ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ : ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಕುಂಟು ನೆಪ

| Published : Nov 01 2024, 12:32 AM IST / Updated: Nov 01 2024, 09:31 AM IST

ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ : ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಕುಂಟು ನೆಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಯಮಸ್ವರೂಪಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕಾದ ಬಿಬಿಎಂಪಿಯು ಕುಂಟು ನೆಪ ಹೇಳುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಯಮಸ್ವರೂಪಿ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕಾದ ಬಿಬಿಎಂಪಿಯು ಕುಂಟು ನೆಪ ಹೇಳುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದೊಂದು ತಿಂಗಳ ಹಿಂದೆ ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ತಲೆದೋರಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಗಡುವು ನೀಡಿದ ಹಿನ್ನೆಲೆಯಲ್ಲಿ ಒಂದಿಷ್ಟು ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಬಿಬಿಎಂಪಿಯ ಅಧಿಕಾರಿಗಳು ಮಾಡಿದ್ದರು. ಆದರೀಗ ಮತ್ತೆ ನಗರದಲ್ಲಿ ಭಾರೀ ಮಳೆ ಸುರಿದ ಪರಿಣಾಮ ನಗರದ ಬಹುತೇಕ ರಸ್ತೆಗಳಲ್ಲಿ ಮತ್ತೆ ಸಾವಿರಾರು ಸಂಖ್ಯೆಯ ಗುಂಡಿ ಸೃಷ್ಟಿಯಾಗಿವೆ.

ವಾಹನ ಸವಾರರು ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡಬೇಕಾದ ಸ್ಥಿತಿ ಉಂಟಾಗಿದ್ದು, ಇತ್ತೀಚಿಗೆ ಮುಚ್ಚಿದ ರಸ್ತೆ ಗುಂಡಿಗಳ ಡಾಂಬರ್‌ ಕಿತ್ತು ಬರುತ್ತಿದೆ. ಕಿತ್ತು ಬಂದ ಡಾಂಬರ್‌ನ ಜಲ್ಲಿಕಲ್ಲು ಸಹ ಅಪಾಯಕ್ಕೆ ಆಹ್ವಾನಿಸುತ್ತಿದೆ. ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕಾದ ಬಿಬಿಎಂಪಿಯ ಅಧಿಕಾರಿಗಳು ಈ ಬಗ್ಗೆ ಗಮನ ನೀಡುತ್ತಿಲ್ಲ. ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆಂದು ವಾಹನ ಸವಾರರು ದೂರುತ್ತಿದ್ದಾರೆ.ಬಾಕ್ಸ್...

2-3 ವರ್ಷದಿಂದ ರಸ್ತೆಗೆ ಇಲ್ಲ ಡಾಂಬರ್‌

ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಬೇಕಾದ ಬಿಬಿಎಂಪಿಯ ಅಧಿಕಾರಿಗಳು, ನಗರದಲ್ಲಿರುವ 1,400 ಕಿ.ಮೀ ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಿಗೆ ಡಾಂಬರ್‌ ಹಾಕುವ ಕೆಲಸ ಮಾಡಿಲ್ಲ. ಹೀಗಾಗಿ, ರಸ್ತೆಗಳು ಗುಣಮಟ್ಟ ಕಳೆದುಕೊಂಡಿದ್ದು, ಗುಂಡಿಗಳು ಸೃಷ್ಟಿಯಾಗುತ್ತಿವೆ ಎನ್ನುವ ಸಬೂಬು ಹೇಳುತ್ತಿದ್ದಾರೆ. ಆದರೆ, ನಗರದಲ್ಲಿ ಇತ್ತೀಚಿಗೆ ಅಭಿವೃದ್ಧಿ ಪಡಿಸಿದ ರಸ್ತೆಗಳ ಗುಂಡಿ ಮುಚ್ಚಿ ನಿರ್ವಾಹಣೆಯನ್ನು ಕಾಮಗಾರಿ ನಡೆಸಿದ ಗುತ್ತಿಗೆ ಸಂಸ್ಥೆ ಅಥವಾ ಗುತ್ತಿಗೆದಾರ ಮಾಡಬೇಕು. ಆದರೆ, ಗುತ್ತಿಗೆದಾರರು ಮಾಡುತ್ತಿಲ್ಲ. ಬಿಬಿಎಂಪಿ ಅಧಿಕಾರಿಗಳು ಗುತ್ತಿಗೆದಾರರಿಂದ ಕೆಲಸ ಮಾಡಿಸುವ ಗೋಜಿಗೆ ಹೋಗುತ್ತಿಲ್ಲ.ಬಾಕ್ಸ್...

