ಡೆಂಘೀ ನಿಯಂತ್ರಣಕ್ಕೆ ಸೊಳ್ಳೆಗಳು ಉತ್ಪತ್ತಿ ಆಗದಂತೆ ಎಚ್ಚರಿಕೆ ವಹಿಸಿ: ಡಾ. ಕೌಲಗುಡ್ಡ

| Published : Jul 31 2024, 01:08 AM IST

ಸಾರಾಂಶ

ಪ್ರತಿಯೊಬ್ಬರು ಸೊಳ್ಳೆಗಳು ಕಚ್ಚದಂತೆ ಸ್ವಯಂ ಎಚ್ಚರ ವಹಿಸಿಕೊಳ್ಳಲು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ವೈದ್ಯ ಡಾ.ರಾಮ ಎಸ್‌. ಕೌಲಗುಡ್ಡ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಡೆಂಘೀ ರೋಗ ಉಲ್ಬಣಗೊಂಡಿದ್ದು, ಮಳೆಗಾಲದ ಸಮಯದಲ್ಲಿ ಸೊಳ್ಳೆಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರು ಸೊಳ್ಳೆಗಳು ಕಚ್ಚದಂತೆ ಸ್ವಯಂ ಎಚ್ಚರ ವಹಿಸಿಕೊಳ್ಳಲು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯ ವೈದ್ಯ ಡಾ. ರಾಮ ಎಸ್‌. ಕೌಲಗುಡ್ಡ ಸಲಹೆ ನೀಡಿದರು.

ಇಲ್ಲಿಯ ಲಯನ್ಸ್‌ ಸಂಸ್ಥೆಯು ಆಯೋಜಿಸಿದ್ದ ವೈದ್ಯರ ದಿನೋತ್ಸವದಲ್ಲಿ ಗೌರವ ಸ್ವೀಕರಿಸಿದ ಅವರು, ಆಯಾ ರೋಗಗಳ ಬಗೆಗೆ ಎಚ್ಚರಿಕೆ ಕ್ರಮಗಳನ್ನು ವಹಿಸದೇ ಇರುವುದೇ ರೋಗಗಳು ಉಲ್ಬಣವಾಗಲು ಕಾರಣ. ಅದೇ ರೀತಿ ಸದ್ಯ ಡೆಂಘೀ ಸೋಂಕಿಗೆ ಮಕ್ಕಳಾದಿಯಾಗಿ ದೊಡ್ಡವರು ಸಹ ಗುರಿಯಾಗುತ್ತಿದ್ದಾರೆ. ಇದು ಸೊಳ್ಳೆಯಿಂದ ಹರಡುವ ವೈರಲ್ ಸೋಂಕಾಗಿದ್ದು, ರಕ್ತಸ್ರಾವ, ಬಿಳಿ ರಕ್ತ ಕಣ ಕಡಿಮೆಯಾಗುವುದು, ಅತ್ಯಂತ ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಮನೆ ಹಾಗೂ ವಾಸಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜ್ವರ ಬಂದರೆ ನಿರ್ಲಕ್ಷ್ಯ ಮಾಡದೇ ವೈದ್ಯರಿಗೆ ತೋರಿಸಿ ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು ಎಂದರು.

ಡಾ. ಶ್ರುತಿ ಕೌಲಗುಡ್ಡ ಮಾತನಾಡಿ, ದೇಹದಲ್ಲಿ ವಿಟಮಿನ್ ಬಿ 12 ಕೊರತೆಯು ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಕ್ತಹೀನತೆ, ನರ ಹಾನಿ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅಸ್ವಸ್ಥತೆಯ ಅಪಾಯ ಹೆಚ್ಚಿಸುತ್ತದೆ. ಮೀನು, ಮೊಟ್ಟೆ ಅಂತಹ ಪ್ರೋಟಿನ್‌ ಯುಕ್ತ ಆಹಾರ ಸೇವಿಸುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಲಯನ್‌ ಸಂಸ್ಥೆ ಅಧ್ಯಕ್ಷ ಗುರುರಾಜ ಪಿಸೆ, ಯಾವುದೇ ರೋಗ ಹರಡುವುದಕ್ಕಿಂತ ಮುಂಚಿತವಾಗಿ ಎಚ್ಚರಿಕೆ ಕ್ರಮಗಳನ್ನು ವಹಿಸುವುದು ಸೂಕ್ತ. ಇದರಿಂದ ಆರ್ಥಿಕವಾಗಿಯೂ ತೊಂದರೆಗೆ ಒಳಗಾಗುವುದು ತಪ್ಪುತ್ತದೆ. ಸಂಸ್ಥೆಯು ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಇದೆ ಎಂದರು.

ಸಂಸ್ಥೆಯ ಹಿರಿಯರಾದ ಆರ್.ಕೆ. ಹೆಗಡೆ, ಜಿಲ್ಲಾ ಮಾಜಿ ಗವರ್ನರ್ ಹರ್ಷ ದೇಸಾಯಿ, ಖಜಾಂಚಿ ವೃಷಭ ಕರೋಲೆ ಇದ್ದರು. ನಂದಿನಿ ಬಾಗಿ ಪರಿಚಯಿಸಿದರು. ಕಾರ್ಯದರ್ಶಿ ಕವಿತಾ ಅಂಗಡಿ ನಿರೂಪಿಸಿದರು. ಹಿರಿಯರಾದ ಭುಜಂಗ ಶೆಟ್ಟಿ ವಂದಿಸಿದರು.