ಮಹಾರಾಷ್ಟ್ರದಿಂದ ಮತ್ತೆ ಆಲಮಟ್ಟಿ ಕ್ಯಾತೆ - ಡ್ಯಾಂನಿಂದ ಪ್ರವಾಹ

| N/A | Published : May 23 2025, 10:34 AM IST

Alamatti Dam

ಸಾರಾಂಶ

ಕರ್ನಾಟಕದ ಆಲಮಟ್ಟಿ ಅಣೆಕಟ್ಟು ಮಹಾರಾಷ್ಟ್ರದ ಕೊಲ್ಹಾಪುರ-ಸಾಂಗ್ಲಿ ಪ್ರದೇಶದಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯ ಕಾರ್ಯಕರ್ತರು ದೂರಿದ್ದಾರೆ.

 ಮುಂಬೈ : ಕರ್ನಾಟಕದ ಆಲಮಟ್ಟಿ ಅಣೆಕಟ್ಟು ಮಹಾರಾಷ್ಟ್ರದ ಕೊಲ್ಹಾಪುರ-ಸಾಂಗ್ಲಿ ಪ್ರದೇಶದಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯ ಕಾರ್ಯಕರ್ತರು ದೂರಿದ್ದಾರೆ. ಹೀಗಾಗಿ ಸೂಕ್ತ ಪುರಾವೆಗಳನ್ನು ಅಧ್ಯಯನ ಮಾಡಿ ವರದಿ ನೀಡುವಂತೆ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರೊಂದಿಗೆ ಮೊದಲಿನಿಂದಲೂ ಆಲಮಟ್ಟಿ ಅಣೆಕಟ್ಟೆ ಎತ್ತರದ ಬಗ್ಗೆ ತಕರಾರು ವ್ಯಕ್ತಪಡಿಸುತ್ತಿದ್ದ ಮಹಾರಾಷ್ಟ್ರ ಈಗ ಪುನಃ ಅದೇ ಕ್ಯಾತೆ ಆರಂಭಿಸಿದೆ.

ದಕ್ಷಿಣ ಮಹಾರಾಷ್ಟ್ರದ 2 ಜಿಲ್ಲೆಗಳಲ್ಲಿ ಪದೇ ಪದೇ ಎದುರಾಗುತ್ತಿರುವ ಪ್ರವಾಹದ ಬಗ್ಗೆ ಚರ್ಚಿಸಲು ಬುಧವಾರ ಕೊಲ್ಹಾಪುರದಲ್ಲಿ ಸಭೆ ಕರೆಯಲಾಗಿತ್ತು. ಪ್ರವಾಹಕ್ಕೆ ಅಣೆಕಟ್ಟು ಕಾರಣವಲ್ಲ ಎಂದು ಸರ್ಕಾರ ಆರಂಭದಲ್ಲಿ ಹೇಳಿದ್ದರಿಂದ ಸರ್ಕಾರ ಮತ್ತು ವಿಪಕ್ಷ ನಾಯಕರ ನಡುವೆ ತೀವ್ರ ವಾಗ್ವಾದ ನಡೆಯಿತು.

ಆಗ ಮಾತನಾಡಿದ ಕೃಷ್ಣಾ ಪ್ರವಾಹ ಸಮಿತಿ, ನೀರಾವರಿ ಒಕ್ಕೂಟದ ಸದಸ್ಯರು, ‘ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳದ ಪ್ರಸ್ತಾವವನ್ನು ಮಹಾರಾಷ್ಟ್ರ ಸರ್ಕಾರ ವಿರೋಧಿಸಬೇಕು ಮತ್ತು ಕೇಂದ್ರ ಜಲ ಆಯೋಗದ ಪ್ರವಾಹ ನಿರ್ವಹಣಾ ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಆ ಬಳಿಕ ವಿಖೆ ಪಾಟೀಲ್ ಪ್ರತಿಕ್ರಿಯಿಸಿ, ‘ಪ್ರತಿಭಟನಾಕಾರರು ಸರಿಯಾದ ತಾಂತ್ರಿಕ ಪರಿಶೀಲನೆಗೆ ಅಗತ್ಯವಾದ ಗಂಭೀರ ಅಂಶಗಳನ್ನು ಎತ್ತಿದ್ದಾರೆ. 15 ದಿನಗಳಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ಬಳಿಕ ಸಭೆ ನಡೆಸಬೇಕು’ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Read more Articles on