ಸಾರಾಂಶ
-ಹೆಚ್ಚು ಸದಸ್ಯರ ನೋಂದಾಯಿಸಿ
-ದೇಶಾದ್ಯಂತ 11 ಕೋಟಿ ಸದಸ್ಯರನ್ನು ಹೊಂದಿರುವ ಬಿಜೆಪಿ: ರಾಜ್ಯ ಒಬಿಸಿ ಮೋರ್ಚಾ ಕೋಶಾಧ್ಯಕ್ಷ ಕನ್ನಡಪ್ರಭ ವಾರ್ತೆ ರಾಮನಗರನಗರದ ಸರ್ಕಾರಿ ರೇಷ್ಮೆ ಮಾರುಕಟ್ಟೆ ಮುಂಭಾಗ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶನಿವಾರ ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕೋಶಾಧ್ಯಕ್ಷ ಎ.ಎಚ್.ಬಸವರಾಜು ಚಾಲನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಇಡೀ ದೇಶದಲ್ಲಿ 11 ಕೋಟಿ ಸದಸ್ಯರನ್ನು ಹೊಂದಿದೆ. ಈ ವರ್ಷವೂ ಸದಸ್ಯತ್ವ ಅಭಿಯಾನ ಆಯೋಜಿಸಲಾಗಿದ್ದು, ನೂತನ ಸದಸ್ಯರನ್ನು ನೋಂದಾಯಿಸಲಾಗುತ್ತಿದೆ ಎಂದು ತಿಳಿಸಿದರು.2019 ರಿಂದ 2023ರ ಅವಧಿಯಲ್ಲಿ ರಾಜ್ಯದಲ್ಲಿ ಪಕ್ಷದ ಸದಸ್ಯತ್ವ ಒಂದು ಕೋಟಿ ದಾಟಿತ್ತು. ಈ ವರ್ಷದ ನೂತನ ಸದಸ್ಯತ್ವ ಅಭಿಯಾನದಲ್ಲಿ 1.50 ಕೋಟಿ ಜನರ ಸದಸ್ಯತ್ವದ ಗುರಿ ನಿಗದಿ ಪಡಿಸಿದೆ. ಈ ಗುರಿ ತಲುಪುವ ಸಂಬಂಧ ಪಕ್ಷವೂ ವಿವಿಧ ಯೋಜನೆಗಳನ್ನು ರೂಪಿಸಿದೆ. ಆ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹೀಗಾಗಿ ಜನರ ಬಳಿ ನೇರವಾಗಿ ತೆರಳಿ ಮನವಿ ಮಾಡಿಕೊಂಡು ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸದಸ್ಯತ್ವ ನೋಂದಣಿ ಹೆಚ್ಚಿಸುವ ಸಂಬಂಧ ಪಕ್ಷವೂ ನನ್ನನ್ನು ಜಿಲ್ಲೆಗೆ ನಿಯೋಜಿಸಿದೆ. ಈಗ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಸದಸ್ಯತ್ವ ನೋಂದಣಿ ಗುರಿ ಇಟ್ಟುಕೊಳ್ಳಲಾಗಿದೆ. ಈ ಪೈಕಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕನಿಷ್ಠ 25 ಸಾವಿರ ನೋಂದಣಿ ಗುರಿ ಹೊಂದಲಾಗಿದೆ ಎಂದರು.ರಾಜ್ಯದಲ್ಲಿ ಪಕ್ಷದ ನೋಂದಣಿ 1.5 ಕೋಟಿಯ ಗುರಿ ಮೀರಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ರಾಜ್ಯದ ಪ್ರತಿ ತಾಲೂಕಿನಲ್ಲಿ ಶೇ.50ಕ್ಕಿಂತ ಹೆಚ್ಚು ಹಿಂದುಳಿದ ವರ್ಗಗಳ ಸಮಾಜ ಇದೆ. ಹಾಗಾಗಿ ಇದನ್ನೇ ಗುರಿಯಾಗಿಸಿಕಕೊಂಡು ಕೆಲಸ ಮಾಡಲಾಗುತ್ತಿದೆ. ಇಡೀ ರಾಜ್ಯದಲ್ಲಿ 75 ಲಕ್ಷಕ್ಕೂ ಅಧಿಕ ಸದಸ್ಯರನ್ನು ಒಬಿಸಿ ಸಮುದಾಯದಿಂದಲೇ ನೋಂದಾಯಿಸಲು ತೀರ್ಮಾನಿಸಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಸಂಚಾಲಕ ನಾಗರಾಜ್ , ಸಹ ಸಂಚಾಲಕ ಪುಟ್ಟಮಾದಯ್ಯ, ಜಿಲ್ಲಾ ಉಪಾದ್ಯಕ್ಷೆ ರಾಧಾ ಹರೀಶ್, ವೆಂಕಟರಣಸ್ವಾಮಿ, ಪುಟ್ಟರಾಜು, ಕಾರ್ಯದರ್ಶಿಗಳಾದ ಮಾರಪ್ಪ, ಮಂಜು, ಮುಖಂಡರಾದ ನರೇಂದ್ರ, ರುದ್ರದೇವರು, ಕಾಳಯ್ಯ, ಸುರೇಶ್ ಮತ್ತಿತರರಿದ್ದರು.