ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿ ಕಳೆದ ಮೂರು ದಿನದಿಂದ ತಾಪ ಏರುಗತಿಯಲ್ಲಿದೆ. ಶುಕ್ರವಾರ ಜಿಲ್ಲೆಯಲ್ಲಿ ಅತ್ಯಧಿಕ 44. 5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು ಇದು ಏಪ್ರಿಲ್ ತಿಂಗಳಲ್ಲೇ ಅತ್ಯಧಿಕ ಗರಿಷ್ಠ ತಾಪಮಾನವಾಗಿದೆ. ಕಳೆದ ಬುಧವಾರವಷ್ಟೇ ದಾಖಲಾಗಿದ್ದ 44.2 ಡಿಗ್ರಿ ಸೆಲ್ಸಿಯಸ್ ತಾಪವನ್ನು ಮೀರಿಸಿದೆ.ಕಲಬುರಗಿ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ತಾಪಮಾನದ ದಾಖಲೆಯ ಪ್ರಕಾರ ಆಳಂದದ ಮಾದನ ಹಿಪ್ಪರಗಾ ಹಾಗೂ ನಿಂಬರ್ಗಾ ತಾಂಡಾದಲ್ಲಿ ದಾಖಲಾದ ಉಷ್ಣತೆ ದಾಖಲೆಯಂತೆ 44.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡಿದೆ.
ಇದರೊಂದಿಗೆ ಜಿಲ್ಲೆಯ ಖಜೂರಿ, ಐನಾಪುರ, ಆಡಕಿ, ಶಬಾದ್, ಗುಂಡಗುರ್ತಿ, ಪಟ್ಟಣ, ನೆಲೋಗಿ, ಆತಮೂರ್, ಕರಜಗಿ, ಸುಲೇಪೇಟ್, ಕಮಲಾಪುರ, ಕೋಡ್ಲಿ, ಯಡ್ರಾಮಿ, ನರೋಣಿ, ಅಫಝಲ್ಪುರ ಇಲ್ಲೆಲ್ಲಾ ಶುಕ್ರವಾರದ ದಿನ ಸರಾಸರಿ 43 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ಉಷ್ಣತೆ ದಾಖಲಾಗಿದೆ.ಗುರುವಾರವೂ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾದಲ್ಲಿ 44.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಸತತ 2ನೇ ದಿನ ಇದೇ ವಲಯದಲ್ಲಿ ತಾಪಮಾನ 44.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿ ಗಮನ ಸೆಳೆದಿದೆ. ಇದರೊಂದಿಗೆ ಜಿಲ್ಲಾದ್ಯಂತ ಸತತ 4ನೇ ದಿನವೂ ಉಷ್ಣಗಾಳಿ, ಸಖೆ, ಧಗೆ, ನಿರಂತರ ಬಾಯಾರಿಕೆಯ ತೊಂದರೆಗಳು ಜನರ, ಜಾನುವಾರುಗಳನ್ನು ಕಾಡಲಾರಂಭಿಸಿವೆ.
ಜನ ಮನೆಯಿಂದ ಹೊರಬರದಂತಗಿದೆ. ಮನೆಯಿಂದ ಹೊರಗಡೆ ಬರಬೇಕಾದರೆ ಮುಖಕ್ಕೆ ಕರವಸ್ತ್ರ, ಬಟ್ಟೆ ಬಳಸಿ ಮುಖ ಮುಚ್ಚಿಕೊಂಡೇ ಬರುವಂತಾಗಿದೆ. ಇನ್ನೂ ಹೊರ ಬಂದರೆ ಸಾಕು ಬಾಯಾರಿಕೆ ಕಾಡುತ್ತಿದೆ.ಏತನ್ಮಧ್ಯೆ ಹೆಚ್ಚುತ್ತಿರುವ ಉರಿ ಬಿಸಿಲಿನಿಂದ ಜನರಿಗೆ ಅನುಕೂಲ ಮಾಡಿಕೊಡಲು, ದಾಹ ತಣಿಸಲು ಅನೇಕ ಸಂಸಥೆಗಳು, ಸಂಘಟನೆಗಳವರು ನಗರದಲ್ಲಿ ಅಲ್ಲಲ್ಲಿ ತಂಪು ನೀರಿನ ಸೇವೆ ಮಾಡುತ್ತಿವೆ. ಅಂತಹದ್ದೊಂದು ಜಲದಾನ ಕಾರ್ಯ ನಂದಾದೀಪ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಮತ್ತು ಎಸ್ಬಿಐ ಗೆಳೆಯರ ಬಳಗದಿಂದ ನಗರದಲ್ಲಿ ಆರಂಭಿಸಲಾಗಿದೆ. ನಿರಂತರ ಮುಂದಿನ 2 ತಿಂಗಳು ಈ ಜಲ ಸೇವೆ ಉಚಿತವಾಗಿ ನಡೆಸಲಾಗುತ್ತಿದೆ, ಜಗತ್ ವೃತ್ತದಲ್ಲಿ ತಂಪು ನೀರು ಸದಾ ಜನರಿಗೆ ಇರುವಂತೆ ವ್ಯವಸ್ಥೆ ಮಾಡಲಾಗಿದೆ..