ಬೆಳಗಾವಿ ಬಿಜೆಪಿ ನಾಯಕರ ಮುನಿಸು ಶಮನ?

| Published : Apr 06 2024, 12:49 AM IST

ಸಾರಾಂಶ

ಬೆಳಗಾವಿ ಲೋಕಸಭೆಯ ಬಿಜೆಪಿ ಟಿಕೆಟ್‌ ವಂಚಿತ ಸ್ಥಳೀಯ ನಾಯಕರ ಮುನಿಸು ಮಾಜಿ ಸಿಎಂ ಯಡಿಯೂರಪ್ಪ ಮಧ್ಯಪ್ರವೇಶದಿಂದ ಶಮನಗೊಂಡಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹಾಲಿ ಸಂಸದೆ ಮಂಗಲ ಅಂಗಡಿ ಸೇರಿದಂತೆ ಹಲವಾರು ಆಕಾಂಕ್ಷಿಗಳಿಗೆ ಬಿಜೆಪಿ ಟಿಕೆಟ್‌ ಕೈತಪ್ಪಿತ್ತು. ಟಿಕೆಟ್‌ ವಂಚಿತರು ಸಹಜವಾಗಿಯೇ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಲೋಕಸಭೆಯ ಬಿಜೆಪಿ ಟಿಕೆಟ್‌ ವಂಚಿತ ಸ್ಥಳೀಯ ನಾಯಕರ ಮುನಿಸು ಮಾಜಿ ಸಿಎಂ ಯಡಿಯೂರಪ್ಪ ಮಧ್ಯಪ್ರವೇಶದಿಂದ ಶಮನಗೊಂಡಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹಾಲಿ ಸಂಸದೆ ಮಂಗಲ ಅಂಗಡಿ ಸೇರಿದಂತೆ ಹಲವಾರು ಆಕಾಂಕ್ಷಿಗಳಿಗೆ ಬಿಜೆಪಿ ಟಿಕೆಟ್‌ ಕೈತಪ್ಪಿತ್ತು. ಟಿಕೆಟ್‌ ವಂಚಿತರು ಸಹಜವಾಗಿಯೇ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು.

ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಸೇರಿದಂತೆ ಜಿಲ್ಲೆಯ ಬಿಜೆಪಿ ನಾಯಕರು ಸಭೆ ನಡೆಸಿ ಸ್ಥಳೀಯರಿಗೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದಿದ್ದರು. ಇದಕ್ಕೆ ತಲೆಕೆಡಿಸಿಕೊಳ್ಳದ ಪಕ್ಷದ ಹೈಕಮಾಂಡ್‌ ಅಳೆದು ತೂಗಿ ಕೊನೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್‌ಗೆ ಮಣೆ ಹಾಕಿತು. ಅತೃಪ್ತಿ ಶಮನ ಹೊಣೆಯನ್ನು ಮಾಜಿ ಸಿಎಂ ಯಡಿಯೂರಪ್ಪ ವಹಿಸಿಕೊಂಡು ಬೆಳಗಾವಿಗೆ ಆಗಮಿಸಿ ನಾಯಕರ ಜೊತೆಗೆ ಸಭೆ ನಡೆಸಿ, ಮನವೊಲಿಸುವಲ್ಲಿ ಯಶಸ್ವಿಯಾದರು. ಈಗ ಅತೃಪ್ತ ನಾಯಕರ ಮುಂದಾಳತ್ವದಲ್ಲೇ ಬಿಜೆಪಿ ಪ್ರಚಾರ ಕಾರ್ಯಕ್ಕೆ ಧುಮುಕಿದೆ.