ರಸ್ತೆಗೆ 660 ಕೋಟಿ ವೆಚ್ಚ ಯೋಜನೆ

ನಗರದ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ. ನವೆಂಬರ್‌ನಲ್ಲಿ ನಗರದ 459 ಕಿ.ಮೀ. ಉದ್ದದ ಮುಖ್ಯ ರಸ್ತೆಗಳ ಮೇಲ್ಪದರ ತೆಗೆದು ಹೊಸದಾಗಿ ಡಾಂಬರಿಕರಣ ಮಾಡಲಾಗುವುದು, ಅದಕ್ಕಾಗಿ ₹660 ಕೋಟಿ ವೆಚ್ಚ ಮಾಡಲಾಗುತ್ತಿದೆ. ಆಗ ರಸ್ತೆಗಳ ಗುಣಮಟ್ಟ ಸುಧಾರಿಸಲಿದ್ದು, ಹೊಸ ಕಳೆ ಬರಲಿದೆ ಎಂದು ನೆಪ ಹೇಳಿಕೊಂಡು ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗುತ್ತಿಲ್ಲ.

ಮುಚ್ಚಿದ ಗುಂಡಿ ಪಕ್ಕದಲ್ಲಿ ಹೊಸ ಗುಂಡಿ

ಕಳೆದ ತಿಂಗಳು ನಗರದಲ್ಲಿ 14 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಆ ಗುಂಡಿಗಳು ಮತ್ತೆ ಬಾಯ್ದೆರೆದಿಲ್ಲ. ಆ ಗುಂಡಿ ಪಕ್ಕದಲ್ಲಿ ಸತ್ವ ಕಳೆದುಕೊಂಡ ರಸ್ತೆ ಮೇಲ್ಪದರ ಕಿತ್ತು ಹೋಗಿ ಗುಂಡಿಗಳು ಸೃಷ್ಟಿಯಾಗುತ್ತಿವೆ. ಕೋಲ್ಡ್‌ ಮಿಕ್ಸ್‌ ಬಳಕೆ ಮಾಡಿಕೊಂಡು ರಸ್ತೆ ಗುಂಡಿ ಮುಚ್ಚಲಾಗಿದೆ. ಒಂದೇ ಒಂದು ಕಡೆ ಕೋಲ್ಡ್‌ ಮಿಕ್ಸ್‌ ಡಾಂಬರ್‌ ಕಿತ್ತುಕೊಂಡಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ.

ರಸ್ತೆ ಗುಂಡಿ ಬಗ್ಗೆ ಪಾರದರ್ಶಕತೆ ಇಲ್ಲ

ನಗರದಲ್ಲಿ ಸಾರ್ವಜನಿಕರು ರಸ್ತೆ ಗುಂಡಿ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಆದರೆ, ಬಿಬಿಎಂಪಿಯ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಅಧಿಕಾರಿಗಳು ನಗರದಲ್ಲಿ ಎಷ್ಟು ಗುಂಡಿ ಇವೆ. ಪ್ರತಿ ದಿನ ಎಷ್ಟು ಗುಂಡಿ ಮುಚ್ಚಲಾಗುತ್ತಿದೆ. ಗುಂಡಿ ಸಮಸ್ಯೆ ಪರಿಹಾರಕ್ಕೆ ಅಭಿವೃದ್ಧಿ ರಸ್ತೆ ಗುಂಡಿ ಗಮನ ಆ್ಯಪ್‌ ಮೂಲಕ ಸಾರ್ವಜನಿಕರು ನೀಡಿದ ದೂರು ಎಷ್ಟು ಅಧಿಕಾರಿಗಳು ಸ್ವಯಂ ರಸ್ತೆ ಪರಿಶೀಲನೆ ನಡೆಸಿ ಗುರುತಿಸಿದ ರಸ್ತೆ ಗುಂಡಿ ಎಷ್ಟು? ಎಂಬ ಲೆಕ್ಕವನ್ನು ಮೇಲಾಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ನೀಡದೇ ಗೌಪ್ಯವಾಗಿ ಇಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ.

ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲ

ಬಿಬಿಎಂಪಿಯ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳು, ಎಂಟು ವಲಯ ಕಚೇರಿಯಲ್ಲಿರುವ ಅಧಿಕಾರಿಗಳ ಮೇಲೆ, ವಲಯ ಕಚೇರಿಯ ಅಧಿಕಾರಿಗಳು, ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳ ಮೇಲೆ ಪರಸ್ಪರ ಜವಾಬ್ದಾರಿಯನ್ನು ಹೊರಿಸುವ ಮೂಲಕ ನುನುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂರು ಕೇಳಿ ಬರುತ್ತಿವೆ.