ಸಾರಾಂಶ
ಬಳ್ಳಾರಿ: ತಾಲೂಕಿನ ಕುಡಿತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ಕೇಂದ್ರದಲ್ಲಿ (ಬಿಟಿಪಿಎಸ್) ವಿಶ್ವಗುರು ಬಸವೇಶ್ವರ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವಣ್ಣನ ವಚನಗಳಲ್ಲಿ ಜೀವನ ಮೌಲ್ಯಗಳು ಕುರಿತು ಮಾತನಾಡಿದ ಲೇಖಕ ಎ.ಎಂ.ಪಿ ವೀರೇಶಸ್ವಾಮಿ, ಶರಣರ ವಚನಗಳು ಮಾನವನ ಬದುಕಿನ ಸಂಜೀವಿನಿಯಂತಿವೆ. ಬಸವಣ್ಣನ ವಚನಗಳಲ್ಲಿ ಬದುಕಿನ ಮೌಲ್ಯಗಳ ಭಂಡಾರವೇ ಅಡಗಿದೆ. ಮೊಗೆದಷ್ಟು ಒಂದೊಂದು ವಚನಗಳು ಮುತ್ತು ರತ್ನಗಳಂತೆ ಗೋಚರಿಸುತ್ತವೆ. ಕಾಯಕ ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದವರು ಶರಣರು. ಅವರ ವಚನಗಳ ಸಾರವನ್ನು ನಾವು ಬರೀ ಓದಿದರೆ ಸಾಲದು ಅವುಗಳನ್ನು ನಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿ ಕೊಂಡಾಗ ಶರಣರ ವಚನಗಳಿಗೆ ಅರ್ಥ ಬರುತ್ತದೆ ಎಂದರು.ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾಜವನ್ನು ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಶರಣರ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎನಿಸಿವೆ. ಜನಭಾಷೆಗೆ ಸ್ಪಂದಿಸಿದ ಬಸವಣ್ಣನವರು, ಕನ್ನಡದಲ್ಲಿಯೇ ವಚನಗಳು ಬರೆದು ಎಲ್ಲ ಸಮುದಾಯಕ್ಕೆ ತಲುಪಿಸುವ ಕೆಲಸ ಮಾಡಿದರು. ಆಡು ಭಾಷೆಯಲ್ಲಿರುವ ವಚನಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗಬಲ್ಲವು. ಬಸವಣ್ಣನವರ ಸೈದ್ಧಾಂತಿಕ ನಿಲುವು ಹಾಗೂ ಅವರ ಕಾಯಕತತ್ವದ ಬದ್ಧತೆ ಜನಸಮುದಾಯದ ತಿಳಿವಳಿಕೆಗೆ ಹೊಸ ತಿರುವು ನೀಡಿವೆ. ಕನ್ನಡವನ್ನು ಕಾಪಾಡುವ ನೆಲೆಯಲ್ಲೂ ವಚನಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಇದೇ ವೇಳೆ ಉಪನ್ಯಾಸಕ ಬಿಟಿಪಿಎಸ್‌ನ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ರಾಜು ಬಿ.ಟಿ. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಿಟಿಪಿಎಸ್ ಪ್ರಭಾರ ಮುಖ್ಯ ಅಭಿಯಂತರರಾದ (ಇಂಧನ ನಿರ್ವಹಣೆ) ಮೋಹನ್ ರಾಜು ಜಿ, ಅಶೋಕಕುಮಾರ್, ಉಪ ಪ್ರಧಾನ ಪ್ರಬಂಧಕ (ಹಣಕಾಸು) ಶಿವಲಾಲ್ ಜಿ. ನಾಯಕ್, ವೈ.ಬಿ. ಹಾಲಬಾವಿ, ಬಸವ ಬಳಗದ ಅಧ್ಯಕ್ಷ ಬಿಟಿಪಿಎಸ್‌ನ ಜಿ.ಕರಿಬಸಪ್ಪ ಹಾಗೂ ರುದ್ರೇಶ್ ಉಪಸ್ಥಿತರಿದ್ದರು. ಇದೇ ವೇಳೆ ಎ.ಎಂ.ಪಿ. ವೀರೇಶ ಸ್ವಾಮಿ ಅವರನ್ನು ಬಸವಬಳಗದಿಂದ ಸನ್ಮಾನಿಸಲಾಯಿತು.
ಕರ್ನಾಟಕ ವಿದ್ಯುತ್ ನಿಗಮದ ಬಳ್ಳಾರಿ ಶಾಖೋತ್ಪನ್ನ ಕೇಂದ್ರ (ಬಿಟಿಪಿಎಸ್) ಹಾಗೂ ಬಸವ ಬಳಗದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಟಿಪಿಎಸ್ ನೌಕರರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.