ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಬರ ಪರಿಹಾರ ಕಾರ್ಯ, ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ದಾವಣಗೆರೆಯಲ್ಲಿ ಸಮಾವೇಶ ನಡೆಸುವ ಬಗ್ಗೆ ಮಾ.28ರಂದು ಬಳ್ಳಾರಿಯಲ್ಲಿ ನಡೆಯುವ ಸಮಾವೇಶದಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಿರ್ಧರಿಸಿದೆ.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ರೈತ ಸಂಘದ ಅಧ್ಯಕ್ಷ ಆರ್.ಜಿ.ಬಸವರಾಜ ರಾಂಪುರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಳ್ಳಾರಿ ಸಮಾವೇಶದ ಬಗ್ಗೆ ದಾವಣಗೆರೆಯಲ್ಲಿ ಸಮಾವೇಶ ನಡೆಸುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಸಂಘದ ಮುಖಂಡರು, ದಾವಣಗೆರೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಸಮಾವೇಶ ನಡೆಸುವ ಬಗ್ಗೆ ಮಾ.28ರ ಬಳ್ಳಾರಿಯಲ್ಲಿ ಸಂಘ-ಸೇನೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು. ರೈತರು, ಕೂಲಿ ಕಾರ್ಮಿಕರಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಯಾವುದೇ ಸಹಾಯಹಸ್ತ ಸಿಕ್ಕಿಲ್ಲ. ಉಭಯ ಸರ್ಕಾರಗಳ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸುವ ಬಗ್ಗೆ ಚರ್ಚಿಸಲಾಯಿತು.ಜಿಲ್ಲೆಯಲ್ಲಿ ಯಾವ್ಯಾವ ತಾಲೂಕುಗಳಲ್ಲಿ ಬಗರ್ ಹುಕುಂ ಸಾಗುವಳಿದಾರರು ರೈತ ಸಂಘ-ಹಸಿರು ಸೇನೆ ಸಹಾಯ ಕೇಳಿದಲ್ಲಿ ಮತ್ತು 94 ಸಿ ನಿವೇಶನದ ಸಹಾಯ ಕೇಳಿದಲ್ಲಿ ಆಯಾ ತಾಲೂಕುಗಳ ಪದಾಧಿಕಾರಿಗಳ ಒಪ್ಪಿಗೆ ಪಡೆದು, ಜಿಲ್ಲಾಮಟ್ಟದ ಚಳವಳಿ ರೂಪಿಸುವುದು, ಮಾ.11ರ ಬೆಳಿಗ್ಗೆ 11ಕ್ಕೆ ತಾಲೂಕಿನ ಮಾಯಕೊಂಡ ಹೋಬಳಿ ರೈತ ಸಂಘದ ಘಟಕ ರಚನೆ, ಮಾಯಕೊಂಡ ತಾಲೂಕು ರಚನೆಗಾಗಿ ಮಾಯಕೊಂಡ ತಾಲೂಕು ಹೋರಾಟ ಸಮಿತಿ ಸಹಭಾಗಿತ್ವದಲ್ಲಿ ಚಳವಳಿ ರೂಪಿಸುವ ಬಗ್ಗೆ ಚರ್ಚೆ ನಡೆಯಿತು.
ಲೋಕಸಭೆ 2024ರ ಚುನಾವಣೆ ಹಿನ್ನೆಲೆಯಲ್ಲಿ ರೈತ ಸಂಘದಿಂದ ಎಲ್ಲಾ ರಾಜಕೀಯ ಪಕ್ಷದ ರೈತ ವಿಭಾಗದ ಮುಖ್ಯಸ್ಥರ ಕರೆಸಿ, ಒಂದೇ ವೇದಿಕೆಯಲ್ಲಿ ಸಂವಾದ ನಡೆಸುವುದು, ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲು ನಿರ್ಧರಿಸಲಾಯಿತು.ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ, ಜಿಲ್ಲಾಧ್ಯಕ್ಷ ರಾಂಪುರದ ಬಸವರಾಜ, ಕಾರ್ಯಾಧ್ಯಕ್ಷ ಮಾಯಕೊಂಡ ಅಶೋಕ, ಸಂಘಟನಾ ಕಾರ್ಯದರ್ಶಿ ಮಿಯಾಪುರದ ತಿರುಮ ಲೇಶ, ತಾಲೂಕ ಅಧ್ಯಕ್ಷ ಐಗೂರು ಶಿವಮೂರ್ತಪ್ಪ, ಪ್ರಧಾನ ಕಾರ್ಯದರ್ಶಿ ಹೆಬ್ಬಾಳು ರಾಜಯೋಗಿ, ಹರಿಹರ ಅಧ್ಯಕ್ಷ ಬಿ ಬಸವರಾಜಪ್ಪ, ಫಯಾಜ್‌ವುಲ್ಲಾ, ಬಾಡದ ಹನುಮಂತಪ್ಪ, ಬಾಡದ ಚಂದ್ರಶೇಖರ, ನಾಗರಕಟ್ಟೆ ಜಯನಾಯ್ಕ ಇತರರಿದ್ದರು...