ಲಾಠಿ ಚಾರ್ಜ್‌ ಘಟನೆ : ಕಾನೂನು ನನಗೂ ಒಂದೇ, ಸ್ವಾಮೀಜಿಗೂ ಒಂದೇ - ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Dec 14 2024, 12:05 PM IST

Siddaramaiah

ಸಾರಾಂಶ

ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಂಚಮಸಾಲಿ ಲಿಂಗಾಯತ ಸಮಾಜದ ಹೋರಾಟ ವಿಕೋಪಕ್ಕೆ ತಿರುಗಿದಾಗ ನಡೆದ ಲಾಠಿ ಚಾರ್ಜ್‌ ಘಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ವಿಜಯಪುರ : ಕಾನೂನು ನನಗೂ ಒಂದೇ, ಸ್ವಾಮೀಜಿಗೂ ಒಂದೇ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳಗಾವಿಯಲ್ಲಿ ಕಳೆದ ಮಂಗಳವಾರ 2ಎ ಮೀಸಲಾತಿಗಾಗಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಂಚಮಸಾಲಿ ಲಿಂಗಾಯತ ಸಮಾಜದ ಹೋರಾಟ ವಿಕೋಪಕ್ಕೆ ತಿರುಗಿದಾಗ ನಡೆದ ಲಾಠಿ ಚಾರ್ಜ್‌ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಗುರುವಾರ ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ಪುತ್ರಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇಲ್ಲಿ ತಂಗಿದ್ದ ಅವರು ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಭಟನೆ ವೇಳೆ ಸುವರ್ಣ ಸೌಧಕ್ಕೆ ನುಗ್ಗುವುದಕ್ಕೆ ಮುಂದಾದರು. ಕಲ್ಲು ಹೊಡೆದರು. ಈ ಬಗ್ಗೆ ನನ್ನ ಬಳಿ ಫೋಟೊಗಳಿವೆ. ಅವರು ಕಲ್ಲು ಹೊಡೆಯದಿದ್ದರೆ 20 ಜನ ಪೊಲೀಸರಿಗೆ ಹೇಗೆ ಏಟು ಬಿತ್ತು? ಹೇಗೆ ಗಾಯ ಆಯ್ತು?. ಅಲ್ಲದೆ ಅವರು ಹೇಳಿದ್ದಕ್ಕೆ ಸಾಕ್ಷಿ ಇಲ್ಲ, ನಾನು ಹೇಳಿದ್ದಕ್ಕೆ "ಎವಿಡೆನ್ಸ್" ಇದೆ ಎಂದು ಸ್ಪಷ್ಟಪಡಿಸಿದರು.

ಪಂಚಮಸಾಲಿ ಹೋರಾಟದ ವಿಚಾರವಾಗಿ ಎರಡು ಬಾರಿ ಸಭೆ ಮಾಡಿದ್ದೇನೆ. ಹಿಂದುಳಿದ ವರ್ಗಗಳ ಜೊತೆ ಹೋಗಿ ಎಂದರೂ ಕೇಳಲಿಲ್ಲ. ಶಾಂತಿಯುತ ಚಳವಳಿಗೆ ಸಮ್ಮತಿಸಿದರೂ ಟ್ರ್ಯಾಕ್ಟರ್ ತರಲು ಮುಂದಾದರು. ಅವಕಾಶ ಕೊಡಲಿಲ್ಲ. ಕೋರ್ಟ್‌ಗೆ ಹೋಗಿ ಅನುಮತಿ ತಂದಿದ್ದು, ಕೋರ್ಟ್ ಕೂಡ ಶಾಂತ ಹೋರಾಟಕ್ಕೆ ಸೂಚಿಸಿದೆ. ಆದರೆ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಸಿಎಂ ಆಕ್ಷೇಪಿಸಿದರು.

ಸಚಿವರಾದ ಮಹಾದೇವಪ್ಪ, ಸುಧಾಕರ, ವೆಂಕಟೇಶ ಅವರನ್ನು ಕಳುಹಿಸಿ ಮಾತುಕತೆಗೆ ಆಹ್ವಾನಿಸಿದರೆ ಸಿಎಂ ಅವರೇ ಇಲ್ಲಿಗೆ ಬರಬೇಕು ಎಂದು ಪಟ್ಟು ಹಿಡಿದರು. ಸಿಎಂ ಎಲ್ಲಾ ಕಡೆ ಹೊಗೋಕೆ ಆಗುತ್ತಾ? ಎಂದರು.

