ಡೆಂಘೀಗೆ ಜಿಲ್ಲೆಯ ಮತ್ತೋರ್ವ ಬಾಲಕಿ ಬಲಿ

| Published : Jul 04 2024, 01:02 AM IST

ಡೆಂಘೀಗೆ ಜಿಲ್ಲೆಯ ಮತ್ತೋರ್ವ ಬಾಲಕಿ ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಮಂಗಳವಾರ ಹೊಳೆನರಸೀಪುರ ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಲೋಕೇಶ್ - ತನುಜ ದಂಪತಿಯ ಪುತ್ರಿ ಕಲಾಶ್ರೀ ಜಿ.ಎಲ್ ಎಂಬ 11 ವರ್ಷದ ಬಾಲಕಿ ಡೆಂಘೀಗೆ ಬಲಿಯಾಗಿದ್ದಾಳೆ. ಈವರೆಗೆ ಜಿಲ್ಲೆಯಲ್ಲಿ ಮೂವರು ಬಾಲಕಿಯರು ಡೆಂಘೀ ಜ್ವರದಿಂದ ಪ್ರಾಣತೆತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಬಾಲಕಿ ಡೆಂಘೀ ಜ್ವರದಿಂದ ಸಾವನ್ನಪ್ಪಿದ್ದಾಳೆ. ಹೊಳೆನರಸೀಪುರ ತಾಲೂಕಿನ ಆರೋಗ್ಯ ಇಲಾಖೆಯವರು ಡೆಂಘೀ ಜ್ವರ ನಿಯಂತ್ರಣಕ್ಕೆ ತುರ್ತುಕ್ರಮ ಕೈಗೊಳ್ಳದೇ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದರಿಂದ ಗ್ರಾಮೀಣ ಜನರಿಗೆ ಆತಂಕ ಹೆಚ್ಚಿಸಿದೆ. ಈಗಲಾದರೂ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳತ್ತದೆಯೇ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದ ಲೋಕೇಶ್ - ತನುಜ ದಂಪತಿಯ ಪುತ್ರಿ ಕಲಾಶ್ರೀ ಜಿ.ಎಲ್(೧೧) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಕಲಾಶ್ರೀ ಅವರಿಗೆ ಪಟ್ಟಣದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಹಾಸನದ ಹಿಮ್ಸ್ ಆಸ್ಪತ್ರೆಗೆ ಶನಿವಾರ ಸಂಜೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಕಲಾಶ್ರೀ ನಿಧನ ಹೊಂದಿದ್ದಾರೆ. ತಾಲೂಕಿನ ಹಳ್ಳಿಮೈಸೂರಿನ ಕುಮಾರ್ ಎಂಬವರು ಪುತ್ರಿ ವರ್ಷಿಕ(೮) ಡೆಂಘೀ ಜ್ವರದಿಂದ ಬಳಲಿ ಜಿಲ್ಲಾಸ್ಪತ್ರೆಯಲ್ಲಿ ಜೂನ್ ೨೮ರ ಶುಕ್ರವಾರವಷ್ಟೇ ಮೃತಪಟ್ಟಿದ್ದರು. ತಾಲೂಕಿನಲ್ಲಿ ಈಗಾಗಲೇ ಡೆಂಘೀ ಜ್ವರ ಉಲ್ಪಣಿಸಿದ್ದು, ಡೆಂಘೀ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ತುರ್ತು ಕಾರ್ಯ ಕೈಗೊಳ್ಳಬೇಕಿದ್ದ ತಾಲೂಕು ಆರೋಗ್ಯಾಧಿಕಾರಿಗಳು ಕೇವಲ ಡೆಂಘೀ ಜ್ವರ ನಿಯಂತ್ರಣ ಕುರಿತು ಜಾಥಗಳನ್ನು ನಡೆಸಿ, ಅರಿವನ್ನು ಮೂಡಿಸಲಾಗಿದೆ ಎಂಬ ಮನಸ್ಥಿತಿಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕುಳಿತಿದ್ದಾರೆ. ಆದರೆ ಡೆಂಘೀ ಜ್ವರಕ್ಕೆ ತುತ್ತಾಗಿ ಹಳ್ಳಿಗಳಿಂದ ಬಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈಗಾಗಲೇ ಮೂವರು ಮಕ್ಕಳನ್ನು ಬಲಿ ಪಡೆದ ಡೆಂಘೀ ಜ್ವರ ನಿಯಂತ್ರಣಕ್ಕೆ ತುರ್ತಾಗಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.