನೊಳಗೊಂಡ ಸಮಿತಿ ರಚನೆ ಮಾಡಬೇಕೆಂಬ ನಿಯಮವಿದ್ದರೂ ಈ ವರೆಗೂ ಏಕೆ ಮಹಾನಗರ ಪಾಲಿಕೆ ರಚನೆ ಮಾಡುತ್ತಿಲ್ಲ? ಸಮಿತಿ ಮಾಡಿದರೆ ಎಲ್ಲಿ ತಮ್ಮ ಪ್ರಾಮುಖ್ಯತೆಗೆ ಕುಂದು ಬರುತ್ತದೆ ಎಂಬ ಆತಂಕ ಪಾಲಿಕೆ ಸದಸ್ಯರನ್ನು ಕಾಡುತ್ತಿದೆಯೇ? ಅದಕ್ಕಾಗಿಯೇ ಅವರೇ ಸಮಿತಿ ಆಗದಂತೆ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆಯೇ?
ಇವು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಪ್ರಜ್ಞಾವಂತರಲ್ಲಿ ಹುಟ್ಟುಕೊಂಡಿರುವ ಪ್ರಶ್ನೆಗಳು.ಇದಕ್ಕೆ ಕಾರಣವೂ ಇಲ್ಲದಿಲ್ಲ. ಹಾಗೆ ನೋಡಿದರೆ ಈ ನಿಯಮ ಮಾಡಿ ಸರ್ಕಾರ ದಶಕಗಳೇ ಕಳೆದಿವೆ. ಆದರೆ ಕಳೆದ ಹಲವು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡದಲ್ಲಿ ವಾರ್ಡ್ ಸಮಿತಿಗಳೇ ರಚನೆಯಾಗಿಲ್ಲ
ಏನಿದು ವಾರ್ಡ್ ಸಮಿತಿ:ಆಯಾ ವಾರ್ಡ್‌ಗಳಲ್ಲಿ 10 ಜನ ನಾಗರಿಕರ ಸಮಿತಿ ಇರುತ್ತದೆ. ಇದಕ್ಕೆ ಆ ವಾರ್ಡ್‌ನ ಕಾರ್ಪೋರೇಟ್ ಅಧ್ಯಕ್ಷರಾಗಿದ್ದರೆ, ಆ ಸ್ಥಳೀಯ ಸಂಸ್ಥೆಯ ಅಧಿಕಾರಿಯೊಬ್ಬರು ಕಾರ್ಯದರ್ಶಿಯಾಗಿರುತ್ತಾರೆ. ಇನ್ನುಳಿದಂತೆ 3 ಸಾಮಾನ್ಯ ವರ್ಗ, 3 ಮಹಿಳೆಯರು, 2 ಎಸ್ಸಿ-ಎಸ್ಟಿ, 2 ಆ ವಾರ್ಡ್‌ನಲ್ಲಿ ಬರುವ ಎನ್‌ಜಿಒ ಅಥವಾ ಸಾಮಾಜಿಕ ಸಂಘ-ಸಂಸ್ಥೆಯ ಸದಸ್ಯರು ಸೇರಿದಂತೆ 10 ಜನರ ಸಮಿತಿ ಇರುತ್ತದೆ. ಈ ಸಮಿತಿಯೂ ಪ್ರತಿ ತಿಂಗಳಿಗೊಮ್ಮೆ ಸೇರಿ ಆ ವಾರ್ಡ್‌ನಲ್ಲಿ ಏನೆಲ್ಲ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವುದೇಗೆ? ಎಂಬ ಬಗ್ಗೆ ಯೋಚಿಸುತ್ತದೆ. ತನ್ನದೇ ಆದ ಸಲಹೆ ಸೂಚನೆ ನೀಡುತ್ತದೆ. ಈ ಮೂಲಕ ವಾರ್ಡ್ ಅಭಿವೃದ್ಧಿಗೆ ಪೂರಕವಾಗುವಂತಹ ಕೆಲಸ ನಿರ್ವಹಿಸುವುದು ಈ ಸಮಿತಿ.
ಅರ್ಜಿ ಆಹ್ವಾನ:ಪಾಲಿಕೆಯೂ ತಾನೇ ಅರ್ಜಿ ಆಹ್ವಾನಿಸಬೇಕು. ಬಳಿಕ ನಿಯಮದಲ್ಲಿನ ಮಾನದಂಡಗಳಂತೆ ಸಮಿತಿ ರಚಿಸಬೇಕು. ಹಾಗೆ ನೋಡಿದರೆ ತಾನಾಗಿಯೇ ಅರ್ಜಿ ಆಹ್ವಾನಿಸಬೇಕು. ಆದರೆ ಮಹಾನಗರ ಪಾಲಿಕೆ ತಾನಾಗಿಯೇ ಅರ್ಜಿ ಆಹ್ವಾನಿಸಿಯೇ ಇಲ್ಲ. ವಾರ್ಡ್ ಸಮಿತಿ ರಚನೆಗಾಗಿ ಇಲ್ಲಿನ ನಾಗರಿಕರೇ ಒತ್ತಡ ಹಾಕಿದ ಮೇಲೆಯೇ ಅರ್ಜಿ ಆಹ್ವಾನಿಸಿದೆ. 1045 ಅರ್ಜಿಗಳು ಪಾಲಿಕೆಗೆ ಬಂದಿವೆ. ಅವುಗಳನ್ನು ಪರಿಶೀಲನೆ ಮಾಡುವುದೇ ಆಗುತ್ತಿದೆಯೇ ಹೊರತು ಸಮಿತಿ ರಚನೆ ಮಾತ್ರ ಆಗುತ್ತಿಲ್ಲ.
