ಕಚೇರಿಗೆ ಬಂದ ಜನರೊಂದಿಗೆ ಮೊದಲು ಸರಿಯಾಗಿ ವರ್ತಿಸಿ

| Published : Aug 30 2024, 01:04 AM IST

ಸಾರಾಂಶ

ಚನ್ನರಾಯಪಟ್ಟಣ ತಾಲೂಕು ಪಂಚಾಯಿತಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶ್ರೇಯಸ್‌ ಎಂ ಪಟೇಲ್‌ ಅವರು, ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ನಮ್ಮ ಬಳಿ ಬರುವುದನ್ನು ತಪ್ಪಿಸಿ ಅಧಿಕಾರಿಗಳು ಕೆಲಸ ಮಾಡಿಕೊಡುವುದಾದರೆ ನೇರವಾಗಿ ಹೇಳಿ, ಅದನ್ನು ಬಿಟ್ಟು ದಿನಗಟ್ಟಲೆ ರೈತರನ್ನು ಅಲೆಸಿ ಅವರ ಚಪ್ಪಲಿಯನ್ನು ಸವೆಸಬೇಡಿ ಎಂದರು. ನಾವು ಜನರಿಂದ ಆಯ್ಕೆಯಾಗಿದ್ದೇವೆ. ನಮ್ಮದು ಐದು ವರ್ಷದ ಅಧಿಕಾರ. ಆದರೆ ಅಧಿಕಾರಿಗಳದ್ದು ಐವತ್ತು ವರ್ಷದ ಅಧಿಕಾರ. ಆ ಅಧಿಕಾರವನ್ನು ಸರಿಯಾಗಿ ಉಪಯೋಗಿಸಿ ಜನರ ಸೇವೆಗೆ ಅವಕಾಶ ಮಾಡಿಕೊಡಿ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಎಲ್ಲಾ ಇಲಾಖೆಗಳ ನೌಕರರು ಕಚೇರಿಗೆ ಬಂದ ರೈತರು ಹಾಗೂ ಸಾರ್ವಜನಿಕರ ಜೊತೆ ಸರಿಯಾಗಿ ವರ್ತಿಸದೆ ಬೇಜವಾಬ್ದಾರಿ ತೋರಿದರೆ ಅಂತಹವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಅವರು ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ನಮ್ಮ ಬಳಿ ಬರುವುದನ್ನು ತಪ್ಪಿಸಿ ಅಧಿಕಾರಿಗಳು ಕೆಲಸ ಮಾಡಿಕೊಡುವುದಾದರೆ ನೇರವಾಗಿ ಹೇಳಿ, ಅದನ್ನು ಬಿಟ್ಟು ದಿನಗಟ್ಟಲೆ ರೈತರನ್ನು ಅಲೆಸಿ ಅವರ ಚಪ್ಪಲಿಯನ್ನು ಸವೆಸಬೇಡಿ ಎಂದರು.

ನಾವು ಜನರಿಂದ ಆಯ್ಕೆಯಾಗಿದ್ದೇವೆ. ನಮ್ಮದು ಐದು ವರ್ಷದ ಅಧಿಕಾರ. ಆದರೆ ಅಧಿಕಾರಿಗಳದ್ದು ಐವತ್ತು ವರ್ಷದ ಅಧಿಕಾರ. ಆ ಅಧಿಕಾರವನ್ನು ಸರಿಯಾಗಿ ಉಪಯೋಗಿಸಿ ಜನರ ಸೇವೆಗೆ ಅವಕಾಶ ಮಾಡಿಕೊಡಿ. ಆಗ ನಿಮ್ಮ ಕುಟುಂಬಗಳೂ ಚೆನ್ನಾಗಿರುತ್ತವೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಿಂತ ಡಿ.ಗ್ರೂಪ್ ನೌಕರರು ರೋಗಿಗಳ ಹತ್ತಿರ ಹೆಚ್ಚು ದಬ್ಬಾಳಿಕೆ ನಡೆಸುತ್ತಾರೆ ಎಂದು ದೂರು ಕೂಡ ಬಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ. ಸ್ವಚ್ಛತೆ, ವೈದ್ಯರ ಸೇವೆ, ರೋಗಿಗಳಿಗೆ ಊಟದ ವ್ಯವಸ್ಥೆ, ಶೌಚಾಲಯಗಳು ಸ್ವಚ್ಛತೆಯಿಲ್ಲದೆ ಅನಾರೋಗ್ಯಕ್ಕೆ ಕಾರಣವಾಗಿದ್ದು, ಕೂಡಲೆ ಎಲ್ಲವನ್ನು ಸರಿಪಡಿಸಿ. ಬಡ ಜನರು ಹಣ ತಂದು ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುವುದಿಲ್ಲ. ಆದರೆ ನಿಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿದ್ದು ಇದರ ಬಗ್ಗೆ ಸಾಕಷ್ಟು ದೂರುಗಳು ಸಹ ಬಂದಿವೆ, ಜಿಲ್ಲೆಯಲ್ಲಿ ಸಕಲೇಶಪುರ ಬಿಟ್ಟರೆ ನಿಮ್ಮ ತಾಲೂಕಿನಲ್ಲೇ ಹೆಚ್ಚು ಸಮಸ್ಯೆಗಳಿವೆ ಎಂದು ಸರ್ಕಾರಿ ವೈದ್ಯಾಧಿಕಾರಿ ಡಾ.ವಿ.ಮಹೇಶ್ ಅವರಿಗೆ ತರಾಟೆ ತೆಗೆದುಕೊಂಡರು.

