ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಇತ್ತೀಚೆಗೆ ಡೆಂಘೀ ಜ್ವರ ಉಲ್ಬಣಗೊಳ್ಳುತ್ತಿದ್ದು, ಇದರ ವಿರುದ್ಧ ಜಾಗೃತವಾಗಿರಬೇಕು ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಶೋಕ ಸೂರ್ಯವಂಶಿ ಹೇಳಿದರು.ಸ್ಥಳೀಯ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಸಮಾಜಶಾಸ್ತ್ರ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಹಾಗೂ ಪಾಲಕರ ಸಂಘ ಹಾಗೂ ಸಾರ್ವಜನಿಕ ಆಸ್ಪತ್ರೆ ಮುಧೋಳ ಇವರ ಸಹಯೋಗದಲ್ಲಿ ಶುಕ್ರವಾರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಡೆಂಘೀ ಜ್ವರ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದ ಅವರು, ಡೆಂಘೀ ಅಥವಾ ಡೆಂಘೀ ಜ್ವರಕ್ಕೆ ಸೊಳ್ಳೆಗಳೇ ಮುಖ್ಯ ಕಾರಣ. ಸೊಳ್ಳೆಗಳು ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ನಿಮ್ಮ ಮನೆಯ ಹತ್ತಿರ ಸೊಳ್ಳೆ ಉತ್ಪತ್ತಿಯಾಗುವ ಯಾವುದೇ ಮೂಲಗಳನ್ನು ತೊಡೆದುಹಾಕಿ, ಹೂವಿನ ಕುಂಡಗಳು, ಬಿಸಾಡಿದ ಹಳೆಯ ಬಕೆಟ್ಗಳು, ಹಳೆಯ ಟೈರ್‌ಗಳು ಮತ್ತು ನಿಯಮಿತವಾಗಿ ನೀರನ್ನು ಸಂಗ್ರಹಿಸಬಹುದಾದ ನೀರಿನ ತೊಟ್ಟಿಯನ್ನು ಪರೀಕ್ಷಿಸಿ ಮತ್ತು ಖಾಲಿ ಮಾಡಿ, ಮಕ್ಕಳ ಚರ್ಮಕ್ಕೆ ಅವರ ವಯಸ್ಸಿಗೆ ಅನುಗುಣ ವಾದ ಸುರಕ್ಷಿತ ಸೊಳ್ಳೆ ನಿವಾರಕ ಕ್ರೀಮ್ ಬಳಸಿ ಎಂದರು.
ಚಿಕ್ಕಮಕ್ಕಳ ತಜ್ಞವೈದ್ಯ ಡಾ.ರವಿ ಬದ್ನೂರ ಮಾತನಾಡಿ, ಮಕ್ಕಳು ಮಲಗುವ ಹಾಸಿಗೆಗಳಿಗೆ ಸೊಳ್ಳೆ ಪರದೆ ಅಳವಡಿಸಿ. ಸೊಳ್ಳೆಗಳು ನಿಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯಲು ಕಿಟಕಿಗಳು ಮತ್ತು ಬಾಗಿಲುಗಳನ್ನು ತೆರೆಯಬೇಡಿ. ಮಕ್ಕಳನ್ನು ಹೊರಗಡೆ ಕಳಿಸುವಾಗ ಸಂಪೂರ್ಣ ದೇಹ ಕವರ್ ಆಗುವ ಬಟ್ಟೆಗಳನ್ನು ಹಾಕಿ. ಉದ್ದನೆಯ ತೋಳಿನ ಟಾಪ್/ಶರ್ಟ್, ಉದ್ದನೆಯ ಪ್ಯಾಂಟ್, ಸಾಕ್ಸ್ ಮತ್ತು ಶೂಗಳನ್ನು ಹಾಕಿ ಕಳುಹಿಸಿ. ಸ್ಥಳೀಯ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಡೆಂಘೀ ಜಾಗೃತಿ ಕುರಿತು ಅಗತ್ಯ ಮಾಹಿತಿ ಪಡೆದುಕೊಳ್ಳಿ ಎಂದು ತಿಳಿಸಿದರು.ಸೊಳ್ಳೆ ಕಡಿದ ಬಳಿಕ ಚಿಕ್ಕದಾಗಿ ಜ್ವರ ಕಾಣಿಸಿಕೊಂಡಂದಿನಿಂದ ಸುಮಾರು ಹತ್ತರಿಂದ ಹದಿನಾಲ್ಕು ದಿನ ತೀವ್ರ ಜ್ವರ ಬಾಧಿಸಬಹುದು. ಆ ಬಳಿಕ ಸುಮಾರು ಒಂದು ವಾರದ ಕಾಲ ಇರುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಎಮ್.ವ್ಹಿ.ಜಿಗಬಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಆರ್.ಆರ್.ಮಾಲಿಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳ ಹಾಗೂ ಪಾಲಕರ ಸಂಘದ ಕಾಲೇಜು ಕಮೀಟಿ ಚೇರ್ಮನ್ ವಿಶ್ವನಾಥ ಮುನವಳ್ಳಿ ಹಾಗೂ ಆಸ್ಪತ್ರೆಯ ಎನ್.ಸಿ.ಡಿ ಕೋ-ಆರ್ಡಿನೇಟರ್ ಮಹಾದೇವ ಸಬರದ ಸಾಂದರ್ಭಿಕ ವಾಗಿ ಮಾತನಾಡಿದರು. ಪ್ರೊ.ಎಮ್.ಎಚ್.ಪಾಟೀಲ ನಿರೂಪಿಸಿ, ವಂದಿಸಿದರು.