ಹುಬ್ಬಳ್ಳಿ:
ಇಂದು ಬಸವಣ್ಣನ ತತ್ವಾದರ್ಶಗಳು ಕೇವಲ ಪ್ರವಚನಕ್ಕೆ ಸೀಮಿತವಾಗಿವೆಯೇ ಹೊರತು ಆಚರಣೆಗೆ ಬರುತ್ತಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಬೇಸರ ವ್ಯಕ್ತಪಡಿಸಿದರು.ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಸೋಮವಾರ ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿರುವ ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವಣ್ಣನ ತತ್ವಾದರ್ಶ ಆಚರಿಸಿದರೆ ವಿಶ್ವ ಮಾನವ ಧರ್ಮ ಆಗುವುದರಲ್ಲಿ ಅನುಮಾನವಿಲ್ಲ ಎಂದರು.
12ನೇ ಶತಮಾನದಲ್ಲಿ ಬಸವಣ್ಣ ಮಾನವ ಮಾನವರನ್ನಾಗಿ ಕಾಣಬೇಕು ಎಂಬ ಹೇಳಿ ಸರ್ವ ಜನಾಂಗ ಒಂದು ಎಂಬ ನಿಯಮ ಪಾಲಿಸಿ ಅದರಂತೆ ನಡೆದರು. ಅಂದು ಮನುವಾದಿಗಳು ಸೃಷ್ಟಿಸಿದ ಜಾತಿ ವ್ಯವಸ್ಥೆಗೆ ಜನರು ಬೇಸತ್ತಿದ್ದರು. ಹಲವು ಜನಾಂಗದ ಬದುಕು ನಿಜಕ್ಕೂ ದುಸ್ತರವಾಗಿತ್ತು. ಅಂತಹ ಜಾತಿ ವ್ಯವಸ್ಥೆಯನ್ನು ತೆಗೆದು ಹಾಕಲು ಬಸವಣ್ಣನ ಶ್ರಮಿಸಿದ್ದರು ಎಂದರು.ಸ್ವಾತಂತ್ರ್ಯ ದಿನದಂತೆ ಇಡೀ ವಿಶ್ವದಲ್ಲಿ ಬಸವಣ್ಣನವರ ದಿನ ಆಚರಿಸಲಾಗುತ್ತಿದೆ. ಆದರೆ, ದೇಶದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಉಳಿದುಕೊಂಡಿರುವುದು ನೋವಿನ ಸಂಗತಿ. ಮನುವಾದಿಗಳು ಹಲವೆಡೆ ದೇವಸ್ಥಾನದಲ್ಲಿ ದಲಿತರಿಗೆ ಅವಕಾಶ ನೀಡುತ್ತಿಲ್ಲ. ಇಂತಹ ಪದ್ಧತಿ ನಿಲ್ಲಬೇಕು ಎಂದು ಒತ್ತಾಯಿಸಿದರು.
ಬಸವಣ್ಣನವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಂಸ್ಕೃತಿಕ ನಾಯಕ ಎಂದು ಕರೆದಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಅವರ ಭಾವಚಿತ್ರ ಹಾಕುವಂತೆ ಆದೇಶಿಸಿ ಅನುದಿನವೂ ಅವರನ್ನು ನೆನೆಯುವಂತೆ ಮಾಡಿದ್ದಾರೆ ಎಂದರು.
ಮದ್ಯದ ಬೆಲೆ ಏರಿಕೆ ಇಲ್ಲ:
ಸರ್ಕಾರದ ಮುಂದೆ ಮದ್ಯದ ಬೆಲೆ ಏರಿಸುವ ಪ್ರಸ್ತಾಪವಿಲ್ಲ ಎಂದ ತಿಮ್ಮಾಪುರ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ರಾಹುಲ್ ಗಾಂಧಿ ಅವರಿಗೆ ರಾಜ್ಯದ ಸಂಪೂರ್ಣ ಮಾಹಿತಿ ಇದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.