ಹೆಬ್ಬಾಳು ಕೊಪ್ಪಲು ಗ್ರಾಮದಲ್ಲಿ ಬಸವೇಶ್ವರ, ಓಕುಳಿ ಹಬ್ಬ ವಿಜೃಂಭಣೆಯಿಂದ ಆಚರಣೆ

| Published : May 28 2024, 01:05 AM IST

ಹೆಬ್ಬಾಳು ಕೊಪ್ಪಲು ಗ್ರಾಮದಲ್ಲಿ ಬಸವೇಶ್ವರ, ಓಕುಳಿ ಹಬ್ಬ ವಿಜೃಂಭಣೆಯಿಂದ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ಸಮೀಪವೇ ಹರಿಯುವ ಕಾವೇರಿ ನಾಲೆಯಿಂದ ಗ್ರಾಮದ ಮಹಿಳೆಯರು, ಹೆಣ್ಣುಮಕ್ಕಳು ವಿವಿಧ ಕಲಾ ತಂಡದೊಂದಿಗೆ ತೆರಳಿ ಕಳಸಗಳನ್ನು ತರಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ ತಾಲೂಕಿನ ಹೆಬ್ಬಾಳು ಕೊಪ್ಪಲು ಗ್ರಾಮದಲ್ಲಿ ಗ್ರಾಮದೇವತೆ ಬಸವೇಶ್ವರ ಹಬ್ಬ ಮತ್ತು ಓಕುಳಿ ಹಬ್ಬವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಿತು.ಎರಡು ದಿನಗಳ ಕಾಲ ಗ್ರಾಮದಲ್ಲಿ ನಡೆದ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು, ಎರಡನೇ ದಿನವಾದ ಸೋಮವಾರ ಗ್ರಾಮದಲ್ಲಿರುವ 200 ವರ್ಷಗಳ ಇತಿಹಾಸವಿರುವ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಹೋಮ ಹವನಗಳು ನಡೆದವು.ನಂತರ ಗ್ರಾಮದ ಸಮೀಪವೇ ಹರಿಯುವ ಕಾವೇರಿ ನಾಲೆಯಿಂದ ಗ್ರಾಮದ ಮಹಿಳೆಯರು, ಹೆಣ್ಣುಮಕ್ಕಳು ವಿವಿಧ ಕಲಾ ತಂಡದೊಂದಿಗೆ ತೆರಳಿ ಕಳಸಗಳನ್ನು ತರಲಾಯಿತು. ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಗ್ರಾಮಸ್ಥರು ಕಳಸಗಳನ್ನು ವೀಕ್ಷಿಸಿದರು. ನಂತರ ದೇವಾಲಯದ ಮುಂದಿರುವ ಓಕಳಿಗೆ ಕಳಶಗಳನ್ನು ತಂದು ಅದರಲ್ಲಿ ನೀರನ್ನು ಹಾಕಲಾಯಿತು.ಓಕಳಿಯ ಬಳಿಕ ಕೀಲು ಕುಣಿತ, ವೀರಗಾಸೆ, ಗಾರುಡಿ ಗೊಂಬೆ, ದೇವರ ಕುಣಿತ, ಮರಗಾಲು ಕುಣಿತ, ಮಂಗಳವಾದ್ಯ, ತಮಟೆ, ನಗಾರಿ, ಮಂಗಳಮುಖಿಯರ ನೃತ್ಯ, ಅರೇಹಳ್ಳಿ ಯುವಕರ ವೀರಗಾಸೆ ತಂಡ ಸೇರಿದಂತೆ ಹಲವಾರು ಜಾನಪದ ಕಲಾ ತಂಡಗಳು ಮನಸೋರೆಗೊಂಡವು. ವಿವಿಧ ವೇಷ ಭೂಷಣ ತೊಟ್ಟು ವಚನಗಳನ್ನು ಹಾಡಿನ ಮೂಲಕ ಹೇಳುತ್ತಾ ವಿವಿಧ ಕಲಾವಿದರು ನೃತ್ಯ ಮಾಡಿದರು. ಡಿಜೆ ಸದ್ದಿಗೆ ಗ್ರಾಮದ ಯುವಕರು ಕುಣಿದು ಕುಪ್ಪಳಿಸಿದರು. ಹೆಣ್ಣುಮಕ್ಕಳು ಸಹ ಹೆಜ್ಜೆ ಹಾಕಿ ಗಮನ ಸೆಳೆದರು. ಹಬ್ಬದ ಅಂಗವಾಗಿ ದೇವಾಲಯವನ್ನು ಮತ್ತು ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ಸಹ ಪರಸ್ಪರ ಬಣ್ಣ ಅಚ್ಚಿಕೊಂಡು ಸಂಭ್ರಮಿಸಿದರು.