ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಸ್ವಂತತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎನ್‌. ಪ್ರತಾಪರೆಡ್ಡಿ ಅವರ ಆಸ್ತಿಯ ಒಟ್ಟು ಮೌಲ್ಯ 115 ಕೋಟಿ ರುಪಾಯಿಯಷ್ಟಿದೆ.

 ಕಲಬುರಗಿ : ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಗೆ ಸ್ವಂತತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎನ್‌. ಪ್ರತಾಪರೆಡ್ಡಿ ಅವರ ಆಸ್ತಿಯ ಒಟ್ಟು ಮೌಲ್ಯ 115 ಕೋಟಿ ರುಪಾಯಿಯಷ್ಟಿದೆ.

ಬಳ್ಳಾರಿಯ ಮೂಲದ ನಾರಾ ಪ್ರತಾಪರೆಡ್ಡಿ ಅವರ ಕೈಯಲ್ಲಿ 3.65 ಲಕ್ಷ ರು. ನಗದು ಇದೆ. ಇವರು ತಮ್ಮ ಬಳಿಯಲ್ಲಿ ಬಿಎಂಡಬ್ಲೂ ಕಾರ್‌, 35.81 ಲಕ್ಷ ರು. ಮೌಲ್ಯದ ಇನ್ನೋವಾ ಕಾರು, 6.37 ಲಕ್ಷ ರು. ಮೌಲ್ಯದ ಮಾರುತಿ ಸೆಲೋರಿಯೋ, 38.92 ಲಕ್ಷ ರು. ಮೌಲ್ಯದ ಫಾರ್ಚುನರ್ ಕಾರು ಹೊಂದಿದ್ದಾರೆ.

ಬೆಲೆಬಾಳುವ ಚಿನ್ನಾಭರಣ ಸೇರಿದಂತೆ ಇವರ ಬಳಿ 14.57 ಕೋಟಿ ರು. ಚರಾಸ್ತಿ ಹಾಗೂ 1.78 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು 115. 35 ಕೋಟಿ ರು. ಸಂಪತ್ತಿನ ಒಡೆಯರಾಗಿದ್ದಾರೆ. ಸಂಪತ್ತಿನ ಜೊತೆಗೇ 13.83 ಕೋಟಿ ರುಪಾಯಿಯಷ್ಟು ಸಾಲವೂ ಇದೆ ಎಂದು ಪ್ರತಾಪರೆಡ್ಡಿ ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಆಸ್ತಿಪಾಸ್ತಿ ವಿವರದಲ್ಲಿ ಹೇಳಿದ್ದಾರೆ.

ಪ್ರತಾಪರೆಡ್ಡಿಯವರ ಧರ್ಮಪತ್ನಿ ಎನ್‌. ಶೈಲಜಾ ರೆಡ್ಡಿ ಅವರ ಬಳಿ 1.50 ಲಕ್ಷ ರು. ನಗದು, 4.06 ಕೋಟಿ ರುಪಾಯಿ ಮೌಲ್ಯದ ಚರಾಸ್ತಿ, 102.85 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ದೆ. ಇವರ ಮಗ ಎನ್‌. ಹರ್ಷವರ್ಧನ್‌ ರೆಡ್ಡಿ ಬಳಿ 54.51 ಲಕ್ಷ ರು. ಚರಾಸ್ತಿ, 49. 94 ಲಕ್ಷದ ಸ್ಥಿರಾಸ್ತಿ ಇದೆ.

ಕಾಂಗ್ರೆಸ್‌ ಹುರಿಯಾಳು ಡಾ. ಚಂದ್ರಶೇಖರ 11 ಕೋಟಿ ಆಸ್ತಿಪಾಸ್ತಿ ಒಡೆಯ:

ಈಶಾನ್ಯ ಪದವೀಧರ ಮತಕ್ಷೇತ್ರದ ಕಣದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ, ಇಲ್ಲಿಂದ ಪುನರಾಯ್ಕೆ ಬಯಸಿರುವ ಡಾ. ಚಂದ್ರಶೇಖರ ಪಾಟೀಲ್‌ ಇವರೂ ಕೂಡಾ ಬಹುಕೋಟಿ ಸಪತ್ತಿನ ಡೆಯರಾಗಿದ್ದಾರೆ. ನಾಮಪತ್ರ ಸಲ್ಲಿಕೆ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿಪಾಸ್ತಿ ಅಫಿಡೆವಿಟ್‌ನಲ್ಲಿ ಇವರು ಈ ಕಳಗಿನಂತೆ ತಮ್ಮ ಹಾಗೂ ಕುಟುಂಬದ ಅವಲಂಬಿತರ ಆಸ್ತಿಪಾಸ್ತಿ ವಿವರಗಳನ್ನು ಸಲ್ಲಿಸಿದ್ದಾರೆ.

