ಸಾರಾಂಶ
- ಜನತಾ ಬಜಾರ್‌ನಲ್ಲಿ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಇಲಾಖೆ ಉಪನಿರ್ದೇಶಕ ಕೆ.ಮಹೇಶ್ವರಪ್ಪ ಸಲಹೆ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ದೇಶದಲ್ಲಿ ಸಹಕಾರ ಚಳವಳಿ ಬೆಳೆಯುತ್ತಾ ಸಾಗುತ್ತಿದ್ದರೂ, ಈ ಕ್ಷೇತ್ರದ ಗುಣಮಟ್ಟವೂ ಕುಸಿತ ಕಾಣುತ್ತಿರುವುದು ಆತಂಕದ ಸಂಗತಿ ಎಂದು ಜಿಲ್ಲಾ ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ಕೆ.ಮಹೇಶ್ವರಪ್ಪ ಕಳವಳ ವ್ಯಕ್ತಪಡಿಸಿದರು.ನಗರದ ಜನತಾ ಬಜಾರ್‌ನಲ್ಲಿ ಬುಧವಾರ ರಾಜ್ಯ ಸಹಕಾರ ಮಹಾ ಮಂಡಳ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ ಸೇರಿದಂತೆ ವಿವಿಧ ಸಹಕಾರ ನಿಯಮಿತಗಳಿಂದ ದಾವಣಗೆರೆ, ಚನ್ನಗಿರಿ ತಾಲೂಕಿನ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದ ಗುಣಮಟ್ಟ ಕುಸಿತ ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಸಹಕಾರಿ ಕ್ಷೇತ್ರದಲ್ಲಿ ಇರುವವರು ಪ್ರಾಮಾಣಿಕತೆ, ಪರಿಶುದ್ಧತೆಯಿಂದ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ನಿತ್ಯವೂ ಒಂದೊಂದು ಸಹಕಾರಿ ಬ್ಯಾಂಕ್‌ಗಳು ಮುಳುಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದಂತೂ ಅತ್ಯಂತ ನೋವಿನ ವಿಚಾರವಾಗಿದೆ. ಈ ಹಿನ್ನೆಲೆ ಸಹಕಾರ ಕ್ಷೇತ್ರದಲ್ಲಿರುವವರು ಅತ್ಯಂತ ಪ್ರಾಮಾಣಿಕತೆ, ನಿಸ್ವಾರ್ಥದಿಂದ ಕೆಲಸ ಮಾಡಿದರೆ ಮಾತ್ರ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್‌ಗಳು ಉಳಿಯಲು, ಬೆಳೆಯಲು ಸಾಧ್ಯ ಎಂದು ಹೇಳಿದರು.ಪ್ರತಿಯೊಬ್ಬರೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಆದಾಯ ತೆರಿಗೆ ನೀತಿ, ನಿಯಮಗಳ ಬಗ್ಗೆ ಅರಿವು, ತಿಳಿವಳಿಕೆ ಹೊಂದಬೇಕಾದ ಅಗತ್ಯವಿದೆ. ಈ ಹಿನ್ನೆಲೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಿಬಿರದ ಸದುಪಯೋಗ ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಿ. ಆದಾಯ ತೆರಿಗೆ ಮತ್ತು ಸರಕು ಸೇವಾ ತೆರಿಗೆ ಕುರಿತಂತೆ ಕೇಂದ್ರ ಸರ್ಕಾರವು ಹೊರಡಿಸುವ ಆದೇಶ, ಬದಲಾವಣೆಗಳಿಗೆ ತಕ್ಕಂತೆ ಸಹಕಾರ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ತರಬೇತಿ ಶಿಬಿರಗಳ ಮೂಲಕ ಯಾವುದೇ ಕ್ಷೇತ್ರದಲ್ಲಿ ಹೊಸ ವಿಚಾರ, ನವೀನ ಆಲೋಚನೆಗಳು, ಹೊಸ ಕಾನೂನು, ಕಟ್ಟುಪಾಡುಗಳ ಬಗ್ಗೆ ಅರಿಯಲು ಸಾಧ್ಯ. ಜನವರಿ 2025ರ ವೇಳೆಗೆ ತಾಲೂಕು ಸೊಸೈಟಿಗಳಿಗೆ ಚುನಾವಣೆ ನಡೆಯಲಿದೆ ಎಂದರು.ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಎಸ್.ಬಿ.ಶಿವಕುಮಾರ, ಸಹಕಾರ ಅಭಿವೃದ್ಧಿ ಅಧಿಕಾರಿ ಜಿಎಸ್ ಸುರೇಂದ್ರ, ಜಗದೀಶ ಕುರುಡಿಮಠ ಇತರರು ಇದ್ದರು.
