ಬೀದಿ ಬದಿ ಆಹಾರ ಮಾರಾಟಕ್ಕೆ ಬಿಬಿಎಂಪಿ ನಿರ್ಬಂಧ

| Published : Apr 09 2024, 01:47 AM IST / Updated: Apr 09 2024, 05:56 AM IST

ಬೀದಿ ಬದಿ ಆಹಾರ ಮಾರಾಟಕ್ಕೆ ಬಿಬಿಎಂಪಿ ನಿರ್ಬಂಧ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ಕತ್ತರಿಸಿದ ಹಣ್ಣು ಮಾರಾಟ ಹಾಗೂ ತೆರೆದಿಟ್ಟ ಆಹಾರ ಮಾರಾಟವನ್ನು ನಿರ್ಬಂಧಿಸಿ ಬಿಬಿಎಂಪಿ ಸೋಮವಾರ ಆದೇಶಿಸಿದೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಾಲರಾ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ರಸ್ತೆ ಬದಿ ಕತ್ತರಿಸಿದ ಹಣ್ಣು ಮಾರಾಟ ಹಾಗೂ ತೆರೆದಿಟ್ಟ ಆಹಾರ ಮಾರಾಟವನ್ನು ನಿರ್ಬಂಧಿಸಿ ಬಿಬಿಎಂಪಿ ಸೋಮವಾರ ಆದೇಶಿಸಿದೆ.

ನಗರದ ಎಂಟು ವಲಯದಲ್ಲಿ ರಸ್ತೆ ಬದಿಗಳಲ್ಲಿ ಕತ್ತರಿಸಿದ ಹಣ್ಣು ಮತ್ತು ತೆರೆದಿಟ್ಟ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ಗಮನಿಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದಲ್ಲಿ ಕಾಲರಾ ಕಾಣಿಸಿಕೊಳ್ಳುತ್ತಿರುವುದರಿಂದ ಆಯಾ ವಲಯದ ಆರೋಗ್ಯ ಪರಿವೀಕ್ಷಕರು ಹೋಟೆಲ್, ಅಂಗಡಿಗಳನ್ನು ತಪಾಸಣೆ ಮಾಡಬೇಕು. ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡಬೇಕು. ಹೋಟೆಲ್‌ಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಜತೆಗೆ ಸ್ವಚ್ಚವಾಗಿಟ್ಟುಕೊಳ್ಳುವಂತೆ ಹೋಟೆಲ್ ಮಾಲೀಕರಿಗೆ ಸೂಚಿಸಬೇಕು.

ಸಾಂಕ್ರಾಮಿಕ ರೋಗಗಳ ಕುರಿತಂತೆ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಅದರಲ್ಲೂ ಸಾಂಕ್ರಾಮಿಕ ರೋಗಗಳ ವಿಷಯದ ವೈದ್ಯರು ಈ ವಿಷಯದಲ್ಲಿ ಹೆಚ್ಚು ಗಮನಹರಿಸಬೇಕು. ಕುಡಿಯುವ ನೀರಿನಿಂದ ಕಾಲರಾದಂತಹ ಕಾಯಿಲೆ ಬರುತ್ತಿರುವುದರಿಂದ ಕುಡಿಯುವ ನೀರಿನ ಮೂಲಗಳಿಂದ ಕಾಲ ಕಾಲಕ್ಕೆ ನೀರಿನ ಮಾದರಿ ಪರೀಕ್ಷೆಗೆ ಒಳಪಡಿಸಿ ನೀರು ಕುಡಿಯಲು ಯೋಗ್ಯವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ತಮ್ಮ ವ್ಯಾಪ್ತಿಗೆ ಬರುವ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಸಾಂಕ್ರಾಮಿಕ ರೋಗಗಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರ ಹಾಗೂ ಪಡೆದವರ ವಿವರವನ್ನು ಪಡೆದುಕೊಳ್ಳಬೇಕು. ವರದಿಯನ್ನು ಐಎಚ್‌ಐಪಿ ತಂತ್ರಾಂಶದಲ್ಲಿ ನಮೂದಿಸುವಂತೆ ಸೂಚಿಸಲಾಗಿದೆ.

ಸಾಂಕ್ರಾಮಿಕ ರೋಗಗಳು ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆಗಾಗಿ ಅಗತ್ಯವಾದ ಔಷಧಿಗಳನ್ನು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ನಮ್ಮ ಕ್ಲಿನಿಕ್, ಹೆರಿಗೆ ಆಸ್ಪತ್ರೆ, ರೆಫರಲ್ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ಕ್ರಮವಹಿಸಬೇಕು. ಅಗತ್ಯ ಇದ್ದಲ್ಲಿ ಪಾಲಿಕೆ ಅನುದಾನದಿಂದ ಔಷಧಿಗಳನ್ನು ಖರೀದಿಸುವಂತೆ ತಿಳಿಸಲಾಗಿದೆ.

ಸಾಂಕ್ರಾಮಿಕ ರೋಗಗಳನ್ನು ತಡೆಯಲು ಓಆರ್‌ಎಸ್ ಮತ್ತು ಹಾಲೋಜೆನ್ ಮಾತ್ರೆಗಳನ್ನು ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೆ ತಲುಪಿಸಬೇಕು. ಯಾವುದಾದರೂ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಲ್ಲಿ ತಕ್ಷಣ ಆರೋಗ್ಯ ವಿಭಾಗದ ಕ್ಷಿಪ್ರ ಪ್ರಕ್ರಿಯಾ ತಂಡವನ್ನು ಆ ಪ್ರದೇಶಕ್ಕೆ ಕಳುಹಿಸಬೇಕು. ಅಗತ್ಯ ಔಷಧಿಗಳನ್ನು ತೆಗೆದುಕೊಂಡು ಹೋಗಿ ಆ ಪ್ರದೇಶದಲ್ಲಿ ಚಿಕಿತ್ಸಾ ಶಿಬಿರವನ್ನು ತೆರೆದು ರೋಗ ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಶಿಬಿರ ಇರುವಂತೆ ನೋಡಿಕೊಳ್ಳಬೇಕು. ಗಂಭೀರ ಸ್ವರೂಪದ ರೋಗಿಯನ್ನು ತ್ವರಿತವಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿದೆ.