ಸಾರಾಂಶ
ಹಾವೇರಿ: ರಾಜ್ಯದಲ್ಲಿರುವುದು ಜನಪ್ರಿಯವಲ್ಲ, ಜಾಹೀರಾತಿನ ಸರ್ಕಾರವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ದರಿದ್ರ ಹಾಗೂ ಲೂಟಿಕೋರ ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತೆಸೆಯಲು ಜನತೆ ನಿರ್ಧರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಸೋಮವಾರ ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಬೆಲೆ ಏರಿಕೆ ಗ್ಯಾರಂಟಿಯಾಗಿದೆ. ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಮೂಲಕ ಹಿಂದೂಗಳಿಗೆ ಅಪಮಾನ ಮಾಡಲಾಗುತ್ತಿದೆ. ಇದು ರೈತರು, ಬಡವರ ವಿರೋಧಿ ಸರ್ಕಾರವಾಗಿದೆ ಎಂದರು. ಗ್ಯಾರಂಟಿಗೆ ಹಣ ಹೊಂದಿಸಲು ಸಿಎಂ ಸಿದ್ದರಾಮಯ್ಯ ಪರದಾಡುತ್ತಿದ್ದಾರೆ. ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಯಡಿಯೂರಪ್ಪನ ಕಾಲದಲ್ಲಿ ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿತ್ತು. ಈ ಸರ್ಕಾರ ದೇಶದಲ್ಲೇ ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನದಲ್ಲಿದೆ ಎಂದು ಆರೋಪಿಸಿದರು.ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಎರಡು ವರ್ಷದಲ್ಲಿ ಒಂದು ರುಪಾಯಿ ಬಿಡಿಗಾಸಿನ ಹೊಸ ಯೋಜನೆ ಮಾಡಿಲ್ಲ. ಸರ್ಕಾರಿ ಕಾಮಗಾರಿಯಲ್ಲಿ ಮುಸಲ್ಮಾನರಿಗೆ ಶೇ. 4ರಷ್ಟು ಮೀಸಲಾತಿ, ಮುಸಲ್ಮಾನರ ಮದುವೆಯಾದರೆ ₹50 ಸಾವಿರ ಹಣ ಕೊಡ್ತಾರೆ. ಅವರಿಗೆ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ₹30 ಲಕ್ಷ ಕೊಡುತ್ತೇನೆ ಎಂದಿದ್ದಾರೆ. ನಿಮಗೆ ಹಿಂದೂಗಳು ಮತ ಹಾಕಿಲ್ಲವೇ, ಹಿಂದೂಗಳ ಬಡ ಮಕ್ಕಳು, ಹೆಣ್ಣುಮಕ್ಕಳು ನಿಮಗೆ ಕಾಣುತ್ತಿಲ್ಲವೇ? ನೀವು ಮುಸಲ್ಮಾನರಿಗೆ ಮಾತ್ರ ಮುಖ್ಯಮಂತ್ರಿಗಳಾ ಎಂದು ಪ್ರಶ್ನಿಸಿದರು. ಲೋಕಸಭಾ ಚುನಾವಣೆ ವೇಳೆ ದೇಶಕ್ಕೆ ಕರ್ನಾಟಕ ಮಾಡಲ್ ಅಂತ ಹೇಳಿ ಬೊಬ್ಬೆ ಹಾಕಿದರು. ಕಾಂಗ್ರೆಸ್ ಸರ್ಕಾರವಿರುವ ಹಿಮಾಚಲ ಪ್ರದೇಶ, ತೆಲಂಗಾಣದಲ್ಲೂ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದರು. ಈಗ ಅಲ್ಲಿ ನೌಕರರಿಗೆ ಸಂಬಳ ಕೊಡಲು ಆಗದ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲೂ ಇದೇ ಪರಿಸ್ಥಿತಿಯಿದೆ. ಬಡವರು ಮನೆ ಕಳೆದುಕೊಂಡರೆ ₹75 ಸಾವಿರ ಭಿಕ್ಷೆ ಕೊಟ್ಟಂತೆ ಕೊಡುತ್ತಾರೆ. ಅದೇ ಯಡಿಯೂರಪ್ಪ ಸಿಎಂ ಇದ್ದಾಗ ₹5 ಲಕ್ಷ ಕೊಡುತ್ತಿದ್ದರು.
₹850 ಕೋಟಿ ಹಾಲಿನ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದ್ದಾರೆ. 7 ತಾಸು ವಿದ್ಯುತ್ ಕೊಡಲು ಈ ಸರ್ಕಾರದಿಂದ ಆಗುತ್ತಿಲ್ಲ. ಹಿಂದೂ ಕಾರ್ಯತರ ಹತ್ಯೆ, ಗೋಹತ್ಯೆಯಂತ ಪ್ರಕರಣಗಳು ಹೆಚ್ಚುತ್ತಿದೆ. ಹಿಂದೂ ಕಾರ್ಯತರ ಮೇಲೆ ಮರಣಶಾಸನ ಬರೆಯುವಂತಹ ಕೆಲಸ ಆಗುತ್ತಿದೆ ಎಂದರು.ಬೆಳೆವಿಮೆ ಕೊಡಲು ಈ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಅಲುಗಾಡುವ ಸಂದರ್ಭದಲ್ಲಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಈಗ ಜಾತಿಗಣತಿ ವರದಿ ಅವರಿಗೆ ನೆನಪಾಗಿದೆ. ಈ ಹಿಂದೆ ಕಾಂತರಾಜ್ ಕಮಿಟಿ ಮಾಡಿ ವರದಿ ನೀಡಿದ್ದರೂ ಅದನ್ನು ಅನುಷ್ಠಾನಗೊಳಿಸದ ಸಿದ್ದರಾಮಯ್ಯ, ಈಗ ಕುರ್ಚಿ ಅಲುಗಾಡಲು ಶುರುವಾದಾಗ ಹಿಂದುಳಿದವರು ನೆನಪಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ.ಸಿ. ಪಾಟೀಲ, ಎನ್. ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಭರತ್ ಬೊಮ್ಮಾಯಿ ಮೊದಲಾದವರು ಇದ್ದರು. ಇದಕ್ಕೂ ಮುನ್ನ ನಗರದ ಪುರಸಿದ್ದೇಶ್ವರ ದೇವಸ್ಥಾನದ ಬಳಿಯಿಂದ ಎಂ.ಜಿ. ರಸ್ತೆ ಮಾರ್ಗವಾಗಿ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.