ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಅಪ್ರಾಪ್ತ ಮಕ್ಕಳ ಸುರಕ್ಷತೆಗೆ ಎಚ್ಚರ ವಹಿಸುವ ಜೊತೆಗೆ ಶಾಲೆಗಳಲ್ಲಿ ವಿಶೇಷ ಕಾಳಜಿ ವಹಿಸಬೇಕು ಎಂದು ಇನ್ಸ್‌ಪೆಕ್ಟರ್ ರೇವತಿ ಹೇಳಿದರು.ತೇಗನಹಳ್ಳಿಯ ಆರ್ಶೀವಾದ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಸುರಕ್ಷತಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಶಿಕ್ಷಣ ಕಸಿಯುವುದು ತಪ್ಪು. ಓದುವ ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ಶಕ್ತಿಯಾಗಲಿ. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ, ಮಾನಸಿಕ ಹಿಂಸೆ ನೀಡುವುದು ಸಾಮಾನ್ಯವಾಗುತ್ತಿದೆ. ಇಂತಹ ಪ್ರಕರಣಗಳು ಜರುಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಅಪ್ರಾಪ್ತ ಮಕ್ಕಳ ಶೋಷಣೆ ಮಾಡಿದರೆ ಫೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆ ಇದೆ. ಬುದ್ಧಿ ಪಕ್ವತೆ ಇಲ್ಲದೆ ಎಲ್ಲವನ್ನು ಸುಲಭವಾಗಿ ನಂಬುವ ಮಕ್ಕಳಿಗೆ ಸರಿ ತಪ್ಪು ತಿಳಿಸುವ ಕೆಲಸವನ್ನು ಶಿಕ್ಷಕರು, ಪೋಷಕರು ಮಾಡಬೇಕು ಎಂದರು.ಪ್ರೌಢಾವಸ್ಥೆ ಮಕ್ಕಳು ಬಲುಬೇಗ ಆಕರ್ಷಣೆಗೆ ಸಿಲುಕುತ್ತಾರೆ. ಕೆಲ ಕಿಡಿಗೇಡಿಗಳು ಡ್ರಾಪ್ ನೆಪ, ಮೊಬೈಲ್ ಮತ್ತಿತರ ಆಮಿಷ ತೋರಿಸಿ ಮಕ್ಕಳನ್ನು ಪ್ರೀತಿ, ಪ್ರೇಮ ಚಟುವಟಿಕೆಗೆ ಸಿಲುಕಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುವ ಬೆದರಿಕೆಯಂತಹ ಪ್ರಕರಣಗಳು ನಡೆಯುತ್ತಿದೆ. ಆದ್ದರಿಂದ ಇನ್‌ಸ್ಟ್ರಾಗ್ರಂ, ಚಾಟಿಂಗ್‌ಗಳಿಂದ ದೂರವಿರಿ ಎಂದು ಎಚ್ಚರಿಸಿದರು.
ಮೊಬೈಲ್ ಇಂದು ಎಲ್ಲರ ಮನಸ್ಸು, ಭವಿಷ್ಯವನ್ನು ಹಾಳು ಮಾಡುತ್ತಿದೆ, ಮಕ್ಕಳಿಗೆ ಮೊಬೈಲ್‌ನಿಂದ ದೂರವಿರಿಸಬೇಕು. ಉತ್ತಮ ಪುಸ್ತಕ, ಪತ್ರಿಕೆ ನೀಡಬೇಕು. ಹೆಚ್ಚು ಕಾಲ ಮಕ್ಕಳೊಂದಿಗೆ ಪೋಷಕರು ಬೆರೆಯಬೇಕು ಎಂದರು.ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯ ಸುರಕ್ಷತೆ ಒದಗಿಸಬೇಕು. ಅಪರಿಚಿತರು ಸಿಹಿ ತಿನಿಸು, ಯಾವುದೇ ವಸ್ತು ನೀಡಿದರು ಸ್ವೀಕರಿಸದಂತೆ ಮಕ್ಕಳಿಗೆ ತಿಳಿಸಬೇಕು. ಶಾಲಾವಾಹನ, ಶೌಚಾಲಯದಲ್ಲಿ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.
