ಸನಾತನ ಧರ್ಮ ವ್ಯವಸ್ಥೆ ಧಿಕ್ಕರಿಸಿ ಸಮಾನತೆ ಕ್ರಾಂತಿ ಮಾಡಿದ ಬಸವಣ್ಣ

| Published : May 14 2024, 01:04 AM IST

ಸಾರಾಂಶ

12ನೇ ಶತಮಾನದಲ್ಲಿ ಸಮಾಜದ ಹೊಲಸು ತೊಳೆಯಲು ಬಸವಣ್ಣ ಜನಿಸಿದರು. ಇವತ್ತೂ ಬೇರೆ ಬೇರೆ ರೂಪದಲ್ಲಿ ಶೋಷಣೆಗಳು ನಡೆಯುತ್ತಿದ್ದು ಬಸವಣ್ಣನವರ ವಿಚಾರಧಾರೆಗಳ ಮೂಲಕ ಸಮಾಜ ಮತ್ತೊಮ್ಮೆ ಶುದ್ಧಿಯಾಗಬೇಕಿದೆ.

ಧಾರವಾಡ:

ಸನಾತನ ಧರ್ಮದ ವ್ಯವಸ್ಥೆ ಧಿಕ್ಕರಿಸಿ ಸಮಾನತೆಯ ಕ್ರಾಂತಿ ಮಾಡಿದವರು ಬಸವಣ್ಣನವರು. ತಲೆ-ತಲೆಮಾರಿನಿಂದ ಜಾತಿ ವ್ಯವಸ್ಥೆ ತೊಡೆದು ಹಾಕಿ ಸಮ ಸಮಾಜ ಕಟ್ಟುವಲ್ಲಿ ಬಸವಣ್ಣನವರ ಪಾತ್ರ ಸಾಕಷ್ಟಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಗೌರವ ಸಲಹೆಗಾರರು, ನಾಡೋಜ ಗೊ.ರು. ಚನ್ನಬಸಪ್ಪ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠವು ಬಸವೇಶ್ವರ ಜಯಂತಿ ಅಂಗವಾಗಿ ಕವಿವಿ ಸುವರ್ಣ ಮಹೋತ್ಸವ ಭವನದಲ್ಲಿ ಮೂರು ದಿನಗಳ ಸಾಂಸ್ಕೃತಿಕ ನಾಯಕ ಕುರಿತು ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಮಾಜದ ಹೊಲಸು ತೊಳೆಯಲು ಬಸವಣ್ಣ ಜನಿಸಿದರು. ಇವತ್ತೂ ಬೇರೆ ಬೇರೆ ರೂಪದಲ್ಲಿ ಶೋಷಣೆಗಳು ನಡೆಯುತ್ತಿದ್ದು ಬಸವಣ್ಣನವರ ವಿಚಾರಧಾರೆಗಳ ಮೂಲಕ ಸಮಾಜ ಮತ್ತೊಮ್ಮೆ ಶುದ್ಧಿಯಾಗಬೇಕಿದೆ ಎಂದರು.

ಸ್ವತಂತ್ರ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಯಶಸ್ವಿ ಆಗಬೇಕಾದರೆ ಪ್ರಸ್ತುತ ಶರಣರ ವಚನ ಸಾಹಿತ್ಯಗಳ ಪ್ರಸ್ತುತತೆ ಸಾಕಷ್ಟಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಬಸವಣ್ಣನವರನ್ನು ಮತ್ತಷ್ಟು ಹೆಚ್ಚಾಗಿ ಪರಿಚಯಿಸುವ ಕಾರ್ಯವಾಗಬೇಕಿದೆ. ಬಸವಣ್ಣ ಭೌತಿಕವಾಗಿ ನಮ್ಮ ಜತೆಗಿಲ್ಲ. ಆದರೆ, ಅವರು ಹಾಕಿ‌ ಕೊಟ್ಟ ತತ್ವಗಳು ನಮ್ಮ‌ ಮುಂದಿವೆ. ಅವುಗಳೊಂದಿಗೆ ನಾವು ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣ ಪ್ರಭು ಸ್ವಾಮಿಜಿ, ಬಸವಣ್ಣನವರ ವಿಚಾರಧಾರೆಗಳು ಕೇವಲ ಶಬ್ದವೋ, ಕಾರ್ಯರೂಪದ ಪ್ರವೃತ್ತಿಯ ಒಂದು ವ್ಯವಸ್ಥೆಯೋ ಎಂದು ಚಿಂತನೆ ಮಾಡಬೇಕಿದೆ. 12ನೇ ಶತಮಾನದಿಂದ ಈ ವರೆಗೂ ಬಸವಣ್ಣನವರ ಚಿಂತನೆಗಳು ಕೇವಲ ಶಬ್ದವಾಗಿ ನಿಂತಿದೆಯೋ ಅಥವಾ ಧರ್ಮ, ಭಾವದಿಂದ ಕಾರ್ಯರೂಪದ ಪ್ರವೃತ್ತಿಯಲ್ಲಿ ಹೋಗುತ್ತಿದೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಬಸವಣ್ಣನವರ ಆಶಯ, ಗುರಿ ಏನಿತ್ತು, ಅವರ ಚಿಂತನೆ ಯಾವ ಕಾರಣಕ್ಕಾಗಿ ಸಮಾಜದಲ್ಲಿ ಒಡಮೂಡಿತು ಎಂದು ಮುಗ್ಧತೆಯಿಂದ ವಿಚಾರ ಮಾಡಬೇಕಿದೆ. ಬಸವಣ್ಣನವರನ್ನು ಗರ್ಭಗುಡಿ ಸಂಸ್ಕೃತಿಯಿಂದ ಹೊರತರಬೇಕು. ಆಗ ಎಂದೆಂದಿಗೂ ಬಸವಣ್ಣ ಪ್ರಸ್ತುತರಾಗಿ ಉಳಿಯುತ್ತಾರೆ ಎಂದು ಹೇಳಿದರು.

