ವಚನ ಸಂರಕ್ಷಕ ಫ.ಗು.ಹಳಕಟ್ಟಿ ಬಹುಮುಖ ಪ್ರತಿಭೆ: ಸಿಎಂ

| Published : Jul 03 2024, 12:22 AM IST

ಸಾರಾಂಶ

ಡಾ। ಫ.ಗು.ಹಳಕಟ್ಟಿಯವರ ಜನ್ಮ ದಿನದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಳ್ಳಿ, ಹಳ್ಳಿ ಸುತ್ತಿ ವಚನಗಳನ್ನು ಸಂರಕ್ಷಿಸಿದ ಡಾ। ಫ.ಗು.ಹಳಕಟ್ಟಿ ಅವರು ಸಾಹಿತ್ಯ, ಸಹಕಾರ, ರಾಜಕೀಯ, ಪತ್ರಿಕೋದ್ಯಮ ಸೇರಿದಂತೆ ಹಲವು ರಂಗಗಳಲ್ಲೂ ಕಾರ್ಯ ನಿರ್ವಹಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.

ಡಾ। ಫ.ಗು.ಹಳಕಟ್ಟಿಯವರ ಜನ್ಮ ದಿನದ ಅಂಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

ಸೈಕಲ್‌ನಲ್ಲಿ ಹಳ್ಳಿ-ಹಳ್ಳಿಗಳನ್ನು ಸುತ್ತಿ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಮುಂದಿನ ತಲೆಮಾರಿಗೆ ದಾಟಿಸುವಲ್ಲಿ ಹಳಕಟ್ಟಿಯವರ ಕೊಡುಗೆ ಅಪಾರವಾಗಿದೆ. ಹಳಕಟ್ಟಿ ಅವರು ರಾಜಕೀಯ, ಸಹಕಾರ ಕ್ಷೇತ್ರ, ಪತ್ರಿಕೋದ್ಯಮ, ಸಾಹಿತ್ಯ, ಕರ್ನಾಟಕ ಏಕೀಕರಣ ಹೋರಾಟ, ವಕೀಲಿಕೆ ಸೇರಿದಂತೆ ಹಲವು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಬಹುಮುಖ ಪ್ರತಿಭೆಯಾಗಿದ್ದರು ಎಂದು ನೆನಪಿಸಿಕೊಂಡರು.

ಮನುಷ್ಯರನ್ನು ಪ್ರೀತಿಸಬೇಕು:

ಬಸವಾದಿ ಶರಣರ ಆಶಯದಂತೆ ನಾವು ಮನುಷ್ಯರಾಗಿ, ಪರಸ್ಪರ ಮನುಷ್ಯರನ್ನು ಪ್ರೀತಿಸುವಂತೆ ಆಗಬೇಕು. ನಮ್ಮ ಜಾತಿ ವ್ಯವಸ್ಥೆಯಲ್ಲಿ ಮೇಲು ಜಾತಿಯ ಹೆಣ್ಣು ಮಕ್ಕಳಿಗೂ ಶಿಕ್ಷಣಕ್ಕೆ ಅವಕಾಶವಿರಲಿಲ್ಲ. ಬಸವಾದಿ ಶರಣರು ಶಿಕ್ಷಣಕ್ಕೆ ಅವಕಾಶ ಒದಗಿಸಿಕೊಟ್ಟರು. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಮೆರಗು ನೀಡಿದ ಮೈಲಿಗಲ್ಲುಗಳಾಗಿವೆ ಎಂದು ಬಣ್ಣಿಸಿದರು.

ವಚನ ಸಾಹಿತ್ಯ ಜನಸಾಮಾನ್ಯರಿಗೆ ಅತ್ಯಂತ ಸುಲಭವಾಗಿ ಅರ್ಥ ಆಗುವ ಜನಸಾಮಾನ್ಯರ ಭಾಷೆಯಲ್ಲಿತ್ತು. ಅದಕ್ಕೂ ಮೊದಲು ಜನ ಸಾಮಾನ್ಯರಿಗೆ ಹೆಚ್ಚು ತಿಳಿದಿರದ, ಅರ್ಥವಾಗದ ಭಾಷೆಯಲ್ಲಿ ಧರ್ಮವನ್ನು ಪ್ರಚಾರ ಮಾಡಲಾಗುತ್ತಿತ್ತು. ಜನಸಾಮಾನ್ಯರ ಭಾಷೆಯಲ್ಲಿ ಜನರಿಗೆ ಹತ್ತಿರ ಇದ್ದುದರಿಂದಲೇ ಬಸವಣ್ಣ ಜನಸಮುದಾಯದೊಳಗೆ ಬೆರೆತು ಹೋದರು ಎಂದು ವಿಶ್ಲೇಷಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಇಲಾಖೆಯ ನಿರ್ದೇಶಕಿ ಧರಣೀದೇವಿ ಮಾಲಗತ್ತಿ , ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.ಕೋಟ್‌...

ವಕೀಲರಾಗಿದ್ದ ಹಳಕಟ್ಟಿ ಅವರು ವಕೀಲಿಕೆ ಬಿಟ್ಟು ಹಳ್ಳಿ-ಹಳ್ಳಿ ತಿರುಗಿ ವಚನಗಳನ್ನು ಸಂಗ್ರಹಿಸಿ ಸಂರಕ್ಷಿಸಿದರು. ಅಪ್ರಕಟಿತ ತಾಳೆಗರಿಗಳನ್ನು ಸಂಗ್ರಹಿಸಿ ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ಕಾರ್ಯ ಮಾಡಿದ್ದಾರೆ.

-ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವಸರ್ಕಾರವು ವಚನ ಸಾಹಿತ್ಯ ಸಂಶೋಧನಾ ಪ್ರಾಧಿಕಾರ ಸ್ಥಾಪಿಸಬೇಕು. ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಪೀಠಗಳಿವೆ. ಯಾವ ಪೀಠಗಳೂ ಕೆಲಸ ಮಾಡುತ್ತಿಲ್ಲ. ಬೇಕಾದಷ್ಟು ಹಸ್ತಪ್ರತಿಗಳಿದ್ದು ಸಂಶೋಧನೆ ನಡೆಸುವವರೇ ಇಲ್ಲದಂತಾಗಿದೆ.

-ಪ್ರೊ.ಬಸವರಾಜ ಸಬರದ, ಸಾಹಿತಿ