ಜಾನಪದ ವಿವಿದಲ್ಲಿ ಬಯಲು ಪಾತ್ರೆ ಬುದ್ಧನ ಜೀವನ ಚರಿತ್ರೆ ನಾಟಕ ಪ್ರದರ್ಶನ

| Published : May 22 2024, 12:50 AM IST

ಜಾನಪದ ವಿವಿದಲ್ಲಿ ಬಯಲು ಪಾತ್ರೆ ಬುದ್ಧನ ಜೀವನ ಚರಿತ್ರೆ ನಾಟಕ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಪ್ರದರ್ಶನ ಕಲೆ ಹಾಗೂ ಆ ವಿಭಾಗದ ಓಇಸಿ ವಿದ್ಯಾರ್ಥಿಗಳಿಂದ ಕುಲಪತಿಗಳಾದ ಪ್ರೊ.ಟಿ.ಎಂ. ಭಾಸ್ಕರ್ ಅವರು ರಚಿಸಿದ ಬಯಲು ಪಾತ್ರೆ ಎಂಬ ಬುದ್ಧ ಜೀವನ ಚರಿತ್ರೆ ಕುರಿತಾದ ನಾಟಕ ಪ್ರದರ್ಶನ ನೀಡಿದರು.

ಶಿಗ್ಗಾಂವಿ: ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಪ್ರದರ್ಶನ ಕಲೆ ಹಾಗೂ ಆ ವಿಭಾಗದ ಓಇಸಿ ವಿದ್ಯಾರ್ಥಿಗಳಿಂದ ಕುಲಪತಿಗಳಾದ ಪ್ರೊ.ಟಿ.ಎಂ. ಭಾಸ್ಕರ್ ಅವರು ರಚಿಸಿದ ಬಯಲು ಪಾತ್ರೆ ಎಂಬ ಬುದ್ಧ ಜೀವನ ಚರಿತ್ರೆ ಕುರಿತಾದ ನಾಟಕ ಪ್ರದರ್ಶನ ನೀಡಿದರು.

ಪ್ರದರ್ಶನದ ವೀಕ್ಷಣೆಯ ನಂತರ ಕುಲಪತಿಗಳು ಹಾಗೂ ಈ ಬಯಲು ಪಾತ್ರೆ ನಾಟಕ ರಚನಾಕಾರರಾದ ಪ್ರೊ.ಟಿ.ಎಂ. ಭಾಸ್ಕರ್ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಅಭಿನಯದ ಮೂಲಕ ನಾಟಕವನ್ನು ಅಚ್ಚುಕಟ್ಟಾಗಿ ಪ್ರದರ್ಶನ ಮಾಡಿದ್ದಾರೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ತಮಗೆ ನೀಡಿರುವ ಪ್ರತಿಯೊಂದು ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಅವರಿಗೆ ಬೇಕಾಗುವ ಕಲಾ ಸಾಮಗ್ರಿ ಒದಗಿಸಲಾಗುವದು ಹಾಗೂ ಶೀಘ್ರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕಲಾಭಾವನವನ್ನು ಕಲಾ ಪ್ರದರ್ಶನಕ್ಕೆ ಒದಗಿಸಲಾಗುವುದು ಎಂದರು.

ಕುಲಸಚಿವರಾದ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಲಾ ತಂಡ ಕಟ್ಟಿಕೊಂಡು ನಾಡಿನಾದ್ಯಂತ ವಿವಿಧ ವೇದಿಕೆಗಳಲ್ಲಿ ಕಲಾ ಪ್ರದರ್ಶನ ನೀಡಿ ವಿಶ್ವವಿದ್ಯಾಲಯಕ್ಕೆ ಗೌರವ ತಂದು ಕೊಡಲಿದ್ದಾರೆ. ಜನಪದರ ಜೀವ ಸೆಲೆ ಜಾನಪದ ಬೇರೆ ವಿಶ್ವವಿದ್ಯಾಲಯಗಳಕ್ಕಿಂತ ಜಾನಪದ ವಿಶ್ವವಿದ್ಯಾಲಯ ವಿಶಿಷ್ಟ್ಟವಾಗಿದೆ. ವೃತ್ತಿ ಕಲಾವಿದರಾಗಿ ಹೊರ ಹೊಮ್ಮಲಿದ್ದು ಆ ಕ್ಷೇತ್ರದಲ್ಲಿ ತಮ್ಮ ಬದುಕು ರೂಪಿಸಿಕೊಳ್ಳಲಿದ್ದಾರೆ. ವಿಶ್ವವಿದ್ಯಾಲಯದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯುವ ಅವಕಾಶಗಳಿವೆ ಎಂದರು.

ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ಎಂ. ಸಾಲಿ ಅವರು ಮಾತನಾಡಿ, ನಾಟಕ ರಚನೆಕಾರ ಸಾಹಿತ್ಯಕ್ಕೆ ಜೀವ ಕೊಟ್ಟರೆ ಕಲಾವಿದರು ಆ ಪಾತ್ರಗಳಿಗೆ ಜೀವ ತಂದುಕೊಡುತ್ತಾರೆ. ನಾಟಕ ಬರಹಗಾರರ ಬರವಣಿಗೆಗೆ ಜನರಿಗೆ ತಿಳಿಸುವಂತೆ ಮನಮುಟ್ಟುವ ಹಾಗೆ ತಿಳಿಸುವಲ್ಲಿ ಕಲಾವಿದರ ಪಾತ್ರ ದೊಡ್ಡದು. ವಿದ್ಯಾರ್ಥಿಗಳು ಕಲಾವಿದರಾಗಿ ಆ ಜವಾಬ್ದಾರಿ ನಿಭಾಯಿಸಿದ್ದು ನೋಡಿ ಸಂತೋಷವಾಗಿದೆ ಎಂದರು.

ಪ್ರದರ್ಶನ ಕಲೆ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಶಿಲೀನಾ ಕೋಟೆ ಎನ್ ಹಾಗೂ ಡಾ. ಪ್ರವೀಣ ಕರೆಪ್ಪನವರ ವಿದ್ಯಾರ್ಥಿಗಳ ನಾಟಕ ಪ್ರದರ್ಶನಕ್ಕೆ ನಿರ್ದೇಶನ ಮಾಡಿದ್ದರು. ಬುದ್ಧನ ಪಾತ್ರದಲ್ಲಿ ರಾಜಶೇಖರ್, ಸಿದ್ದಾರ್ಥ ಪಾತ್ರದಲ್ಲಿ ಶ್ರೀಕಾಂತ್, ರಾಹುಲ ಪಾತ್ರದಲ್ಲಿ ಪ್ರಸನ್ನ, ಶುದ್ಧೋದನ ಪಾತ್ರದಲ್ಲಿ ಶರೀಫ್, ಯಶೋಧ ಪಾತ್ರದಲ್ಲಿ ಲಕ್ಷ್ಮಿ ಹಾಗೂ ಅಂಬಿಕಾ, ಸೈನಿಕರ ಪಾತ್ರದಲ್ಲಿ ವೀಣಾ, ಅನಿತಾ, ಲಕ್ಷ್ಮಿ ವಿದ್ಯಾರ್ಥಿಗಳು ಅಭಿನಯಿಸಿದರು.

ಹಿರಿಯ ಸಂಶೋಧನಾಧಿಕಾರಿ ಡಾ.ಕೆ. ಪ್ರೇಮಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ. ವೆಂಕನಗೌಡ ಪಾಟೀಲ, ಡಾ. ಚಂದ್ರಪ್ಪ ಸೊಬಟಿ, ಡಾ. ವಿಜಯಲಕ್ಷ್ಮೀ ಗೇಟಿಯವರ, ಡಾ.ಶಂಕರ್ ಕುಂದಗೋಳ, ಡಾ. ಅಭಿಲಾಷ ಎಚ್.ಕೆ. ಪ್ರಾತ್ಯಕ್ಷಿಕೆಯ ಕುರಿತು ಅಭಿಪ್ರಾಯ ತಿಳಿಸಿದರು.

ಈ ಸಂದರ್ಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.