ಆನ್‌ಲೈನ್ ಮೂಲಕ‌ ಕಾರ್ಯಕ್ರಮ ಉದ್ಘಾಟಿಸಿದ ಅಮೇರಿಕಾದ ಡಿಕ್ಸ್ ಹಿಲ್ಸ್ ‌ನ್ಯೂಯಾರ್ಕನ ರವಿಶಂಕರ ಬೋಪಲಾಪೂರ, ಪ್ರಜಾಪ್ರಭುತ್ವ, ಸಮಾನತೆ ಮಂತ್ರವನ್ನು ಬಸವೇಶ್ವರರು ನೀಡಿದ್ದಾರೆ. ಮುಂದಿನ ಪೀಳಿಗೆಗೆ ಅವರ ವಿಚಾರ ಮುಟ್ಟಿಸುವಲ್ಲಿ ಕವಿವಿಯಲ್ಲಿ ಬಸವೇಶ್ವರ ಅಧ್ಯಯನ ಪೀಠ ಮತ್ತಷ್ಟು ಕಾರ್ಯ ಮಾಡಲಿ ಎಂದು ಹಾರೈಸಿದರು.

ಉತ್ತರ ಅಮೇರಿಕಾದ ಬಸವ ಕೇಂದ್ರದ ಮುಖ್ಯಸ್ಥ ಡಾ‌. ಸ್ಟೀವ್ ರೋಚ್ ಆನ್ ಲೈನ್ ಮೂಲಕ ಮಾತನಾಡಿದರು. ಇದೇ ವೇಳೆ ಕನ್ನಡಪ್ರಭ ಪತ್ರಿಕೆ ಬಸವ ಜಯಂತಿ ನಿಮಿತ್ತ ಹೊರತಂದ ಬಸವ ಪ್ರಭ ವಿಶೇಷ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರಂತಹ ದಾರ್ಶನಿಕರ ಚಿಂತನೆಗಳನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯವಲ್ಲಿ ಕವಿವಿಯಲ್ಲಿ ಸ್ಥಾಪನೆ ಮಾಡಿದ ಅನೇಕ ಪೀಠಗಳು ಉತ್ತಮ ‌ಕೆಲಸ‌ ಮಾಡುತ್ತಿವೆ ಎಂದರು.

ಕುಲಸಚಿವ ಡಾ. ಎ. ಚೆನ್ನಪ್ಪ, ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಬಸವೇಶ್ವರ ಪೀಠದ ಸಂಯೋಜಕ ಡಾ. ಸಿ.ಎಂ. ಕುಂದಗೋಳ, ಹಂಪಿ ವಿವಿ ವಿಶ್ರಾಂತ ಕುಲಪತಿ ‌ಡಾ. ಮಲ್ಲಿಕಾ ಘಂಟಿ, ಡಾ. ವೀರಣ್ಣ ರಾಜೂರ, ಶೈಲಜಾ ರಾಜಕುಮಾರ, ಡಾ. ಸುಪ್ರಿಯಾ ಮಲಶೆಟ್ಟಿ ಇದ್ದರು.ಕರ್ನಾಟಕ ವಿವಿ ಸೇರಿದಂತೆ ಬೇರೇ ಬೇರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಅಧ್ಯಯನ ಪೀಠಗಳಲ್ಲಿ ಅವರವರ ಸಮಾಜದವರನ್ನೇ ಸಂಯೋಜಕರನ್ನಾಗಿ ಮಾಡುವುದರಿಂದ ಜಾತಿ ಪೀಠಗಳಾಗಿ ವಿಜೃಂಜಿಸುವುಂತಾಗಿದೆ. ಶಿಕ್ಷಣದಲ್ಲಿ ಈ ರೀತಿ ಜಾತಿ ಗಟ್ಟಿಗೊಳಿಸುವ ಕಾರ್ಯವಾಗಬಾರದು. ಬೇರೆ ಬೇರೆ ಸಮುದಾಯದ ತಜ್ಞರನ್ನು ಸಂಯೋಜಕರನ್ನಾಗಿ ಮಾಡಿದಾಗ ಅಧ್ಯಯನ ಪೀಠಗಳು ಮತ್ತಷ್ಟು ಗಟ್ಟಿಗೊಳ್ಳುತ್ತವೆ ಎಂದು ನಿಜಗುಣಪ್ರಭು ಸ್ವಾಮೀಜಿ ಹೇಳಿದರು.