ನನ್ನ ಅವಧಿಯಲ್ಲಿ 50:50 ಅನುಪಾತ ದುರ್ಬಳಕೆ ಸುಳ್ಳು

| Published : Jul 10 2024, 12:37 AM IST

ಸಾರಾಂಶ

ಎಂಡಿಎಯಲ್ಲಿ ಬಹಳ ವರ್ಷದಿಂದ ರೈತರಿಗೆ ಪರಿಹಾರ ಕೊಡುವ ವಿಚಾರ ಗೊಂದಲದಲ್ಲಿತ್ತು. ಹಲವರು ಕೋರ್ಟ್ ಮೂಲಕ ಪರಿಹಾರಕ್ಕೆ ಬರುತ್ತಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) ನನ್ನ ಅವಧಿಯಲ್ಲಿ 50:50 ಅನುಪಾತ ದುರ್ಬಳಕೆಯಾಗಿದೆ ಎಂಬುದು ಸುಳ್ಳು. ಇಡೀ ಪ್ರಾಧಿಕಾರ ಸೇರಿ ತೀರ್ಮಾನ ಮಾಡಿರುವುದು. ನನ್ನೊಬ್ಬನಿಂದ ಏನು ಆಗಿಲ್ಲ ಎಂದು ಎಂಡಿಎ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಚ್.ವಿ. ರಾಜೀವ್ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಡಿಎಯಲ್ಲಿ ಬಹಳ ವರ್ಷದಿಂದ ರೈತರಿಗೆ ಪರಿಹಾರ ಕೊಡುವ ವಿಚಾರ ಗೊಂದಲದಲ್ಲಿತ್ತು. ಹಲವರು ಕೋರ್ಟ್ ಮೂಲಕ ಪರಿಹಾರಕ್ಕೆ ಬರುತ್ತಿದ್ದರು. ಕೋರ್ಟ್ ಕೂಡ ಭೂಸ್ವಾಧೀನ ಆಗದ ಭೂಮಿಗಳಿಗೆ 2013ರ ಕಾಯ್ದೆ ಪ್ರಕಾರ ಪರಿಹಾರ ಕೊಡುವಂತೆ ಸೂಚಿಸುತ್ತಿತ್ತು. ಆಗ ನಾವು ಹೊಸದಾಗಿ ನೋಟಿಫಿಕೇಶನ್ ಮಾಡಿ ಪರಿಹಾರ ಕೊಡಬೇಕಾಗಿತ್ತು. ಆಗ ಪ್ರಾಧಿಕಾರಕ್ಕೆ ಹೆಚ್ಚು ನಷ್ಟ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು 2020ರಲ್ಲಿ ಪ್ರಾಧಿಕಾರ 50:50 ಅನುಪಾತ ಅನುಸರಿಸಲು ನಿರ್ಣಯ ಮಾಡಿತ್ತು ಎಂದು ಹೇಳಿದರು.

ಈ ನಿರ್ಧಾರದ ಹಿಂದೆ ಪ್ರಾಧಿಕಾರಕ್ಕೆ ಆಗುವ ನಷ್ಟ ಉಳಿಸುವ ಉದ್ದೇಶ ಇತ್ತು. ನಿಯಮದಂತೆ ಪ್ರಾಧಿಕಾರ ತೀರ್ಮಾನ ಮಾಡಿ ನಡೆದುಕೊಂಡಿದೆ. ಅದನ್ನು ಜಾರಿ ಮಾಡುವ ಅಧಿಕಾರಿಗಳು ತಪ್ಪು ಮಾಡಿದ್ದರೇ ಪ್ರಾಧಿಕಾರ ಹೊಣೆಯಲ್ಲ. ಇದು ನನ್ನೊಬ್ಬನ ತೀರ್ಮಾನ ಎಂದು ಬಿಂಬಿಸಲು ಹೊರಟಿದ್ದಾರೆ. ಪ್ರಾಧಿಕಾರದ ಪ್ರತಿಯೊಬ್ಬ ಸದಸ್ಯರ ಸಲಹೆ ಪಡೆದೇ ನಿರ್ಣಯ ಮಾಡಿರುವುದು ಎಂದು ಅವರು ತಿಳಿಸಿದರು.

