ಸಾರಾಂಶ
ನವದೆಹಲಿ : ಬಿಬಿಎಂಪಿಗೆ ಚುನಾವಣೆ ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲ. ಮೂರು ದಿನಗಳ ಹಿಂದೆ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ಅನ್ನು ನ್ಯಾಯಪೀಠ ಕೋರ್ಟ್ ಮುಂದೆ ಓದಿತು. ಬಳಿಕ ವಿಚಾರಣೆಯನ್ನು ನ.3ಕ್ಕೆ ಮುಂದೂಡಿತು.
ಕಳೆದ 5 ವರ್ಷದಿಂದ ಬಿಬಿಎಂಪಿಗೆ ಚುನಾವಣೆ ನಡೆಸಿಲ್ಲ. ಚುನಾವಣೆ ನಡೆಸಲು ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ಮಾಜಿ ಸದಸ್ಯ ಶಿವರಾಜ್ ಸೇರಿ ಮೂರು ಅರ್ಜಿಗಳು ಸೋಮವಾರ ನ್ಯಾ.ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. ಈ ವೇಳೆ 3 ದಿನಗಳ ಹಿಂದೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್‌ಅನ್ನು ನ್ಯಾಯಾಲಯದಲ್ಲಿ ಓದಲಾಯಿತು. ಇದರದಲ್ಲಿ ಸರ್ಕಾರವು, ಗ್ರೇಟರ್ ಬೆಂಗಳೂರುಗೆ ಅಧಿಸೂಚನೆ ಹೊರಡಿಸಲಾಗಿದೆ. ಜನರ ಅಭಿಪ್ರಾಯ ಪಡೆಯಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ವಾರ್ಡ್ ಮರು ವಿಂಗಡಣೆ, ನವೆಂಬರ್‌ನಲ್ಲಿ ಮೀಸಲಾತಿ ಪ್ರಕಟಿಸಲು ದಿನಾಂಕ ನಿಗದಿ ಪಡಿಸಲಾಗಿದೆ. ಇದಾದ ಬಳಿಕ ಪಾಲಿಕೆಗೆ ಚುನಾವಣೆ ನಡೆಸಲಾಗುತ್ತದೆ ಎಂದು ಅಫಿಡವಿಟ್‌ನಲ್ಲಿ ಹೇಳಿತ್ತು.
ಇದಕ್ಕೆ ಅರ್ಜಿದಾರರ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ಐದು ವರ್ಷಗಳಿಂದ ಚುನಾವಣೆ ನಡೆದಿಲ್ಲ. ಪದೇ ಪದೇ ಇಂಥಹ ಕಾರಣಗಳನ್ನು ಮುಂದಿಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು. ಹೊಸ ಕಾಯ್ದೆ ರಚನೆ, ಪಾಲಿಕೆ ರಚನೆ ಸೇರಿ ಹಲವು ಅಂಶಗಳನ್ನು ಸರ್ಕಾರವೇ ಮುಂದಿಟ್ಟಿದೆ. ಹಾಗಾಗಿ ನವೆಂಬರ್ 2ನೇ ತಾರೀಕಿನೊಳಗೆ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ ನೀಡಿ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತು. ಬಳಿಕ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.
ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಅರ್ಜಿದಾರರ ಪರವಾಗಿ ಮುಕುಲ್ ರೊಹಟಗಿ ವಾದ ಮಂಡಿಸಿದರು. ಗ್ರೇಟರ್ ಬೆಂಗಳೂರು ರಚನೆಯ ಪ್ರಕ್ರಿಯೆ ಜಾರಿಯಲ್ಲಿವೆ ಎಂದು ರಾಜ್ಯ ಸರ್ಕಾರ ವಾದಿಸಿತು. ಈಗಾಗಲೇ ಬಹಳ ತಡವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಮತ ಪಟ್ಟಿ ಸಿದ್ಧತೆ: ಸ್ಪಷ್ಟತೆ
ಕೋರಿ ನಗರಾಭಿವೃದ್ಧಿಗೆ ಪತ್ರ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಾಯ್ದೆಯಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವ ಸಂಬಂಧ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಸ್ಪಷ್ಟತೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು(ಬಿಬಿಎಂಪಿ) ಐದು ಮಹಾನಗರ ಪಾಲಿಕೆಗಳಾಗಿ ವಿಭಜಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಾಯ್ದೆಯಡಿ ಮತದಾರರ ಪಟ್ಟಿ ಸಿದ್ಧಪಡಿಸುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ವಿಧಾನಸಭೆಯ ಮತದಾರರ ಪಟ್ಟಿಯನ್ನೇ ಅನುಸರಿಸಬೇಕೋ ಅಥವಾ ಆಯೋಗವೇ ಸಿದ್ಧಪಡಿಸಿಕೊಳ್ಳಬೇಕೋ ಎಂಬುದರ ಬಗ್ಗೆ ಸ್ಪಷ್ಟನೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಸಲು ಹೊಸದಾಗಿ ಗಡಿ ಗುರುತಿಸಬೇಕಿದೆ. ಅಲ್ಲದೇ, ಮೀಸಲಾತಿ ಪಟ್ಟಿಯನ್ನು ಸಹ ಪ್ರಕಟಿಸಬೇಕಾಗಿದೆ. ಸರ್ಕಾರವೇ ಈ ಎರಡು ಕೆಲಸ ಮಾಡಬೇಕಾಗಿದೆ. ಪಾಲಿಕೆಗೆ ಮೀಸಲಾತಿ ಪಟ್ಟಿಯನ್ನು ನೀಡುವ ಸಂಬಂಧವೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಸರ್ಕಾರವು ಮೀಸಲಾತಿ ಪಟ್ಟಿ ಹೊರಡಿಸಿದ ಬಳಿಕ ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ಬೇಕಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಮುಂದಿನ ಫೆಬ್ರವರಿ ವೇಳೆಗೆ ಚುನಾವಣೆ ನಡೆಸಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.