ಕಾರಣವೇನು?:ವಾರ್ಡ್ ಸಮಿತಿ ರಚನೆಯಾದರೆ ಎಲ್ಲಿ ರಾಜಕಾರಣಿಗಳ ಪ್ರಾಮುಖ್ಯತೆ ಕಡಿಮೆಯಾಗಿ ಬಿಡುತ್ತದೆಯೋ ಎಂಬ ಆತಂಕ ರಾಜಕಾರಣಿಗಳದ್ದು. ಹೀಗಾಗಿ ಅವರೇ ತೆರೆಮರೆಯಲ್ಲಿ ವಾರ್ಡ್ ಸಮಿತಿ ರಚನೆಯಾಗದಂತೆ ತಡೆಯುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪ ಪ್ರಜ್ಞಾವಂತಹರದ್ದು. ಇದಕ್ಕೆ ಪುಷ್ಠಿ ನೀಡಿದಂತೆ ಪಾಲಿಕೆಗೆ ಚುನಾಯಿತ ಆಡಳಿತ ಮಂಡಳಿ ಬಂದು 2 ವರ್ಷಕ್ಕಿಂತ ಹೆಚ್ಚು ಕಾಲವೇ ಗತಿಸಿದರೂ ಈವರೆಗೂ ವಾರ್ಡ್ ಸಮಿತಿ ರಚನೆಯಾಗಿಲ್ಲ. ಕಳೆದ ಎರಡುವರೆ ವರ್ಷದಲ್ಲಿ 3 ಬಾರಿ ಅರ್ಜಿ ಸಲ್ಲಿಸಲಾಗಿದೆ. ಈ ಸಲ 1045 ಅರ್ಜಿಗಳು ಪಾಲಿಕೆ ಕಚೇರಿ ಸೇರಿ ಧೂಳು ತಿನ್ನುತ್ತಿವೆ. ಆದರೂ ಬರೀ ಪರಿಶೀಲನೆ ನಡೆಸಲಾಗುತ್ತಿದೆ ಎಂಬ ಹಾರಿಕೆ ಉತ್ತರವೇ ದೊರೆಯುತ್ತಿದೆ.
ಕರ ನಿರಾಕರಣೆಗೆ ಸಿದ್ಧತೆ:ಇದಕ್ಕೆ ಆಯುಕ್ತರು, ಮೇಯರ್, ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಎಲ್ಲರಿಗೂ ಮನವಿ ಕೊಟ್ಟಿದ್ದೇ ಆಗಿದೆ. ಆದರೂ ಸಮಿತಿ ಮಾತ್ರ ರಚನೆಯಾಗುತ್ತಿಲ್ಲ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು 3 ವಾರದೊಳಗೆ ವಾರ್ಡ್ ಸಮಿತಿ ರಚನೆ ಮಾಡಿ ಎಂದು ಪಾಲಿಕೆಗೆ ಸೂಚನೆ ಕೊಟ್ಟಿದ್ದಾರೆ. ಅದು ಮುಗಿಯಲು ಇನ್ನೆರಡು ದಿನ ಬಾಕಿಯುಳಿದಿದೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಈಗಲೂ ಮಾಡುವ ಲಕ್ಷಣಗಳು ಮಾತ್ರ ಕಾಣಿಸುತ್ತಿಲ್ಲ.
ಒಂದು ವೇಳೆ ಈಗಲೂ ಸಮಿತಿ ರಚಿಸದಿದ್ದಲ್ಲಿ ಕರ ನಿರಾಕರಣೆ ಮಾಡುವ ಮೂಲಕ ಚಳವಳಿ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆ ನಾಗರಿಕರದ್ದು.ಇನ್ನಾದರೂ ಕುಂಟು ನೆಪ ಹೇಳದೇ ವಾರ್ಡ್ ಸಮಿತಿ ರಚಿಸಬೇಕು ಎಂಬ ಒಕ್ಕೊರಲಿನ ಆಗ್ರಹ ನಾಗರಿಕರದ್ದು. ಈ ಸಲವಾದರೂ ವಾರ್ಡ್ ಸಮಿತಿ ರಚನೆಯಾದರೂ ಆಗುತ್ತದೆಯೇ? ಎಂಬುದನ್ನು ಕಾಯ್ದು ನೋಡಬೇಕಷ್ಟೇ!ವಾರ್ಡ್ ಸಮಿತಿ ರಚನೆ ಮಾಡಿ ಎಂದು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ. ಪ್ರತಿಸಲ ಬರೀ ಹಾರಿಕೆ ಉತ್ತರ ಕೊಡುವುದೇ ಆಗಿದೆ. ಇದೀಗ ವಾರ್ಡ್ ಸಮಿತಿ ರಚಿಸದಿದ್ದಲ್ಲಿ ಕರನಿರಾಕರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ವಾರ್ಡ್ ಸಮಿತಿ ಬಳಗದ ಸಂಚಾಲಕರಾದ ಲಿಂಗರಾಜ ಧಾರವಾಡಶೆಟ್ಟರ್
ಹೇಳಿದರು.