ಮಕ್ಕಳಿಗೆ ಯೋಗ, ಧ್ಯಾನ, ಆತ್ಮರಕ್ಷಣೆಗೆ ಕರಾಟೆಯಂತಹ ವಿದ್ಯೆ ಕಲಿಸಿಕೊಡಿ. ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡಿ ಸಮಸ್ಯೆಗೆ ಸಿಲುಕಿಕೊಂಡು ದಂಡ ಶಿಕ್ಷೆ ಅನುಭವಿಸದಿರಿ ಎಂದು ಕಿವಿ ಮಾತು ಹೇಳಿದರು.ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಪೋಷಕರು ಭಾಗವಹಿಸಿ ಮಕ್ಕಳ ಸುರಕ್ಷತೆ ಕ್ರಮದ ಕುರಿತು ಚರ್ಚಿಸಿದರು. ಜೋಸಲಿನಾ ಕ್ರಾಸ್ತ, ಅರ್ಚನಾ ಸಿಕ್ವೇರಾ, ಅರ್ಚನಾ ಉಪಸ್ಥಿತರಿದ್ದರು.ನಿರುದ್ಯೋಗಿಗಳಿಗೆ 5ರಂದು ನೇರ ಸಂದರ್ಶನ
ಮಂಡ್ಯ:ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಮೆ.ಆಕ್ಸಿಸ್ ಬ್ಯಾಂಕ್, ಮೆ.ಇ.ಎಸ್.ಎಸ್.ವಿ.ಇ.ಇ ರಿಕ್ರೂಟೆಕ್, ಮೆ.ಪೀಪಲ್ ಸೆಕ್ಯೂರಂ ಎಚ್.ಆರ್ ಪ್ರೈ,ಲಿ., ಮೆ.ನಿವಬುಪ ಹೆಲ್ತ್ ಇನ್ಸೂರೆನ್ಸ್ ಕಂಪನಿ ಲಿ., ಮತ್ತು ಮೆ.ಸ್ಪೆಕ್ಟ್ರಂ ಟೂಲ್ಸ್ ಸಂಸ್ಥೆಗಳ ಸಹಯೋಗದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ನೇರ ಸಂದರ್ಶನ ನಡೆಯಲಿದೆ.ಸಂಸ್ಥೆಗಳಲ್ಲಿ ಖಾಲಿಯಿರುವ ಬ್ಯುಸಿನಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್, ಈಸಿ ಕಸ್ಟಮರ್ ಅಸೋಸಿಯೇಟ್, ಟೆಕ್ನಿಷಿಯನ್, ಮೆಷಿನ್ ವಕ್ಸ್ ಮತ್ತು ಟೆಲಿಸೇಲ್ಸ್, ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ (ಯಾವುದೇ ಟ್ರೇಡ್), ಡಿಪ್ಲಮೊ (ಯಾವುದೇ ಟ್ರೇಡ್), ಬಿ.ಇ (ಮೆಕ್ಯಾನಿಕಲ್) ಹಾಗೂ ಯಾವುದೇ ಪದವಿ ಉತ್ತೀರ್ಣರಾದ 18 ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ಜುಲೈ 5 ರಂದು ಬೆಳಗ್ಗೆ 10 ಗಂಟೆಗೆ ಮಂಡ್ಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ತಮ್ಮ ರೆಸ್ಯೂಮೆ/ ಬಯೋಡೇಟಾಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ದೂ-08232-295124, ಮೊ-9164642684 ಮತ್ತು ಮೊ-8970646629 ನ್ನು ಸಂಪರ್ಕಿಸಬಹುದು.