ಕಿಕ್ಕೇರಿ:
ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದಂತಹ ಅನುಭವ ಮಂಟಪ ನಿರ್ಮಿಸಿ ಜಾತಿ ಸಂಕೋಲೆ ದೂರ ಮಾಡಲು ಶ್ರಮಿಸಿದ ಮಹಾನ್ ವಚನಕಾರ ಬಸವಣ್ಣ ಎಂದು ಪಿಡಿಒ ಬಿ.ಎಸ್.ವಿಜಯ್ ಅಭಿಪ್ರಾಯಪಟ್ಟರು.ಐಕನಹಳ್ಳಿ ಗ್ರಾಪಂನಲ್ಲಿ ಏರ್ಪಡಿಸಿದ್ದ ಬಸವೇಶ್ವರ 893ನೇ ಜಯಂತಿಯಲ್ಲಿ ಮಾತನಾಡಿ, ನಮ್ಮ ನಾಡು ಶಾಂತಿಯ ಬೀಡಾಗಲು 12ನೇ ಶತಮಾನದಲ್ಲಿಯೇ ಅನುಭವ ಮಂಟಪವನ್ನು ಕಲ್ಯಾಣದಲ್ಲಿ ಸ್ಥಾಪಿಸಿದರು. ವಿಶ್ವದ ಪ್ರಥಮ ಸಂಸತ್ ಇದಾಗಿದ್ದು, ಸರ್ವರಿಗೂ ನ್ಯಾಯ ಸಿಗುವಂತೆ ಈ ಮಂಟಪವನ್ನು ಚರ್ಚಾ ವೇದಿಕೆಯಾಗಿ ಪರಿವರ್ತಿಸಿದರು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆ ಪರಿಕಲ್ಪನೆಯನ್ನು ತಮ್ಮ ಕಲ್ಯಾಣದಲ್ಲಿ ತೋರಿಸಿಕೊಟ್ಟರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಸಮಾನತೆ ದೊರಕಿಸಲು ಬಿಜ್ಜಳ ದೊರೆಯ ಮಂತ್ರಿಯಾಗಿ ಸಾಧಿಸಿ ಜಗಕ್ಕೆ ನೀಡಿದರು. ಮೇಲು ಕೀಳು ಜಾತಿಪದ್ಧತಿ ನಿರ್ಮೂಲನೆಗೆ ಅಂತರಜಾತಿ ವಿವಾಹಕ್ಕೆ ಒತ್ತು ನೀಡಿದ ಮಹಾನ್ ಶಾಂತಿಧೂತರು ಎಂದರು.ಭಕ್ತಿ ಪಂಥದ ಸುಧಾರಕರಾಗಿ, ಕನ್ನಡ ಭಾಷೆ ಗಟ್ಟಿಗೊಳಿಸಲು ವಚನದ ಮೂಲಕ ಬಲು ದೊಡ್ಡ ಸಂದೇಶ ನೀಡಿದ್ದಾರೆ. ಇವರ ವಚನಗಳು ಅಮೃತ ಸಮಾನವಾಗಿದೆ. ಆದರ್ಶ, ವಚನಗಳು, ಸಿದ್ಧಾಂತಗಳನ್ನು ಎಳೆಯ ಮನಸ್ಸಿನಲ್ಲಿ ಉಳಿಯುವಂತೆ ಮಾಡುವುದು ಇಡೀ ಸಮುದಾಯದ ಜವಾಬ್ದಾರಿಯಾಗಿದೆ ಎಂದರು.
ಜಾತಿ, ಕುಲ, ಮತ ಬಿಟ್ಟು ಮಾನವಧರ್ಮ, ಮಾನವ ಪ್ರೀತಿ ಬಲು ದೊಡ್ಡದು. ಯಾರೂ ಏಕಾಂಗಿಯಲ್ಲ. ದುಃಖಿಗಳಲ್ಲ ಎಂದು ಸಾರಿದ ವಿಶ್ವ ಸಾಂಸ್ಕೃತಿಕ ನಾಯಕರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದರು.
ಕಿಕ್ಕೇರಿ, ಮಂದಗೆರೆ, ಮಾದಾಪುರ, ಆನೆಗೊಳ, ಐಕನಹಳ್ಳಿ ಗ್ರಾಪಂ, ವಿವಿಧ ಶಾಲಾ ಕಾಲೇಜುಗಳಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವ ಮೂಲಕ ಬಸವೇಶ್ವರರನ್ನು ಸ್ಮರಿಸಲಾಯಿತು.
ಶ್ರೀ ಬಸವ ಜಯಂತಿ ಆಚರಣೆಮದ್ದೂರು:ತಾಲೂಕಿನ ಬೆಸಗರಹಳ್ಳಿಯಲ್ಲಿ ಬಸವ ಜಯಂತಿ ಅಂಗವಾಗಿ ಬಸವೇಶ್ವರನ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಪೂಜಾ ಕಾರ್ಯಕ್ರಮ ಹಾಗೂ ನಂತರ ರುದ್ರಾಭಿಷೇಕ ಮಹಾಮಂಗಳಾರತಿ ನಡೆಯಿತು.
ಅರ್ಚಕರಾದ ರವಿ ನಾರಾಯಣ್ ರವರು ಪೂಜಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು. ವೀರಶೈವ ಬಳಗದವರು ಹಾಗೂ ಗ್ರಾಮಸ್ಥರು ಇದ್ದರು. ಪೂಜಾ ನಂತರ ಪ್ರಸಾದ ವಿನಿಯೋಗ ಪಾನಕ ಹಾಗೂ ಮಜ್ಜಿಗೆ ಕೋಸಂಬರಿಗಳನ್ನು ವಿತರಿಸಲಾಯಿತು.