ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರೈತ ಸಂಘಟನೆಗಳು ಹೋರಾಟದ ಜೊತೆಗೆ ತಮ್ಮ ಸಾಮರ್ಥ್ಯಕ್ಕೂ ಹೆಚ್ಚಿನ ಒತ್ತು ಕೊಟ್ಟಾಗ ಸಂಘಟನೆಯ ಜೊತೆಗೆ ಸಮಸ್ಯೆಗಳು ಬಗೆಹರಿದು ರೈತರು ಸ್ವಾವಲಂಬಿಗಳಾಗಿ ಕೃಷಿ ಕ್ಷೇತ್ರ ಅಭಿವೃದ್ಧಿಯಾಗುತ್ತದೆ ಎಂದು ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಹೇಳಿದರು.ನಗರದ ಸತ್ತಿ ರಸ್ತೆ ಯಲ್ಲಿರುವ ಎಪಿಎಂಸಿಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಭಾಗೀಯ ಮಟ್ಟದ ರೈತರ ತಾoತ್ರಿಕ ಮತ್ತು ಅಧ್ಯಯನ ಶಿಬಿರ ಹಾಗೂ ಸಂಘದ ಕಚೇರಿ ಉದ್ಘಾಟಿಸಿ, ರೈತ ಉತ್ಪಾದಕ ಸಂಘಗಳ ಪಾತ್ರ ಮತ್ತು ಮಹತ್ವ ಎಂಬ ವಿಷಯ ಕುರಿತು ಅವರು ಮಾತನಾಡಿದರು.ರೈತ ಸಂಘಟನೆಗಳು ಸಣ್ಣ ಸಣ್ಣ ಭಿನ್ನಾಭಿಪ್ರಾಯ ಬದಿಗೊತ್ತಿ ಒಗ್ಗಟ್ಟಾಗಿ ಹೋರಾಡುವ ಅಗತ್ಯದ ಜೊತೆಗೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ವ್ಯವಸಾಯದಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ರೈತ ಉತ್ಪಾದಕ ಸಂಘಗಳನ್ನು ಕಟ್ಟಿಕೊಂಡಾಗ ರೈತರ ಸಮಸ್ಯೆಗಳು ಬಗೆಹರಿಯುವುದರ ಜೊತೆಗೆ ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದರು.ದೇಶದ ಶೇ. ೫೦ ರಷ್ಟು ಆಹಾರ ಉತ್ಪಾದನೆಯನ್ನು ಸಣ್ಣ ಮತ್ತು ಅತಿಸಣ್ಣ ರೈತ ವರ್ಗವೇ ಮಾಡುತ್ತಿರುವುದು ಈ ವರ್ಗ, ಬೆಲೆ, ಮಾರಾಟ, ಪರಿಕರಗಳ ಸಮಸ್ಯೆಗಳ ಬಗ್ಗೆ ಬೇಸತ್ತು ಆಹಾರ ಉತ್ಪಾದನೆಯನ್ನು ನಿಲ್ಲಿಸಿದರೆ ದೇಶ ಆಹಾರದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದರ ಮಹತ್ವವನ್ನು ಅರಿತೇ ಸರ್ಕಾರ ೨೦೧೪-೧೫ರಿಂದೀಚೆಗೆ ರೈತ ಉತ್ಪಾದಕ ಸಂಘಗಳಿಗೆ ಹೆಚ್ಚಿನ ಮಹತ್ವ ನೀಡುವ ಸಲುವಾಗಿ ಜರ್ಮನಿ ದೇಶಕ್ಕೆ ನಿಯೋಗ ಕಳುಹಿಸಿ ಅಲ್ಲಿ ಅಧ್ಯಯನ ನಡೆಸಿ, ಸಲ್ಲಿನ ಸಹಕಾರ ತತ್ವವನ್ನು ಇಲ್ಲಿಯ ಸಣ್ಣ ಮತ್ತು ಅತಿಸಣ್ಣ ರೈತ ವರ್ಗಕ್ಕೆ ನೀಡುವ ಸಲುವಾಗಿ ಹಾಗೂ ಮಾರುಕಟ್ಟೆ, ಯಾಂತ್ರಿಕ ಕೃಷಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ರೈತ ಉತ್ಪಾದಕ ಸಂಘಗಳಿಗೆ ಒತ್ತು ನೀಡಿದೆ ಎಂದರು.