ಹುಬ್ಬಳ್ಳಿ ಗಣೇಶೋತ್ಸವ ಉತ್ತರ ಕರ್ನಾಟಕದಲ್ಲೇ ಹೆಸರು ಪಡೆದಿದೆ. ಇದರ ವೀಕ್ಷಣೆಗೆ ಹೊರ ರಾಜ್ಯ, ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ವೈಯಕ್ತಿಕ ದ್ವೇಷ, ಸಮಾಜಘಾತುಕ ಶಕ್ತಿಗಳು ಎದ್ದು ಕೂರಬಾರದೆಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪರೇಡ್‌ ನಡೆಸಿ ಎಚ್ಚರಿಕೆ ನೀಡಲಾಗಿದೆ.

ಹುಬ್ಬಳ್ಳಿ: ಹಬ್ಬದಾಚರಣೆಯಲ್ಲಿ ಬಾಲಬಿಚ್ಚಿದರೆ ಹುಷಾರು. ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ..!

ಗಣೇಶನ ಹಬ್ಬ ಹಾಗೂ ಈದ್‌ ಮಿಲಾದ್‌ ಹಬ್ಬದ ನಿಮಿತ್ತ ಇಲ್ಲಿನ ಹಳೇ ಸಿಎಆರ್‌ ಮೈದಾನದಲ್ಲಿ ಗುರುವಾರ ನಡೆಸಿದ ರೌಡಿಗಳ ಪರೇಡ್‌ನಲ್ಲಿ ಕಮಿಷನರ್‌ ಎನ್‌. ಶಶಿಕುಮಾರ ನೀಡಿರುವ ಎಚ್ಚರಿಕೆ ಇದು.

ಅಕ್ರಮ ಹಾಗೂ ಸಮಾಜಘಾತುಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ರೌಡಿಶೀಟರ್‌ಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಹಬ್ಬದಲ್ಲಿ ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ತಾಕೀತು ಮಾಡಿದರು.

ಹು-ಧಾ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 1800ಕ್ಕೂ ಹೆಚ್ಚು ರೌಡಿಶೀಟರ್‌ಗಳು ಇದ್ದರು. 506 ಜನರ ರೌಡಿಪಟ್ಟಿ ಕ್ಲೋಸ್‌ ಮಾಡಲಾಗಿದೆ. ಹೊಸದಾಗಿ 101 ಜನರ ವಿರುದ್ಧ ರೌಡಿಶೀಟರ್‌ ತೆರೆಯಲಾಗಿದೆ. ಸದ್ಯ 1394 ರೌಡಿಶೀಟರ್‌ಗಳು ಇದ್ದಾರೆ. 750 ರೌಡಿಶೀಟರ್‌ಗಳು ಪರೇಡ್‌ಗೆ ಆಗಮಿಸಿದ್ದು, ಕೆಲವರು ಬೇರೆ ಬೇರೆ ಕಾರಣದಿಂದ ಆಗಮಿಸಿಲ್ಲ. ಬಾರದೇ ಇರುವವರಿಂದ ಬಾಂಡ್‌ ಬರೆಸಿಕೊಳ್ಳಲಾಗಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಣೇಶೋತ್ಸವ ಉತ್ತರ ಕರ್ನಾಟಕದಲ್ಲೇ ಹೆಸರು ಪಡೆದಿದೆ. ಇದರ ವೀಕ್ಷಣೆಗೆ ಹೊರ ರಾಜ್ಯ, ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ವೈಯಕ್ತಿಕ ದ್ವೇಷ, ಸಮಾಜಘಾತುಕ ಶಕ್ತಿಗಳು ಎದ್ದು ಕೂರಬಾರದೆಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪರೇಡ್‌ ನಡೆಸಿ ಎಚ್ಚರಿಕೆ ನೀಡಲಾಗಿದೆ. ಇದರೊಟ್ಟಿಗೆ ಬಂದೋಬಸ್ತ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಹಬ್ಬಗಳ ನಿಮಿತ್ತ ಅಗತ್ಯ ದಿನಗಳಲ್ಲಿ ಹು-ಧಾ ಪೊಲೀಸ್‌ ಕಮಿಷನರೇಟ್‌, ಹೊರ ಜಿಲ್ಲೆ ಹಾಗೂ ಬೆಂಗಳೂರು ನಗರದಿಂದ ಪೊಲೀಸ್‌ ಸಿಬ್ಬಂದಿ ನಿಯೋಜಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಸಭೆ ನಡೆಸಿ ನಿಯೋಜಿಸುವ ಸೂಚನೆ ನೀಡುವ ನಿರೀಕ್ಷೆ ಇದೆ. ಸದ್ಯ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ಇದ್ದಾರೆ. ಕೆಎಸ್‌ಆರ್‌ಪಿ, ಆರ್‌ಎಎಫ್‌, ಹೊರ ಜಿಲ್ಲೆ, ಬೆಂಗಳೂರು ನಗರದಿಂದ ಸಿಬ್ಬಂದಿ ನಿಯೋಜಿಸಿಕೊಳ್ಳಲಾಗುವುದು ಎಂದರು.