ಪಂಚಮಸಾಲಿಗೆ ಬಿಜೆಪಿ ಟೋಪಿ:

ಪಂಚಮಸಾಲಿ ಹೋರಾಟಗಾರರಿಗೆ ಬಿಜೆಪಿ ಟೋಪಿ ಹಾಕಿದೆ. 2ಡಿ ಕೊಟ್ಟು ಬಳಿಕ ಹೈಕೋರ್ಟ್‌ಗೆ 2023 ಮಾರ್ಚ್ 23ರಂದು ಅಫಿಡವಿಟ್ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಹೋರಾಟಕ್ಕೆ ನಮ್ಮದೇನೂ ತಕರಾರಿಲ್ಲ. ಆದರೆ ಸಂವಿಧಾನಬದ್ಧವಾಗಿರಬೇಕು. ಬಿಜೆಪಿ ಸರ್ಕಾರವಿದ್ದಾಗ 2023 ಮಾರ್ಚ್ 27ರಂದು 2ಡಿ ಮಾಡಿದ್ದಾರೆ. 3ಬಿನಲ್ಲಿ ಪಂಚಮಸಾಲಿಗಳಿದ್ದಾರೆ. ಹಿಂದುಳಿದ ವರ್ಗದಲ್ಲಿ ಎಷ್ಟು ಜಾತಿಗಳಿವೆ ಗೊತ್ತಾ ಎಂದು ಪ್ರಶ್ನಿಸಿದರು. ಬಿಜೆಪಿಯವರು ಮುಸ್ಲಿಮರ ಮೀಸಲು ರದ್ದು ಮಾಡಿ 2ಸಿ, 2ಡಿ ಅಂತ ಮಾಡಿ ಅದರಲ್ಲಿನ 4 ಪರ್ಸೆಂಟ್ ಮೀಸಲಾತಿ ತೆಗೆದು ಇವರಿಗೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಆಗ ಯಾಕೆ ಇವರು ಪ್ರತಿಭಟನೆ ಮಾಡಲಿಲ್ಲ? ಈಗ ಬಿಜೆಪಿಯವರೇ ಇವರಿಗೆ ಬೆಂಬಲ ನೀಡುತ್ತಿದ್ದಾರೆ. ಮುಸ್ಲಿಂ ಮೀಸಲಾತಿ ಕಸಿದುಕೊಂಡಿದ್ದನ್ನು ಪ್ರಶ್ನಿಸಿ ರಸೂಲ್ ಎಂಬುವರು ಸುಪ್ರೀಂಕೋರ್ಟ್‌ಗೆ ಹೋದರು. ಆಗ ಅಲ್ಲಿ ಇವರ ಪರ ಲಾಯರ್ ನಾವು ಯಾವ ಕಾರಣಕ್ಕೂ ಬದಲಾವಣೆ ಮಾಡಲ್ಲ ಎಂದು ಅಡ್ಮಿಟ್ ಮಾಡಿಕೊಂಡಿರುವರು ಯಾರು?. ಈಗ ಯಾಕೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಜನರು ತೀರ್ಮಾನ ಮಾಡ್ತಾರೆ:

ಸ್ವಾಮೀಜಿಗಳ ಬಗ್ಗೆ ನಾನು ಮಾತನಾಡಲ್ಲ. ಅದನ್ನು ಜನರು ತೀರ್ಮಾನ ಮಾಡುತ್ತಾರೆ. ಎಲ್ಲರಿಗೂ ಕಾನೂನು ಒಂದೇ. 2ಎ ನಲ್ಲಿರುವ ಕೆಲವರಿಂದ ಪಂಚಮಸಾಲಿಗಳನ್ನು 2ಎಗೆ ಸೇರಿಸಬೇಡಿ ಎಂದು ವಿರೋಧ ಮಾಡುತ್ತಿದ್ದು, ಅವರ ಅಭಿಪ್ರಾಯ ಹೇಳೋಕೆ ಅವರಿಗೆ ಸ್ವಾತಂತ್ರ್ಯ ಇದೆ. ಸಂವಿಧಾನ ಏನು ಹೇಳುತ್ತೇ ಅದನ್ನು ಸರ್ಕಾರ ಮಾಡುತ್ತದೆ ಎಂದರು.

ಆಲಮಟ್ಟಿಗೆ ಅನುದಾನದ ಬಗ್ಗೆ ಸೋಮವಾರ ಸಭೆ

ಯುಕೆಪಿ 3ನೇ ಹಂತದ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಆಲಮಟ್ಟಿ ಎತ್ತರ 519 ಮೀಟರ್‌ನಿಂದ 524 ಮೀಟರ್‌ಗೆ ಎತ್ತರಿಸುವ ಪರವಿದ್ದೇವೆ. ಆದರೆ ಆಂಧ್ರ ಪ್ರದೇಶ, ತೆಲಂಗಾಣದವರು ಸುಪ್ರೀಂ ಕೋರ್ಟ್‌ಗೆ ಅಪೀಲು ಹಾಕಿದ್ದಾರೆ. ಅದನ್ನು ಕೇಂದ್ರ ಸರ್ಕಾರ ಇತ್ಯರ್ಥಪಡಿಸಬೇಕು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು. ಅಲ್ಲದೇ, ಆಲಮಟ್ಟಿಗೆ ಅನುದಾನ ನೀಡಿಕೆ ವಿಚಾರದ ಕುರಿತು ಚರ್ಚಿಸಲು ಸೋಮವಾರ ಸಭೆ ಕರೆದು ಚರ್ಚೆ ಮಾಡುವುದಾಗಿ ಸಿದ್ದರಾಮಯ್ಯ ತಿಳಿಸಿದರು.