ಇದಕ್ಕೆ ಉತ್ತರಿಸಿದ ಮಹೇಶ್‌ರವರು ರಾಜ್ಯದಲ್ಲೇ ಐದನೇ ಉತ್ತಮ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ನಮ್ಮ ತಾಲೂಕು ಆಸ್ಪತ್ರೆ ಪಾತ್ರವಾಗಿದೆ. ಆದರೆ ರಾತ್ರಿ ಪಾಳಯದಲ್ಲಿ ವೈದ್ಯರ ಸಮಸ್ಯೆ ಇದ್ದು, ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಿಕೊಡುವಂತೆ ಸಂಸದರಿಗೆ ತಿಳಿಸಿದರು. ನಂತರ ಸಂಸದರು ಮಾತನಾಡಿ, ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡಿ ಬೇಜವಾಬ್ದಾರಿ ಕೆಲಸ ಮಾಡುವ ಇಂತಹ ಅಲಕ್ಷ್ಯ ತೋರುವ ಅಧಿಕಾರಿಗಳು ಜನರ ಕೆಲಸವನ್ನು ಹೇಗೆ ಮಾಡಲು ಸಾಧ್ಯ ಎಂದು ಇಒ ಅವರಿಗೆ ಪ್ರಶ್ನಿಸಿದರು.

ಮಕ್ಕಳಿಗೆ ವಸತಿ ನಿಲಯಗಳಲ್ಲಿ ಸರಿಯಾದ ಊಟ ನೀಡಬೇಕು. ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸುವುದು ಅಡುಗೆ ಕೆಲಸ ಮಾಡಿಸುವ ಪ್ರಸಂಗಗಳು ಕಂಡುಬಂದರೆ ಅಂತಹ ನಿಲಯಪಾಲಕರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.

ಕೃಷಿ ಇಲಾಖೆಯಿಂದ ೪.೮೦ ಕೋಟಿ ಫಸಲ್ ಭಿಮಾ ಯೋಜನೆ ಅಡಿಯಲ್ಲಿ ರೈತರಿಗೆ ಹಣ ಸಂದಾಯವಾಗಿದೆ. ಇದುವರೆಗೂ ೨೪ ಸಾವಿರ ರೈತರು ಫಸಲ್ ಭಿಮಾ ಯೋಜನೆಯ ನೋಂದಣಿ ಮಾಡಿಸಿದ್ದು, ಇಲಾಖೆಯಿಂದ ಸಮರ್ಪಕವಾಗಿ ರೈತರಿಗೆ ಯೋಜನೆಗಳನ್ನು ತಲುಪಿಸಲಾಗುತ್ತದೆ ಎಂದು ಕೃಷಿ ಅಧಿಕಾರಿ ಎಂ. ಎಸ್. ಜನಾರ್ದನ್ ತಿಳಿಸಿದರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ್‌ ನವೀನ್‌ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್, ಪುರಸಭಾ ಮುಖ್ಯಾಧಿಕಾರಿ ಹೇಮಂತ್‌ ಕುಮಾರ್, ಕೆಇಬಿ ಅಧಿಕಾರಿ ಅಂಬಿಕಾ ಮತ್ತಿತರಿದ್ದರು.