ಅವಳಿನಗರದಲ್ಲಿ ಖಾಸಗಿ ಸೇರಿ 30 ಸಾವಿರ ಸಿಸಿಟಿವಿ ಕ್ಯಾಮರಾಗಳಿವೆ. ಮೆರವಣಿಗೆ ಮಾರ್ಗದಲ್ಲಿ 6 ಸಾವಿರ ಸಿಸಿ ಕ್ಯಾಮರಾಗಳ ಕಣ್ಗಾವಲು ಇರಲಿದೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಕುಳಿತುಕೊಳ್ಳಲು ಹುಬ್ಬಳ್ಳಿಯಲ್ಲಿ 12, ಧಾರವಾಡದಲ್ಲಿ 6 ಸುರಕ್ಷತಾ ವಲಯ ತೆರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸುಪ್ರೀಂಕೋರ್ಚ್‌ ಮಾರ್ಗಸೂಚಿ ಅನ್ವಯ ಡಿಜೆ ಬಳಕೆ ಸಮಯ ರಾತ್ರಿ 10ಕ್ಕೆ ಮುಕ್ತಾಯವಾಗಲಿದೆ. ಅಂಜುಮನ್‌ ಕಮಿಟಿ ಈದ್‌ ಮಿಲಾದ್‌ನಲ್ಲಿ ಡಿಜೆ ಬಳಸುವುದಿಲ್ಲ ಎಂದು ಹೇಳಿದೆ. ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆಯಾಗಲಿರುವ ಗಣೇಶ ಮೂರ್ತಿ ವಿಸರ್ಜನೆ ವೇಳೆಯೂ ಸಾಂಪ್ರದಾಯಿಕ ವಾದ್ಯ ಬಳಸುವ ಆಶಯ ವ್ಯಕ್ತವಾಗಿದೆ. ಹೀಗೆ ಪ್ರತಿಯೊಬ್ಬರೂ ಇಂಥ ನಿರ್ಧಾರ ತೆಗೆದುಕೊಳ್ಳುವ ಮೂಲಕ ಹುಬ್ಬಳ್ಳಿ ಗಣೇಶೋತ್ಸವ ಮೆರುಗು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಇತ್ತೀಚೆಗೆ ನಡೆದ ಶಾಂತಿ ಸಭೆಯಲ್ಲಿ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ಫ್ಲೈಓವರ್‌ ಕಾಮಗಾರಿ ಮಾರ್ಗದಲ್ಲಿ ಗಣೇಶ ಮೂರ್ತಿ ಮೆರವಣಿಗೆಗೆ ಅನುಕೂಲ ಮಾಡಿಕೊಡಬೇಕೆಂಬ ಮನವಿ ಬಂದಿವೆ. 2-3 ದಿನದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ತೀರ್ಮಾನಿಸಲಾಗುವುದು. ಅವಳಿ ನಗರದ 980 ಸ್ಥಳಗಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಏಕಗವಾಕ್ಷಿ ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ನೀಡಲಾಗುವುದು ಎಂದರು.

ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್‌, ಯಲ್ಲಪ್ಪ ಕಾಶಪ್ಪನವರ, ಎಸಿಪಿ ಶಿವಪ್ರಕಾಶ ನಾಯ್ಕ ಸೇರಿದಂತೆ ಇತರರು ಇದ್ದರು.