ಸಾರಾಂಶ
ವಿದ್ಯುತ್ ಮೇಲಿನ ಅವಲಂಬನೆಯ ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ಬರಗಾಲ, ಬೇಸಿಗೆಯಲ್ಲಿ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಅನುಷ್ಠಾನಗೊಳಿಸಿರುವ ಕುಸುಮ್ ಯೋಜನೆಯನ್ನು ಪಡೆದುಕೊಳ್ಳಲು ರಾಜ್ಯದ ರೈತರು ಮುಂದಾಗಿದ್ದಾರೆ.
ಬೆಳಗಾವಿ : ವಿದ್ಯುತ್ ಮೇಲಿನ ಅವಲಂಬನೆಯ ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ಬರಗಾಲ, ಬೇಸಿಗೆಯಲ್ಲಿ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಅನುಷ್ಠಾನಗೊಳಿಸಿರುವ ಕುಸುಮ್ ಯೋಜನೆಯನ್ನು ಪಡೆದುಕೊಳ್ಳಲು ರಾಜ್ಯದ ರೈತರು ಮುಂದಾಗಿದ್ದಾರೆ. ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯಿಂದಲೇ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ‘ಪಿಎಂ ಕುಸುಮ್’ ಯೋಜನೆಗೆ ರಾಜ್ಯದಲ್ಲಿ ಒಟ್ಟು 18,000 ಅರ್ಜಿಗಳು ಬಂದಿದ್ದು, ಅದರಲ್ಲಿ ಅತಿ ಹೆಚ್ಚು ಬೆಳಗಾವಿ ಜಿಲ್ಲೆಯಿಂದಲೇ ಅಂದರೆ, 2,284 ರೈತರು ತಮ್ಮ ಹೆಸರು ನೋಂದಾಯಿಸಿದ್ದಾರೆ.
ವಿದ್ಯುತ್ ಮೇಲಿನ ಅವಲಂಬನೆ ಪ್ರಮಾಣ ಇಳಿಸಲು ಹಾಗೂ ಬರಗಾಲ, ಬೇಸಿಗೆ ಕಾಲದಲ್ಲಿ ವಿದ್ಯುತ್ ಕೊರತೆ ನೀಗಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಕುಸುಮ್ ಯೋಜನೆಯಡಿ ರಾಜ್ಯದ ರೈತರಿಗೆ ಸೌರ ಪಂಪ್‌ಸೆಟ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಕೇಂದ್ರ ಸರ್ಕಾರ ಶೇ.30 ಹಾಗೂ ರಾಜ್ಯ ಸರ್ಕಾರ ಶೇ.50 ರಿಯಾಯಿತಿ ಘೋಷಿಸಿದೆ. ಫಲಾನುಭವಿಗಳು ಕೇವಲ ಶೇ.20ರಷ್ಟು ವಂತಿಕೆ ಹಣ ಭರಿಸಿ, ಈ ಯೋಜನೆಯ ಸದುಪಯೋಗ ಪಡೆಯಬಹುದಾದ ಯೋಜನೆ ಇದಾಗಿದೆ.
ಒಟ್ಟಾರೆ ಬರಗಾಲ ಹಾಗೂ ಬೇಸಿಗೆ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ತುತ್ತಾಗುವ ರೈತರಿಗೆ ಕುಸುಮ್ ಯೋಜನೆ ವರದಾನವಾಗಲಿದೆ. ಸೌರ ಪಂಪ್‌ಸೆಟ್ ಬಳಕೆಯಿಂದ 8 ಗಂಟೆಗಳ ಕಾಲ ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಕೆಯಾಗಲಿದೆ. ಇದರಿಂದ ರಾತ್ರಿ ವೇಳೆ ರೈತರು ಕೃಷಿ ಚಟುವಟಿಕೆಗಳಿಗೆ ಪರದಾಡಬೇಕಿಲ್ಲ. ವರ್ಷದ 300 ದಿನಗಳವರೆಗೆ ರೈತರು ಸೌರ ವಿದ್ಯುತ್ ಮೂಲಕ ತಮ್ಮ ಕೃಷಿ ಚಟುವಟಿಕೆಗೆ ನೀರು ಪಡೆಯುಬಹುದಾಗಿದೆ.
ರಾಜ್ಯದ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ಜಿಲ್ಲೆಗಳಲ್ಲೊಂದಾಗಿರುವ ಬೆಳಗಾವಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಇದೆ. ಇತ್ತೀಚಿನ ವರ್ಷಗಳಲ್ಲಿ ಕಬ್ಬು ಇಲ್ಲಿನ ಪ್ರಮುಖ ಬೆಳೆಯಾಗಿದೆ. ಇದು ಅಧಿಕ ನೀರು ಬೇಡುವ ಬೆಳೆಯಾಗಿದ್ದು, ಸಹಜವಾಗಿ ರೈತರು ಕೊಳವೆ ಬಾವಿ, ಕಾಲುವೆಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಕಾರಣಾಂತರಗಳಿಂದ ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದರು. ಆದರೆ, ಈಗ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೆರವಿನೊಂದಿಗೆ ದೊರೆಯಲಿರುವ ಸೌರ್ ಪಂಪ್‌ಸೆಟ್ ಯೋಜನೆ ಅನ್ನದಾತರಿಗೆ ಸಹಕಾರಿಯಾಗಲಿದೆ.
ನೋಂದಣಿ ಹೇಗೆ ?:
ರೈತರು ತಮ್ಮ ಆಧಾರ್, ಆರ್‌ಟಿಸಿ ಮತ್ತು ಬ್ಯಾಂಕ್ ವಿವರಗಳೊಂದಿಗೆ ಆನ್‌ಲೈನ್ ಪೋರ್ಟಲ್ https://souramitra.com ಮೂಲಕ ನೋಂದಾಯಿಸಿಕೊಳ್ಳಬಹುದು. ರೈತರ ನೋಂದಣಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, ಕಾಲ್ ಸೆಂಟರ್ ಸಂಖ್ಯೆ 080-22202100 ಮಾಹಿತಿ ಪಡೆಯಬಹುದು.
ಟಾಪ್ 5 ಜಿಲ್ಲೆಗಳುಅರ್ಜಿಗಳ ಸಂಖ್ಯೆ
ಬೆಳಗಾವಿ2284
ತುಮಕೂರು1970
ವಿಜಯಪುರ1593
ಚಿಕ್ಕಮಗಳೂರು1245
ಹಾಸನ1240
ಉಡುಪಿ111ಕೋಟ್:
ರೈತರಿಗೆ ಅನುಕೂಲವಾಗಿರುವ ಈ ಪಿಎಂ ಕುಸುಮ್ ಯೋಜನೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ ಕುರಿತು ಹೆಚ್ಚಿನ ಸಂಖ್ಯೆಯ ರೈತರಿಗೆ ತಿಳಿದಿಲ್ಲ. ಆದ್ದರಿಂದ ಸರ್ಕಾರ ಅಥವಾ ವಿದ್ಯುತ್ ಸರಬರಾಜು ನಿಗಮಗಳ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಿದರೆ ಕುಸುಮ್ ಯೋಜನೆ ಸಂಪೂರ್ಣ ರೈತರಿಗೆ ತಲುಪುವ ಮೂಲಕ ಸರ್ಕಾರದ ಆಶಯವೂ ಈಡೇರಲಿದೆ.
- ಶ್ರೀಮಂತಗೌಡ ಪಾಟೀಲ, ಸವಸುದ್ದಿ, ರೈತ.