ಕಂಪನಿಗೆ ಕಾಯ್ದೆಗೆ ತಿದ್ದುಪಡಿ ತಂದು ರೈತ ಉತ್ಪಾದಕ ಸಂಘಗಳ ಸ್ಥಾಪನೆಗೆ ಅನುಮೋದನೆ ನೀಡಿತು. ಒಂದು ಸಾವಿರ ರೈತರು ಒಗ್ಗೂಡಿ ಇಂತಹ ರೈತ ಉತ್ಪಾದಕ ಸಂಘಗಳ ಸ್ಥಾಪನೆಗೆ ನಿಯಮ ತಂದು, ಇವು ಉಳಿಯಬೇಕೆಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಸವಲತ್ತುಗಳನ್ನು ನೀಡಿವೆ, ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಪ್ರಾಸ್ತಾವಿಕ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಸೈದ್ಧಾಂತಿಕವಾಗಿ ಈ ಸಂಘಟನೆಯನ್ನು ಮಾಡಲಾಗಿದ್ದು, ಇಲ್ಲಿ ಸರ್ವರು ಸಮನಾಗಿ ಇರಬೇಕು. ಎಲ್ಲರು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು. ವಿಚಾರಧಾರೆಗಳನ್ನು ಪರಸ್ಪರವಾಗಿ ಹಂಚಿಕೊಳ್ಳಬೇಕು ಎಂದರು. ಈ ಸಂಘಟನೆಗಿಂತ ಹಿಂದೆ ಇದ್ದಂತಹ ಸಂಘಟನೆಯಲ್ಲಿ ನಾವು ಹೇಳಿದ್ದೆ ಒಂದಾದರೆ, ಆಗಿದ್ದೆ ಒಂದು ಆಗುತ್ತಿತ್ತು. ಆದ್ದರಿಂದ ರೈತರಿಗೆ ನ್ಯಾಯ ಕೊಡಿಸಲು ಆಗುತ್ತಿರಲಿಲ್ಲ. ರೈತರ ವಿರುದ್ಧವಾಗಿದ್ದು ಸರ್ಕಾರದ ವಿರುದ್ಧ ಧ್ವನಿ ಎತ್ತುವ ಬದಲು, ಚುನಾವಣೆ ಸಂದರ್ಭದಲ್ಲಿ ಪಲಾಯನ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ರೈತ ಸಂಘಟನೆ ಜತೆಗೆ, ವೈವಿಧ್ಯತೆ ಬೆಳೆ ಬೆಳೆದು ವ್ಯವಸಾಯದಲ್ಲಿ ಲಾಭ ಕಾಣುವ ಸಲುವಾಗಿ ತಾಂತ್ರಿಕತೆ ಅಳವಡಿಸಿಕೊಳ್ಳಲು ಈ ಶಿಬಿರ ಆಯೋಜನೆ ಮಾಡಲಾಗಿದೆ ಎಂದರು.
ಕಚೇರಿ ನಾಮಫಲಕವನ್ನು ಯುವ ಉದ್ಯಮಿ ವರ್ಷ ಉದ್ಘಾಟಿಸಿದರು. ಮೈಸೂರು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ. ನಾಗರಾಜ್, ಹಿರಿಯ ವಿಜ್ಞಾನಿ ಸಿದ್ದಪ್ಪ ಸೇರಿದಂತೆ ಇನ್ನಿತರರು ಉಪನ್ಯಾಸ ನೀಡಿದರು. ಶಿಬಿರದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ತೇಜಸ್ವಿ ಪಟೇಲ್, ಗೌರಾವಾಧ್ಯಕ್ಷ ಆಲತ್ತೂರು ಸಿದ್ದಲಿಂಗಪ್ಪ, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ರಾಜೇಶ್, ಮುದ್ದಹಳ್ಳಿ ಚಿಕ್ಕಸ್ವಾಮಿ, ಡಾ. ಹನುಮಯ್ಯ, ವಕೀಲ ಕಿಶಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.