ಸನ್ನದು ಲೆಕ್ಕ ಪರಿಶೋಧಕ ಉಮೇಶಶೆಟ್ಟಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅನ್ವಯ ಆಗುವ ಆದಾಯ ತೆರಿಗೆ ಸರಕು ಮತ್ತು ಸೇವಾ ತೆರಿಗೆ ಕುರಿತು ಉಪನ್ಯಾಸ ನೀಡಿದರು. ದಾವಣಗೆರೆ, ಚನ್ನಗಿರಿ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ 50ಕ್ಕೂ ಅಧಿಕ ಕಾರ್ಯನಿರ್ವಾಹಕರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.- - -
ಬಾಕ್ಸ್* ಆಧುನಿಕತೆಗೆ ತಕ್ಕಂತೆ ಅಪ್‌ಡೇಟ್ ಆಗಿ
ಭಾರತ ಸರ್ಕಾರದ ಹೊಸ ಸಹಕಾರ ಕಾಯ್ದೆ ಅನ್ವಯ ಎಲ್ಲ ಸಹಕಾರ ಸಂಘಗಳು ಶೇ.100 ಗಣಕೀಕೃತ ಲೆಕ್ಕ ಪರಿಶೋಧನೆ ಮಾಡಬೇಕಾಗಿದೆ. ಈ ವಿಚಾರದಲ್ಲಿ ದಾವಣಗೆರೆ ಜಿಲ್ಲೆ ಕಳೆದ 5 ವರ್ಷಗಳಲ್ಲಿ ಶೇ.100 ಸಾಧನೆ ಮಾಡಿ, ಪ್ರಶಂಸೆಗೆ ಪಾತ್ರವಾಗಿತ್ತು. ಈ ವರ್ಷ ಜಿಲ್ಲೆಯ 186 ಸಹಕಾರ ಸಂಘಗಳ ಪೈಕಿ ಈಗಾಗಲೇ 68 ಸಂಘಗಳು ಶೇ.100 ಗುರಿ ಸಾಧಿಸಿವೆ. ಆಧುನಿಕತೆಗೆ ತಕ್ಕಂತೆ ಸಹಕಾರ ಕ್ಷೇತ್ರದ ಅಧಿಕಾರಿ, ಸಿಬ್ಬಂದಿ ಸಹ ಅಪ್‌ಡೇಟ್ ಆಗಬೇಕು. ಸಹಕಾರ ಕ್ಷೇತ್ರ ನಿಂತ ನೀರಾಗದೇ, ಹರಿಯುವ ನೀರಿನಂತೆ ಬದಲಾವಣೆ ಮೈಗೂಡಿಸಿಕೊಳ್ಳುತ್ತ ಸಾಗುತ್ತಿದೆ ಎಂದು ಮಹೇಶ್ವರಪ್ಪ ಹೇಳಿದರು.- - -
-3ಕೆಡಿವಿಜಿ4:ವಿಶೇಷ ತರಬೇತಿ ಶಿಬಿರವನ್ನು ಜಿಲ್ಲಾ ಸಹಕಾರ ಸಂಘಗಳ ಇಲಾಖೆ ಉಪ ನಿರ್ದೇಶಕ ಕೆ.ಮಹೇಶ್ವರಪ್ಪ ಉದ್ಘಾಟಿಸಿದರು.