ಸಾರಾಂಶ
ಬೀದರ್ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕೌಶಲ್ಯ ಮಿಷನ್ ಸಭೆಯ ಅಧ್ಯಕ್ಷತೆವಹಿಸಿ ನಿಗಮದ ಅಧ್ಯಕ್ಷರಾದ ಶಿವಕಾಂತಮ್ಮ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಯುವಕರಿಗೆ ಕೌಶಲ್ಯ ಅಭಿವೃದ್ಧಿ ನಿಗಮದಿಂದ ತರಬೇತಿ ನೀಡಿದರೆ ಸಾಲದು. ಅವರಿಗೆ ಉದ್ಯೋಗ ನೀಡುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದೇವೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ಹೇಳಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕೌಶಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಗರೋತ್ತರ ದೇಶಗಳಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಉದ್ಯೋಗಾವಕಾಶಗಳಿದ್ದು ಯುವಕರಿಗೆ ಕೌಶಲ್ಯ ಅಭಿವೃದ್ಧಿ ನಿಗಮದಿಂದ ತರಬೇತಿ ನೀಡಿ ಅವರಿಗೆ ವಿದೇಶಗಳಲ್ಲಿಯೂ ಉದ್ಯೋಗ ಕೊಡಿಸುವ ಕೆಲಸ ನಿಗಮ ಮಾಡುತ್ತಿದೆ ಎಂದರು.
ಜೂನ್‌ನಲ್ಲಿ ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್ ಮುಗಿಸಿದ 94 ವಿದ್ಯಾರ್ಥಿಗಳಿಗೆ ಸ್ಲೋವೆಕಿಯಾ ದೇಶಕ್ಕೆ ಕಳಿಸಿಲಾಗಿದ್ದು, ಅಲ್ಲಿ ಈಗ ಅವರು ಕೆಲಸ ಮಾಡುತ್ತಿದ್ದಾರೆ. ದುಬೈನಲ್ಲಿ ಅಪ್ರೆಂಟಿಸ್‌ಗಳಿಗೆ 27 ಸಾವಿರ ರು.ಪ್ರೋತ್ಸಾಹ ಧನ ನೀಡುವದರ ಜೊತೆಗೆ ಅವರ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಕಂಪನಿಯೇ ಒದಗಿಸಿಕೊಡುತ್ತದೆ. ಯುಎಇಯಲ್ಲಿ ಪುರುಷ ನರ್ಸ್‌ಗಳಿಗೆ 1ಲಕ್ಷ ರು.ಗಿಂತ ಹೆಚ್ಚಿನ ವೇತನ ನೀಡಲಾಗುತ್ತದೆ. ಇದೇ ರೀತಿಯಲ್ಲಿ ಯುವಕರಿಗೆ ಸಾಗರೋತ್ತರ ದೇಶಗಳಲ್ಲಿ ಬಹಳಷ್ಟು ಉದ್ಯೋಗಾವಕಾಶಗಳಿದ್ದು ಈ ಮಾಹಿತಿಯನ್ನು ಎಲ್ಲಾ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ತಿಳಿಸಬೇಕೆಂದು ಹೇಳಿದರು.ಸ್ಥಳೀಯ ಕೈಗಾರಿಕಾ ಘಟಕದ ಅವಶ್ಯಕತೆಗನುಗುಣ ಕೌಶಲ್ಯ ಕಲ್ಪಿಸಿ: ಅನೇಕ ಯುವಕರಿಗೆ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಸಿಗುವ ಸೌಲಭ್ಯಗಳ ಮಾಹಿತಿ ಇರುವುದಿಲ್ಲ. ಈ ನಿಟ್ಟಿನಲ್ಲಿ ಇಲಾಖೆಗಳು ಗಮನಹರಿಸಿ ಮಾಹಿತಿ ಕಲ್ಪಿಸಬೇಕು. ಜಿಲ್ಲೆಯ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಕೈಗಾರಿಕಾ ಘಟಕಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿ ಯಾವ ರೀತಿಯ ಕೌಶಲ್ಯ ಕೆಲಸಗಾರರ ಅವಶ್ಯಕತೆ ಇದೆ, ಎಷ್ಟು ಜನರು ಕೆಲಸಕ್ಕೆ ಬೇಕಾಗಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಅಂತಹ ಕೌಶಲ್ಯ ತರಬೇತಿಗಳನ್ನು ಯುವಕರಿಗೆ ನೀಡಿದಾಗ ಯುವ ನಿಧಿಗೆ ಅರ್ಜಿ ಹಾಕುವವರ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಕೌಶಲ್ಯಾಭಿವೃದ್ಧಿ ಅಧಿಕಾರಿ ಲೊಕೇಶ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸುರೇಖಾ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ ಶೆಟಕಾರ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಬಸವರಾಜ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅವಿನಾಶ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.