ಪ್ರಾಧಿಕಾರದ ನಿರ್ಣಯ

ಎಂಡಿಎ ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ ಶೇ.50 ನಿವೇಶನ ಕೊಡಲು ತೀರ್ಮಾನಿಸಲಾಯಿತು. ಈ ಸಂಬಂಧ ಎಲ್ಲಾ ಸದಸ್ಯರು ಸಲಹೆಗಳನ್ನು ಕೊಟ್ಟಿದ್ದಾರೆ. ನೂರಕ್ಕೆ ನೂರರಷ್ಟು ಪ್ರಾಧಿಕಾರದ ನಿರ್ಣಯ ಇದು ಎಂದರು.

ಭೂಮಿ ಕಳೆದುಕೊಂಡವರು ಕೋರ್ಟ್ ಗೆ ಹೋಗುತ್ತಿದ್ದರು. ಅಧಿಕಾರಿಗಳಿಗೆ ಪ್ರತಿದಿನ ಕೋರ್ಟ್ ಗೆ ಹೋಗುವುದು ಕಷ್ಟವಾಗುತ್ತಿತ್ತು. ಹೀಗಾಗಿ, ಎಲ್ಲವನ್ನೂ ಚರ್ಚಿಸಿ ಸುಂದರಮ್ಮ ಪ್ರಕರಣ, ಬೆಂಗಳೂರಿನ ಬೆಳಿಯಪ್ಪ ಹಾಗೂ ಬಿಡಿಎ ನಡುವೆ ನಡೆದ ಪ್ರಕರಣ ಹಾಗೂ ಐವರು ನ್ಯಾಯಧೀಶರ ಕೊಟ್ಟಿರುವ ತೀರ್ಪಿನ ಆದೇಶದ ಮೇಲೆ 50:50 ಅನುಪಾತದಡಿ ನಿವೇಶನ ಕೊಟ್ಟಿದ್ದೇವೆ. ಪ್ರಾಧಿಕಾರಕ್ಕೆ ಆಗುವ ನಷ್ಟವನ್ನು ತಡೆದಿದ್ದೇವೆ. ಕಾನೂನು ವ್ಯಾಪ್ತಿಯಲ್ಲಿ 50:50 ಅನುಪಾತದಡಿ ಭೂಮಿ ಕಳೆದುಕೊಂಡವರಿಗೆ ನಿವೇಶನ ಕೊಟ್ಟಿದ್ದೇವೆ. ಎಂಡಿಎ ಹಗರಣದ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಯಲಿ ಎಂದು ಅವರು ಹೇಳಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಮುಖಂಡರಾದ ಎಂ. ಶಿವಣ್ಣ, ಈಶ್ವರ್ ಚಕ್ಕಡಿ, ಶಿವಕುಮಾರ್, ಗಿರೀಶ್ ಇದ್ದರು.

ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದರೆ ನಾವು ಹೊಣೆಯಲ್ಲ

ಎಂಡಿಎಯಲ್ಲಿ ಅಕ್ರಮ ನಡೆಯುತ್ತಿತ್ತು ಎಂಬ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಅವರು, ಶಾಸಕರ ಬಳಿಗೆ ಬರುವ ಜನರು ಸಾಕಷ್ಟು ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತಾರೆ. ಎಂಡಿಎ ಪ್ರತಿ ಸಭೆಯಲ್ಲೂ 300- 400 ವಿಚಾರಗಳು ಚರ್ಚೆಯಾಗುತ್ತಿದ್ದವು. ಹಲವು ವಿಚಾರಗಳು ಒಂದೇ ವಿಚಾರದ ಮೇಲೆ ಇರುತ್ತಿದ್ದವು. ಅದಕ್ಕಾಗಿ ಈ ರೀತಿ ಆಗಿರಬಹುದು. ಎಂಡಿಎಯಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ಸಭೆಯಲ್ಲಿ ಎಲ್ಲರು ಸೇರಿ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವು. ಅದನ್ನು ಜಾರಿ ಮಾಡುವಾಗ ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದರೆ ನಾವು ಹೊಣೆಯಲ್ಲ ಎಂದು ತಿಳಿಸಿದರು.

ಸಿಎಂ ಪತ್ನಿಗೆ ನಿವೇಶನ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತ್ಯೇಕ ಪ್ರಕರಣಗಳ ಬಗ್ಗೆ ನನಗೆ ಗೊತ್ತಿಲ್ಲ. ಪಾರ್ವತಿ ಅವರ ಕೇಸ್ ನಾನು ಸ್ಟಡಿ ಮಾಡಿಲ್ಲ ಎಂದರು.