ಹಗರಿಬೊಮ್ಮನಹಳ್ಳಿ: ೧೨ನೇ ಶತಮಾನದಲ್ಲಿ ಸಾಮಾಜಿಕ ಪಿಡುಗುಗಳ ಕುರಿತು ವಚನಗಳ ಮೂಲಕ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದ್ದ ಬಸವಣ್ಣನವರು ಪ್ರತಿಪಾದಿಸಿದ ಸಮಾನತೆ, ಕಾಯಕ ಪ್ರಜ್ಞೆಯಂತಹ ತತ್ವ ಸಿದ್ಧಾಂತಗಳು ಈಗ ನೇಪಥ್ಯಕ್ಕೆ ಸೇರಿವೆ ಎಂದು ಶಾಸಕ ಕೆ.ನೇಮರಾಜ್ ನಾಯ್ಕ್ ಖೇದ ವ್ಯಕ್ತಪಡಿಸಿದರು.
ಪಟ್ಟಣದ ಹಗರಿ ಆಂಜನೇಯ ದೇಗುಲದ ಬಳಿ ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾ ಸಹಯೋಗದಲ್ಲಿ ತಾಲೂಕು ಆಡಳಿತ ಸೋಮವಾರ ಆಯೋಜಿಸಿದ್ದ ಬಸವೇಶ್ವರ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಸವಣ್ಣವರು ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ಒದಗಿಸಿದ್ದರು. ಅವರ ಹಾದಿಯಲ್ಲಿಯೇ ನಡೆಯುತ್ತಿರುವ ಪ್ರಧಾನಿ ಮೋದಿ ಮಹಿಳಾ ಮೀಸಲಾತಿಗೆ ಪ್ರಯತ್ನಿಸಿದರೆ ವಿರೋಧ ಪಕ್ಷದವರು ಕಲ್ಲು ಹಾಕಿದರು ಎಂದು ಬೇಸರಿಸಿದರು.
ಬಸವಣ್ಣವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ದೇಶದಿಂದ ಜಾತಿ, ಬೇಧ, ಅಸಮಾನತೆ ಮತ್ತು ಲಿಂಗಬೇಧ ಶಾಶ್ವತವಾಗಿ ಮರೆಯಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಬಸವ ಜಯಂತಿ ಸಮಿತಿಯ ಅಧ್ಯಕ್ಷ ಬಾದಾಮಿ ಮೃತ್ಯುಂಜಯ ಮಾತನಾಡಿ, ಬಸವಣ್ಣನವರು ಎಲ್ಲ ಸಮುದಾಯದವರ ವಿಶ್ವಾಸ ಪಡೆದು ಮಾರ್ಗದರ್ಶನ ನೀಡಿದ ಪರಿಣಾಮವಾಗಿ ವಿಶ್ವಗುರುವಾದರು ಎಂದು ಬಣ್ಣಿಸಿದರು.
ಇದಕ್ಕೂ ಮುನ್ನ ಶಾಸಕರು ಬಸವೇಶ್ವರ ವೃತ್ತದಲ್ಲಿ ₹೬೫ ಲಕ್ಷ ಅನುದಾನ ಒದಗಿಸಿ ಆಧುನೀಕರಣಗೊಳಿಸಿದ್ದ ಬಸವಣ್ಣನವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿದರು. ಬಸವಣ್ಣನವರ ಜಯಂತಿ ಅಂಗವಾಗಿ ರಾಮನಗರದ ಈಶ್ವರ ದೇಗುಲದಿಂದ ಬಸವೇಶ್ವರ ವೃತ್ತದವರೆಗೂ ಬೆಳ್ಳಿಯ ಸಾರೋಟಿನಲ್ಲಿ ಜಾನಪದ ವಾದ್ಯಗಳೊಂದಿಗೆ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ನೆರವೇರಿಸಲಾಯಿತು.
ನಂದಿಪುರದ ಡಾ.ಮಹೇಶ್ವರ ಶ್ರೀಗಳು, ಹಾಲಸಿದ್ದೇಶ್ವರ ಶ್ರೀಗಳು, ತೋಂಟದಾರ್ಯ ಮಠದ ಮಹಾಂತ ಶ್ರೀಗಳು, ಶಾಖಾ ಗವಿ ಮಠದ ಮರಿಶಾಂತವೀರ ಶ್ರೀ, ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ ಸಾನಿಧ್ಯ ವಹಿಸಿದ್ದರು.
ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಗೌಡ್, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಸಿದ್ದರಾಜು, ಪುರಸಭೆ ಸದಸ್ಯೆ ಆರ್.ಕಮಲಮ್ಮ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಹಾಲ್ದಾಳ್ ವಿಜಯಕುಮಾರ್, ಕಿನ್ನಾಳ್ ಸುಭಾಷ್, ಚಿತ್ತವಾಡಗಿ ಪ್ರಕಾಶ್, ಶ್ರೀಶೈಲ, ಶಿವರುದ್ರಪ್ಪ, ರಾಜುಪಾಟೀಲ್, ಬಾದಾಮಿ ನಟರಾಜ, ಇಕ್ಕೇರಿ ಕೊಟ್ರೇಶ್, ಕನಕಪ್ಪ ಉಪ್ಪಾರ, ತಹಶೀಲ್ದಾರ ಆರ್.ಕವಿತಾ, ಉಪತಹಶೀಲ್ದಾರ ಶಿವಕುಮಾರ ಗೌಡ, ತಾಪಂ ಇಒ ಪಿ.ಕೆ. ವಿಶ್ವನಾಥ ಇದ್ದರು.