ಡಾ. ಚಂದ್ರಶೇಖರ ಕೈಯಲ್ಲಿ ನಗದು 7.50 ಲಕ್ಷ ಇದೆ. 3.50 ಲಕ್ಷ ರು. ಮೌಲ್ಯದ ಟಾಟಾ ಕೊರೋಲ್ಲಾ ಕಾರು ಇದೆ, ಚಿನ್ನಾಭರಣ 22 ಲಕ್ಷದಷ್ಟಿದೆ. ವಿವಿಧ ಬ್ಯಾಂಕು, ಫಾರ್ಮ್‌ಗಳಲ್ಲಿನ ಹೂಡಿಕೆಗಳು ಸೇರಿದಂತೆ ಡಾ. ಚಂದು ಪಾಟೀಲರ ಚರಾಸ್ತಿಯ ಒಟ್ಟು ಮೌಲ್ಯ 3.96 ಕೋಟಿ ರು. ಯಷ್ಟಿದೆ.

ಇನ್ನು ಬೀದರ್‌, ಕಲಬುರಗಿ, ಹುಮನಾಬಾದ್‌, ವಿಜಯಪುರ ಸೇರಿದಂತೆ ವಿವಿಧೆಡೆಗಳಲ್ಲಿ ಕೃಷಿ, ವಾಣಿಜ್ಯ ಭೂಮಿ, ನಿವೇವಶನಗಳನ್ನು ಹೊಂದಿದ್ದಾರೆ. ಇವೆಲ್ಲ ಸೇರಿದಂತೆ ಒಟ್ಟು ಸ್ಥಿರಾಸ್ತಿ ಮೌಲ್ಯ 7.05 ಕೋಟಿ ರುಪಾಯಿಯಷ್ಟಿದೆ. ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿದಂತೆ ಒಟ್ಟು 11 ಕೋಟಿ ರು. ಆಸ್ತಿ ಡಾ. ಚಂದ್ರಶೇಖರ ಹೊಂದಿದ್ದಾರೆ.

ಇವರ ಪತ್ನಿಯೂ ಬಹುಕೋಟಿ ಒಡತಿಯಾಗಿದ್ದಾರೆ. ಚಿನ್ನಾಭರಣ, ಕೃಷಿ ಭೂಮಿ ಸೇರಿದಂತೆ 1.22 ಕೋಟಿ ರು. ಚರಾಸ್ತಿ ಹಾಗೂ 6.50 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಇವರ ಮಕ್ಕಳಿಬ್ಬರ ಹೆಸರಲ್ಲಿಯೂ 70 ಲಕ್ಷದಷ್ಟು ಮೌಲ್ಯದ ಚರಾಸ್ತಿ ಇರೋದಾಗಿ ಅಫಿಡೆವಿಟ್‌ನಲ್ಲಿ ಪಾಟೀಲರು ವಿವರ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್‌ 5 ಕೋಟಿ ರು. ಸಂಪತ್ತಿನ ಒಡೆಯ:

ಈಶಾನ್ಯ ಪದವೀಧರ ಮತಕ್ಷೇತ್ರದ ಕಣದಲ್ಲಿರುವ ಬಿಜೆಪಿಯ ಹುರಿಯಾಳು ಅಮರನಾಥ ಪಾಟೀಲ್‌ 5 ಕೋಟಿ ರು. ಸಂಪತ್ತಿನ ಒಡೆಯರಾಗಿದ್ದಾರೆ. ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಹೇಳಿರುವಂತೆ 63.60 ಲಕ್ಷ ದಷ್ಟು ಚರಾಸ್ತಿ, 4.40 ಕೋಟಿ ರು. ಮೌಲ್ಯದಷ್ಟು ಸ್ಥಿರಾಸ್ತಿ ಸೇರಿದಂತೆ ಒಟ್ಟು 5 ಕೋಟಿ ರು. ಸಂಪತ್ತಿನ ವಿವರಗಳನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.

ಇವರ ಪತ್ನಿ ಕವಿತಾ ಪಾಟೀಲ್‌ ಅವರೂ 78.44ಲಕ್ಷ ರು. ಮೌಲ್ಯದಷ್ಟು ಚರಾಸ್ತಿ, ಪುತ್ರ ಯಶರಾಜ್‌, ಸೊಸೆ ದಿವ್ಯಾ ಕ್ರಮವಾಗಿ 19.56 ಲಕ್ಷ, 36.99 ಲಕ್ಷ ರು. ಮೌಲ್ಯದ ಚರಾಸ್ತಿ ತಮ್ಮ ಹೆಸರಲ್ಲಿ ಹೊಂದಿದ್ದಾರೆ.