ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ದೇಶಕ್ಕೆ ಬುದ್ಧಿವಂತರಿಗಿಂತ ಜ್ಞಾನಿಗಳ ಅವಶ್ಯಕತೆ ಇದ್ದು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆಯಲ್ಲೂ ನಿಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಜ್ಞಾನಿಗಳಾಗಬೇಕಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಮಂಜುನಾಥ ಅಭಿಪ್ರಾಯಪಟ್ಟರು.ನಗರದ ಡಯಟ್ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಚಿತ್ರಕಲಾ ಪ್ರದರ್ಶನ, ಮಕ್ಕಳಿಗೆ ಬಹುಮಾನ ವಿತರಣೆ, ನಿವೃತ್ತ ಚಿತ್ರಕಲಾ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ಕಲೆ, ಸಾಹಿತ್ಯವನ್ನು ನಾವು ಎಲ್ಲಿ ಪಠ್ಯೇತರ ಚಟುವಟಿಕೆಯೊಂದಿಗೆ ಸೇರಿಸಿಕೊಳ್ಳುತ್ತೇವೋ ಅಲ್ಲಿಂದ ನಾವು ಹೃದಯವಂತರಾಗುತ್ತೇವೆ. ಬುದ್ಧಿವಂತಿಕೆಯೆಂಬುದು ದೇಶಕ್ಕೆ ಮಾರಕವಾಗಿದೆ. ಬುದ್ಧಿವಂತರಲ್ಲಿ ಹೃದಯವಂತಿಕೆ ಇರುವುದಿಲ್ಲ. ಜಾಗತಿಕ ಉಗ್ರನೆಂದೇ ಕರೆಯಲ್ಪಟ್ಟಿದ್ದ ಬಿನ್ ಲಾಡೆನ್ ವಿಶ್ವದ ಹಿರಿಯಣ್ಣ ಅಮೆರಿಕದಂತಹ ದೊಡ್ಡ ದೇಶಕ್ಕೆ ಬಾಂಬ್ ಹಾಕುವಷ್ಟು ಬುದ್ಧಿವಂತ. ಆದರೆ, ಆತನಲ್ಲಿ ಹೃದಯವಂತಿಕೆಯೆಂಬುದು ಇದ್ದಿದ್ದರೆ, ಶ್ರೇಷ್ಠ ವ್ಯಕ್ತಿಯಾಗಿರುತ್ತಿದ್ದ ಎಂದರು.
ಪರಮಹಂಸರು, ವಿವೇಕಾನಂದರು, ಬಸವಣ್ಣ ಕೂಡ ಹೃದಯವಂತಿಕೆ ಹೊಂದಿದ್ದರು. ಬುದ್ದಿವಂತಿಕೆಗೆ ಹೃದಯವಂತಿಕೆಯನ್ನೂ ಬೆಳೆಸಿಕೊಂಡು, ಜ್ಞಾನಿಗಳಾದರು. ವರನಟ ಡಾ.ರಾಜಕುಮಾರ, ಕ್ರಿಕೆಟ್ ಜೀವಂತ ದಂತಕಥೆ ಸಚಿನ್ ತೆಂಡೂಲ್ಕರ್ ಸೇರಿ ಅನೇಕರು ಕಲೆ, ಕ್ರೀಡೆ, ಸಾಹಿತ್ಯ, ಸಂಗೀತ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿ, ಸಮಾಜಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ಮಕ್ಕಳು ಪಠ್ಯದ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸರ್ವಾಂಗೀಣ ಬೆಳವಣಿಗೆ ಹೊಂದಬೇಕು ಎಂದು ಮಂಜುನಾಥ ಸಲಹೆ ನೀಡಿದರು.ಡಯಟ್ ನ ನಿವೃತ್ತ ಸಹಾಯಕ ನಿರ್ದೇಶಕ, ಶಿಕ್ಷಣ ತಜ್ಞ ಎಚ್.ಕೆ.ಲಿಂಗರಾಜ ಮಾತನಾಡಿ, ಮಕ್ಕಳಿಗೆ ಆಳವಾದ ಜ್ಞಾನ ನೀಡಿದರೆ ಸುಸಂಸ್ಕೃತ, ಸೃಜನಶೀಲ ಪ್ರಜೆಗಳಾಗಿ ರೂಪು ಹೊಂದುತ್ತಾರೆ. ರಾಷ್ಟ್ರೀಯ ಶಿಕ್ಷಣ ನೀತಿಯ ಚೌಕಟ್ಟು ಹೇಳುವಂತೆ ಮಕ್ಕಳಿಗೆ ಆಳವಾದ ಜ್ಞಾನ ನೀಡಿದಾಗ ಮಕ್ಕಳ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದು, ಸುಸಂಸ್ಕೃತರಾಗಿ, ಸೃಜನಶೀಲರಾಗಿ ಬೆಳೆಯುತ್ತಾರೆ. ತಾಯಿ ಬೇರುಗಳು ಗಟ್ಟಿಯಾದಷ್ಟು ಮರವು ಹೆಮ್ಮರವಾಗಿ ಬೆಳೆದಂತೆ ಮಕ್ಕಳಿಗೆ ಆಳವಾದ ಜ್ಞಾನ ನೀಡಬೇಕು. ಚಿತ್ರಕಲೆ ಸೇರಿದಂತೆ ಪಠ್ಯೇತರ ಚಟುವಟಿಕೆಗೂ ಪ್ರಾಮುಖ್ಯತೆ ನೀಡಬೇಕಿದೆ ಎಂದರು.
