ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಬಿಡಿಸಿಸಿ) ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಎಲ್ಲರ ಅಭಿಪ್ರಾಯ ಪಡೆದು ಉತ್ತಮ ಆಡಳಿತ ನೀಡಬೇಕೆಂಬ ತೀರ್ಮಾನ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ರಾಯಬಾಗ ತಾಲೂಕಿನ ಅಪ್ಪಾಸಾಹೇಬ ಕುಲಗೋಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಆಯ್ಕೆ ಸಭೆಯ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಸುಭಾಷ ಢವಳೇಶ್ವರ ಅವರೇ ಮುಂದುವರಿಯಲಿದ್ದು, ಬ್ಯಾಂಕಿನ ಎಲ್ಲ ನಿರ್ದೇಶಕರು, ಸದಸ್ಯರು, ಶಾಸಕರ ಒಮ್ಮತದ ನಿರ್ಣಯ ಪಡೆದು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಮೂವರು ಸಹೋದರರು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಸಹೋದರರು ಬೇರೆ ಬೇರೆ ಪಕ್ಷದಲ್ಲಿದ್ದರೂ ಆಯಾ ಪಕ್ಷದ ಅಭ್ಯರ್ಥಿಗಳು ಇರುವುದರಿಂದ ಇಲ್ಲಿಗೆ ಬಂದಿದ್ದೇವಷ್ಟೆ. ಇದರಲ್ಲಿ ವಿಶೇಷತೆಯೇನೂ ಇಲ್ಲ. ಒಂದೊಂದು ಪಾರ್ಟಿಯಲ್ಲಿ ಒಬ್ಬೊಬ್ಬರು ಇರುವುದರಿಂದ ನಾವಿಲ್ಲಿ ಕೂಡಿದ್ದೇವಷ್ಟೆ ಎಂದು ಮುಗುಳ್ನಗೆ ಬೀರಿದರು.ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು:
ಮೂರು ಕ್ಷೇತ್ರಗಳಲ್ಲಿ ನಡೆದಿರುವ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ 105 ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದೇನೆ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಸರ್ಕಾರ ರಚನೆ ಆದ ಮೇಲೆ ಪಂಚಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಜೊತೆಗೆ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದು ಹೇಳಿದರು.ಎಸ್‌ಡಿಎ ಆತ್ಮಹತ್ಯೆ ಪ್ರಕರಣ ರೀಪೋರ್ಟ್ ಬರಲಿ:ಕಳೆದ ಕೆಲ ದಿನಗಳ ಹಿಂದೆ ಬೆಳಗಾವಿ ತಹಸೀಲ್ದಾರ್ ಕಚೇರಿಯಲ್ಲಿ ಎಸ್‌ಡಿಎ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಏನೂ ಹೇಳಲು ಸಾಧ್ಯವಿಲ್ಲ. ಆತ್ಮಹತ್ಯೆ ಪ್ರಕರಣದ ರಿಪೋರ್ಟ್ ಬಂದ ನಂತರವೇ ಏನು ಕ್ರಮ ಕೈಗೊಳ್ಳಬೇಕೆಂಬ ನಿರ್ಧಾರ ಮಾಡಬೇಕಾಗುತ್ತದೆ. ಪ್ರಕರಣ ಈಗಾಗಲೇ ತನಿಖಾ ಹಂತದಲ್ಲಿರುವುದರಿಂದ ಈಗಲೇ ಏನೂ ಹೇಳಲು ಆಗುವುದಿಲ್ಲ ಎಂದ ಅವರು, ಬೆಳಗಾವಿಯಲ್ಲಿ ಕೆಳಹಂತದ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವ ವಿಚಾರದ ಬಗ್ಗೆ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.