Basaveshwara chariot festival, milked amidst devotion, is auspicious

ಕನ್ನಡಪ್ರಭ ವಾರ್ತೆ ಗದಗ

ತಾಲೂಕಿನ ಲಕ್ಕುಂಡಿಯ ಐತಿಹಾಸಿಕ ಹಾಲುಗೊಂಡ ಬಸವೇಶ್ವರ ರಥೋತ್ಸವವು ಶ್ರಾವಣ ಕಡೆಯ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಗ್ರಾಮದ ಬಜಾರ್ ರಸ್ತೆಯಲ್ಲಿ ಸಾಗಿದ ರಥೋತ್ಸವಕ್ಕೆ ಹರ್ಲಾಪುರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಮಹಾಸ್ವಾಮೀಜಿ ಧಾರ್ಮಿಕ ವಿಧಿವಿಧಾನ ನೆರವೇರಿಸಿ ಚಾಲನೆ ನೀಡಿದರು. ಭಕ್ತರು ಹರ ಹರ ಮಹಾದೇವ, ಹಾಲುಗೊಂಡ ಬಸವೇಶ್ವರ ಮಹಾರಾಜಕೀ ಜೈ ಘೋಷಣೆಗಳೊಂದಿಗೆ ಉತ್ತತ್ತಿ ಸಮರ್ಪಿಸಿ ತೇರನ್ನು ಎಳೆದರು. ಡೊಳ್ಳು ಮೇಳ ಹಾಗೂ ಬಾಜಾ ಭಜಂತ್ರಿ ಸೇರಿದಂತೆ ಜಾನಪದ ಕಲಾಮೇಳಗಳು ರಥೋತ್ಸವಕ್ಕೆ ಮೆರುಗು ನೀಡಿದವು. ತೇರು ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಿಂದ ವಿರೂಪಾಕ್ಷೇಶ್ವರ ದೇಗುಲದವರೆಗೆ ಸಾಗಿತು. ರಥೋತ್ಸವಕ್ಕೂ ಮುನ್ನ ಶೇಡದವರ ಕುಟುಂಬದಿಂದ ದೇವಸ್ಥಾನಕ್ಕೆ ಸಾಂಪ್ರದಾಯಿಕ ನೈವೇದ್ಯ ಅರ್ಪಿಸಲಾಯಿತು. ನಂತರ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ತಂದು ರಥಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಲಾಯಿತು. ಬೆಳಗ್ಗೆ ಹೂಗಳಿಂದ ಅಲಂಕೃತಗೊಂಡಿದ್ದ ಬಸವೇಶ್ವರ ಮೂರ್ತಿಗೆ ಶರಣಯ್ಯ ಪತ್ರಿಮಠ ನೇತೃತ್ವದಲ್ಲಿ ರುದ್ರಾಭಿಷೇಕ ಜರುಗಿತು. ಸಿದ್ಧ ಸಮಾಧಿ ಯೋಗ ಸಾಧಕರ ಬಳಗ ಹಾಗೂ ಅನ್ನಪೂರ್ಣೇಶ್ವರಿ ಸತ್ಸಂಗ ಸಮಿತಿಯಿಂದ ರಾಘವೇಂದ್ರ ಕೊಪ್ಪಳ ನೇತೃತ್ವದಲ್ಲಿ ಮಹಾ ಮೃತ್ಯುಂಜಯ ಹೋಮ ಹಾಗೂ ಅನ್ನಸಂತರ್ಪಣೆ ನೆರವೇರಿತು.ಬಸವೇಶ್ವರ ಜಾತ್ರೆ; 110 ಕೆಜಿ ಬೆಲ್ಲದ ತುಲಾಭಾರ ಸೇವೆ:

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಸೋಮವಾರ ಜರುಗಿದ ಹಾಲುಗೊಂಡ ಬಸವೇಶ್ವರ ರಥೋತ್ಸವದ ಅಂಗವಾಗಿ ಅನ್ನಸಂತರ್ಪಣೆಗಾಗಿ ಗ್ರಾಮದ ಭಕ್ತ ಸುದರ್ಶನ ಶ್ರೀನಿವಾಸ ಗುಜುಲಾ ಅವರು 110 ಕೆಜಿ ಬೆಲ್ಲದ ತುಲಾಭಾರ ಸೇವೆ ನೆರವೇರಿಸಿ ದೇಣಿಗೆ ನೀಡಿದರು. ಹಾಲುಗೊಂಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿ ಈ ಸೇವೆ ಸಮರ್ಪಿಸಲಾಯಿತು. ಈ ಸಂದರ್ಭ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.