ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬು ವಾಲಿ ಅವಧಿಯಲ್ಲಿ ಕೋಟ್ಯಂತರ ರುಪಾಯಿ ಅಕ್ರಮವಾಗಿದ್ದು ಇದರಲ್ಲಿ ಅವರೂ ಭಾಗಿಯಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡುವಂತೆ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಬಿಡಿಎ ಆಯುಕ್ತರಿಗೆ ಸೂಚಿಸಿದ್ದರೂ ಅದನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಆರೋಪಿಸಿದರು.ಈ ಕುರಿತಂತೆ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸರ್ಕಾರದಿಂದ ಪ್ರಾದೇಶಿಕ ಆಯುಕ್ತಾಲಯ ಕಲಬುರಗಿ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಧಾರವಾಡ ಇವೆರಡೂ ತಂಡಗಳಿಂದ ನಡೆಸಿದ ತನಿಖೆಯಲ್ಲಿ ಅವ್ಯವಹಾರ/ಕರ್ತವ್ಯಲೋಪ ಆಗಿರುವದು ಸಾಬೀತಾಗಿದೆ. ಈ ಹಿನ್ನೆಲೆ ನಗರಾಭಿವೃದ್ಧಿ ಪ್ರಾಧಿಕಾರದ ಸರ್ಕಾರದ ಅಧೀನ ಕಾರ್ಯದರ್ಶಿಗಳು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದು ಪ್ರಕರಣ ಹೂಡುವಂತೆ ತಿಳಿಸಿದ್ದರೂ ಆಯುಕ್ತರು ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
2022-23ನೇ ಸಾಲಿನಲ್ಲಿ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಚಿದ್ರಿ ರಸ್ತೆಯಲ್ಲಿರುವ ಸಿದ್ದರಾಮಯ್ಯ ಬಡಾವಣೆ ಮತ್ತು ನೌಬಾದ್‌ನಲ್ಲಿರುವ ವ್ಯಾಲ್ಯೂ ವೀವ್ ಲೇಔಟ್‌ಗಳಲ್ಲಿ ತಲಾ ಎಂಟು ನಿವೇಶನಗಳು ಆಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಗುನ್ನಳ್ಳಿ ಗ್ರಾಮದ ಸರ್ವೇ ನಂ. 22/2, 21/1 ರಲ್ಲಿರುವ 26 ಎಕರೆ ನಿವೇಶನ ಹಂಚಿಕೆಯಲ್ಲಿ ಗೋಲ್‌ಮಾಲ್ ನಡೆದಿದ್ದು, ಈ ಎಲ್ಲವುಗಳ ಬಗ್ಗೆ ತನಿಖೆ ನಡೆಸಲು ವಿಧಾನ ಪರಿಷತ್ ಕಲಾಪದಲ್ಲಿ ನಾನು ಸರ್ಕಾರದ ಗಮನಕ್ಕೆ ತಂದಿರುತ್ತೇನೆ. ಅದಕ್ಕೆ ಮಂತ್ರಿಗಳು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ 19-08-2023ರಲ್ಲಿ ಒಂದು ತನಿಖಾ ತಂಡ ಹಾಗೂ ನಗರ ಹಾಗೂ ಗ್ರಾಮೀಣ ಯೋಜನಾ ಇಲಾಖೆ ಧಾರವಾಡ ಇವರ ಒಂದು ತನಿಖಾ ರಚಿಸಿ ತನಿಖೆ ಮಾಡಲು ಸರ್ಕಾರ ಆದೇಶ ನೀಡಿತ್ತು ಎಂದರು.ಹಾಲಿ ಬುಡಾ ಆಯುಕ್ತರಾದ ಶ್ರೀಕಾಂತ ಬಿಜೆಪಿಯ ಪ್ರಭಾವಿಯೊಬ್ಬರ ಸಂಬಂಧಿಯಾಗಿರುವುದರಿಂದ ಈ ವಿಚಾರವಾಗಿ ಕ್ರಮ ಕೈಗೊಳ್ಳಲು ಮೀನಾಮೆಷ ಎಣಿಸುತ್ತಿದ್ದಾರೆಂಬ ಅನುಮಾನ ವ್ಯಕ್ತವಾಗುತ್ತಿದೆ. ಇನ್ನೂ ಎರಡು ದಿನಗಳಲ್ಲಿ ಬಾಬು ವಾಲಿ ವಿರುದ್ಧ ದೂರು ದಾಖಲಿಸದಿದ್ದಲ್ಲಿ ಮುಖ್ಯಮಂತ್ರಿಗಳ ಬಳಿ ದೂರು ಕೊಂಡೊಯ್ಯುವೆ ಅದೂ ಸಫಲವಾಗದಿದ್ದರೆ ಹೈಕೋರ್ಟ ಮೊರೆ ಹೋಗುತ್ತೇನೆ ಎಂದು ಅರಳಿ ಹೇಳಿದರು.
ಈ ಎಲ್ಲ ಆಕ್ರಮಗಳಿಗೆ ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ ಹಾಗೂ ಆಗಿನ ಬುಡಾ ಆಯುಕ್ತ ಅಭಯಕುಮಾರ ಪಾಟೀಲ್ ಇವರಿಬ್ಬರೂ ಭಾಗಿಯಾಗಿದ್ದಾರೆ. ಅಭಯಕುಮಾರ ಅವರನ್ನು ಅಮಾನತ್ತುಗೊಳಿಸಿದ್ದು ಮತ್ತೇ ಸರ್ಕಾರದ ಸೇವೆಗೆ ವಾಪಸ್ ಪಡೆಯಲಾಗಿದೆ ಎಂದು ಕೇಳಿಬಂದಿದ್ದು ಒಂದು ವೇಳೆ ಸೇವೆಗೆ ವಾಪಸ್ಸಾಗಿದ್ದರೆ ಮತ್ತೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿಸುವದಾಗಿ ಹೇಳಿದರು.ಅಧೀನ ಕಾರ್ಯದರ್ಶಿಗಳ ಪತ್ರದ ಸಾರಾಂಶ:ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಈ ಹಿಂದಿನ ಅಧ್ಯಕ್ಷ ಬಾಬು ವಾಲಿ ಇವರಿಂದ ಪ್ರಾಧಿಕಾರಕ್ಕೆ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದಲ್ಲಿ ಸದರಿಯವರ ವಿರುದ್ಧ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿ ವಸೂಲಾತಿಗೆ ಕ್ರಮವಹಿಸುವಂತೆ ಮತ್ತು ಕರ್ತವ್ಯ ಲೋಪವೆಸಗಿರುವದರಿಂದ ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 209ರನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜೂ.13ರಂದು ಬರೆದಿರುವ ಪತ್ರದಲ್ಲಿ (ಪತ್ರ ಸಂ.ನಅಇ 187 ಗುಅಪ್ರಾ 2023 ದಿ. 13-06-2024) ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಗೌತಮ ವಾಗರಾಜ ಉಪಸ್ಥಿತರಿದ್ದರು.