ರಾಮದುರ್ಗ ಬಿಜೆಪಿ ಟಿಕೆಟ್‌ ವಂಚಿತರಾಗಿದ್ದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದರು. ಅವರ ಮನವೊಲಿಕೆಗೆ ಪಕ್ಷದ ನಾಯಕರು ಪ್ರಯತ್ನ ಮಾಡಿರಲಿಲ್ಲ. ಅ‍ವರನ್ನು ಕಾಂಗ್ರೆಸ್‌ ತನ್ನ ಕಡೆ ಸೆಳೆಯಲು ಕಸರತ್ತು ನಡೆಸಿತ್ತು. ಯಾದವಾಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಊಹಾಪೋಹ ಹಬ್ಬಿತ್ತು. ಈ ಮಧ್ಯೆ ಶುಕ್ರವಾರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಹಾದೇವಪ್ಪ ಯಾದವಾಡ ಅ‍ವರನ್ನು ಸ್ವತಃ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಭೇಟಿಯಾಗಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೈಲಹೊಂಗಲ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಈಗ ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಕೂಡ ಈಗ ಪಾಟೀಲ ಅವರೊಂದಿಗೆ ಜತೆಯಾಗಿದ್ದಾರೆ. ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್‌ ವಂಚಿತರಾಗಿದ್ದ ಮಾಜಿ ಶಾಸಕ ಅನಿಲ ಬೆನಕೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದ್ದರಿಂದ ಅವರ ಅತೃಪ್ತಿಯೂ ಶಮನವಾಗಿದೆ ಎನ್ನಲಾಗಿದೆ. ಕಳೆದ ಬಾರಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ, ಪರಾಭ‍ವಗೊಂಡ ಬಿಜೆಪಿ ಅಭ್ಯರ್ಥಿ ಡಾ.ರವಿ ಪಾಟೀಲ ತಟಸ್ಥರಾಗಿದ್ದು, ಎಲ್ಲಿಯೂ ಪ್ರಚಾರ ಕಾರ್ಯದಲ್ಲಿ ಕಾಣಿಸುತ್ತಿಲ್ಲ. ಸದ್ಯ ಜಿಲ್ಲೆಯಲ್ಲಿ ಅತೃಪ್ತ ಎಲ್ಲ ನಾಯಕರ ಮನವೊಲಿಸುವಲ್ಲಿ ಬಿಜೆಪಿ ವರಿಷ್ಠರು ಯಶಸ್ವಿಯಾಗಿದ್ದು, ಅಭ್ಯರ್ಥಿ ಜಗದೀಶ ಶೆಟ್ಟರ್‌ ತಮ್ಮ ಮುಂದಿನ ಮತಬೇಟೆಗೆ ಅಣಿಯಾಗಿದ್ದಾರೆ.

ರಮೇಶ ಕತ್ತಿ ನಿಲುವೇನು?:

ಬೆಳಗಾವಿ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್‌ ದಾರಿ ಸುಗಮವಾಗಿದ್ದರೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಟಿಕೆಟ್‌ ವಂಚಿತ ಮಾಜಿ ಸಂಸದ ರಮೇಶ ಕತ್ತಿ ನಿಲುವು ಈವರೆಗೂ ಸ್ಪಷ್ಟವಾಗಿಲ್ಲ. ಪಕ್ಷದ ಜೊತೆಗೆ ಮುನಿಸಿಕೊಂಡಿರುವ ಕತ್ತಿ ಎಲ್ಲಿಯೂ ಚುನಾವಣೆ ಪ್ರಚಾರ ಕಾರ್ಯದಲ್ಲಿ ಕಾಣಿಸಿಕೊಳ್ಳದೆ ತಟಸ್ಥರಾಗಿದ್ದಾರೆ. ಪಕ್ಷದ ಸಭೆ, ಸಮಾರಂಭಗಳಿಂದಲೂ ಅವರು ದೂರ ಉಳಿದಿದ್ದಾರೆ. ಈ ಬೆಳವಣಿಗೆ ಪಕ್ಷದ ವರಿಷ್ಠರಿಗೆ ತಲೆನೋವಾಗಿದೆ. ಇನ್ನು ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೂ ಯಮಕನಮರಡಿ ಕ್ಷೇತ್ರದ ಜೆಡಿಎಸ್‌ ಮುಖಂಡ ಮಾರುತಿ ಅಷ್ಟಗಿ ಕೂಡ ತಟಸ್ಥವಾಗಿದ್ದಾರೆ. ಹೀಗಾಗಿ ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿಗೆ ದೊಡ್ಡ ಸವಾಲೇ ಎದುರಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ.ಪ್ರತಿಬಾರಿ ರಾಮದುರ್ಗ ಕ್ಷೇತ್ರದಿಂದ ಸುರೇಶ ಅಂಗಡಿ ಅವರಿಗೆ 27 ಸಾವಿರ ಲೀಡ್‌ ನೀಡುತ್ತಿದ್ದೆವು. ಈ ಚುನಾವಣೆಯಲ್ಲೂ ಜಗದೀಶ ಶೆಟ್ಟರ್‌ ಅಷ್ಟೇ ಲೀಡ್‌ ನೀಡುತ್ತೇವೆ. ಪಕ್ಷದ ಅಭ್ಯರ್ಥಿ ಜಗದೀಶ ಶೆಟ್ಟರ್‌ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.

-ಮಹಾದೇವಪ್ಪ ಯಾದವಾಡ, ಮಾಜಿ ಶಾಸಕ.