ಡಯಟ್ ಪ್ರಾಚಾರ್ಯರಾದ ಎಸ್.ಗೀತಾ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಪಿ.ನಾಗರಾಜ, ಕಾರ್ಯದರ್ಶಿ ಶಾಂತಯ್ಯ ಪರಡಿಮಠ, ಖಜಾಂಚಿ ಸಿ.ನಾಗರಾಜ, ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹನುಮಂತಪ್ಪ, ಅನುದಾನಿತ ಶಾಲಾ ಕಾಲೇಜು ನೌಕರ ಸಂಘದ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ನ್ಯಾಮತಿ ಕೆಪಿಎಸ್ ಮುಖ್ಯ ಶಿಕ್ಷಕ ಸಿದ್ದೇಶಪ್ಪ ಜಿಗಣಪ್ಪರ, ಸಂಘದ ರಾಜ್ಯ ಗೌರವ ಸಲಹೆಗಾರರಾದ ನಾಗಭೂಷಣ, ಚಿತ್ರಕಲಾ ಪರಿಷತ್ ನ ಎ. ಮಹಲಿಂಗಪ್ಪ ಇತರರು ಇದ್ದರು. ಇದೇ ವೇಳೆ ದಾವಣಗೆರೆ ಸಪಪೂ ಕಾಲೇಜು(ಪ್ರೌಢಶಾಲಾ ವಿಭಾಗ)ನ ವಿ.ಗುರುಮೂರ್ತಿ, ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜಿನ ನಾರಾಯಣ ಪಿ.ಹಡಪದ, ಎಂ.ಕೆ.ಪುಂಡಲೀಕರಿಗೆ ಜಿಲ್ಲಾ ಚಿತ್ರಕಲಾ ರತ್ನ ಪ್ರಶಸ್ತಿ, ನೀಡಿ, ಗೌರವಿಸಲಾಯಿತು.ಶಿಕ್ಷಕರಿಗಿಂತಲೂ ವಿದ್ಯಾರ್ಥಿಗಳು ಬುದ್ಧಿವಂತರಾಗಿರುವ ಅಸಂಖ್ಯಾತ ನಿದರ್ಶನಗಳಿವೆ. ಚಿತ್ರಕಲೆ ಆರಾಧಿಸುವವರು, ಮೈಗೂಡಿಸಿಕೊಂಡವರು ವಿಶ್ವದಲ್ಲಿ ಸಾಧನೆ ಮಾಡಬಹುದು. ಇದನ್ನು ಚಿತ್ರಕಲಾ ಶಿಕ್ಷಕರು ಸಾಧಿಸಿ ತೋರಿಸಿದ್ದಾರೆ. ಕಲೆಯ ಮೂಲಕವೇ ಜಗತ್ತಿನ ಗಮನ ಸೆಳೆಯುವ ಸಾಧನೆ ಮಾಡಿದ ಮಹನೀಯರು ಹಿಂದಿನಿಂದಲೂ ಇದ್ದಾರೆ. ಚಿತ್ರಕಲೆಗೇ ತನ್ನದೇ ಆದ ಮಹತ್ವವಿದೆ. ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯಕ್ರಮ ಇತರರಿಗೂ ಪ್ರೇರಣೆ.
ಎಚ್.ಕೆ.ಲಿಂಗರಾಜ, ಶಿಕ್ಷಣ ತಜ್ಞ