ಬಳ್ಳಾರಿ ಜೀನ್ಸ್‌ ಅಪರೆಲ್ ಪಾರ್ಕ್‌ಗೆ ಸಿಗುವುದೇ ಅನುದಾನ?

| Published : Feb 13 2024, 12:45 AM IST

ಬಳ್ಳಾರಿ ಜೀನ್ಸ್‌ ಅಪರೆಲ್ ಪಾರ್ಕ್‌ಗೆ ಸಿಗುವುದೇ ಅನುದಾನ?
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಜೆಟ್ ಮಂಡಿಸುತ್ತಿರುವುದರಿಂದ ಜೀನ್ಸ್‌ ಅಪರೆಲ್ ಪಾರ್ಕ್ ನಿರ್ಮಾಣಕ್ಕೆ ಕಾಯಕಲ್ಪ ಕೂಡಿಬರುವ ಸಾಧ್ಯತೆಗಳಿವೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ದಕ್ಷಿಣ ಭಾರತದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಕ್ಕೂ ರಫ್ತಾಗುವ ಬಳ್ಳಾರಿ ಜೀನ್ಸ್‌ ಉದ್ಯಮ ಬಲಪಡಿಸಲು ನಿರ್ಮಿಸಲು ಉದ್ದೇಶಿಸಿರುವ "ಜೀನ್ಸ್ ಅಪರೆಲ್ ಪಾರ್ಕ್ "ಗೆ ಈ ಬಾರಿಯ ಬಜೆಟ್‌ ನಲ್ಲಿ ಅನುದಾನ ನಿರೀಕ್ಷೆ ಮೂಡಿದೆ.

ಕಳೆದ ಬಾರಿ ಬಜೆಟ್‌ನಲ್ಲಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಯಾವುದೇ ಮಹತ್ವದ ಯೋಜನೆಗಳಿಗೆ ಅನುದಾನ ಘೋಷಣೆಯಾಗಿಲ್ಲ ಎಂಬ ಕೂಗು ಕೇಳಿ ಬಂದಿತ್ತು.

ಈ ಬಾರಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಜೆಟ್ ಮಂಡಿಸುತ್ತಿರುವುದರಿಂದ ಜೀನ್ಸ್‌ ಅಪರೆಲ್ ಪಾರ್ಕ್ ನಿರ್ಮಾಣಕ್ಕೆ ಕಾಯಕಲ್ಪ ಕೂಡಿಬರುವ ಸಾಧ್ಯತೆಗಳಿವೆ.

ನೂರಾರು ಕೋಟಿಗಳ ವಹಿವಾಟಿನ ಉದ್ಯಮ: ಗುಣಮಟ್ಟದ ಜೀನ್ಸ್ ಉತ್ಪಾದನೆ ಹಾಗೂ ಸಿದ್ಧ ಉಡುಪುಗಳ ಮೂಲಕ ಹೆಚ್ಚಿನ ಬೇಡಿಕೆ ಕುದುರಿಸಿಕೊಂಡಿರುವ ಬಳ್ಳಾರಿ ಜೀನ್ಸ್‌ ಉದ್ಯಮ ಹಾಗೂ ಉದ್ಯಮಿಗಳಿಗೆ ಸರ್ಕಾರದ ಪೂರಕ ಪ್ರೋತ್ಸಾಹ ಅಗತ್ವವಿದೆ. ನಗರವೊಂದರಲ್ಲಿ 83 ಜೀನ್ಸ್ ತಯಾರಿಕಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಜೀನ್ಸ್ ಉದ್ಯಮವೊಂದರಿಂದಲೇ ವಾರ್ಷಿಕ ನೂರಾರು ಕೋಟಿ ರು. ವಹಿವಾಟು ನಡೆಯುತ್ತದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 15 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಸಿದೆ.

ಬಳ್ಳಾರಿ ಜೀನ್ಸ್‌ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆಯಾದರೂ ಇಲ್ಲಿನ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಬ್ಯಾಂಕುಗಳ ನೆರವು ಸಿಗುತ್ತಿಲ್ಲ ಎಂಬ ಬೇಸರಿಕೆಯ ಕೂಗು ಈ ಹಿಂದಿನಿಂದಲೂ ಇದೆ. ಪ್ರಮುಖವಾಗಿ ಇಲ್ಲಿನ ಜೀನ್ಸ್ ಹಾಗೂ ಸಿದ್ಧ ಉಡುಪು ತಯಾರಿಕಾ ಘಟಕಗಳು ಪೂರಕ ಅತ್ಯಾಧುನಿಕ ಸೌಕರ್ಯಗಳನ್ನು ನಿರೀಕ್ಷಿಸುತ್ತಿದೆ. ಆದರೆ, ಸರ್ಕಾರದ ಆರ್ಥಿಕ ನೆರವಿನ ಅಸಹಕಾರ ಜೀನ್ಸ್ ಹಾಗೂ ಸಿದ್ಧ ಉಡುಪು ಉದ್ಯಮವನ್ನು ಮಂಕಾಗಿಸಿದೆ.

₹5 ಸಾವಿರ ಕೋಟಿ ನೀಡಲಿಲ್ಲ: ಭಾರತ ಜೋಡೋ ಯಾತ್ರೆ ವೇಳೆ ಬಳ್ಳಾರಿಯ ಜೀನ್ಸ್ ಉದ್ಯಮ ಹಾಗೂ ಕಾರ್ಮಿಕರನ್ನು ಭೇಟಿ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು, ರಾಜ್ಯ ವಿಧಾನಸಭಾ ಚುನಾವಣೆ ಮುನ್ನದ ಪ್ರಚಾರ ವೇಳೆ ಬಳ್ಳಾರಿಯನ್ನು ಜೀನ್ಸ್ ರಾಜಧಾನಿಯನ್ನಾಗಿ ಮಾಡಲಾಗುವುದು. ಅಪರೆಲ್ ಪಾರ್ಕ್‌ಗಾಗಿ ₹5 ಸಾವಿರ ಕೋಟಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಬಳಿಕದ ಮೊದಲ ಬಜೆಟ್‌ನಲ್ಲಿ ಜೀನ್ಸ್‌ ಅಪರೆಲ್ ಪಾರ್ಕ್ ಬಗ್ಗೆ ಚಕಾರ ಎತ್ತಲಿಲ್ಲ. ಪಾರ್ಕ್ ನಿರ್ಮಾಣಕ್ಕೆ ಸೂಕ್ತ ಸ್ಥಳ ಹುಡುಕುವಂತೆ ಜವಳಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಬಿಟ್ಟರೆ, ಈವರೆಗೆ ಯಾವುದೇ ಪ್ರಾಥಮಿಕ ಪ್ರಕ್ರಿಯೆಗಳು ಸಹ ನಡೆದಿಲ್ಲ.

ಅಪರೆಲ್ ಪಾರ್ಕ್‌ನ ಲಾಭವೇನು?

ಜೀನ್ಸ್ ರಾಜಧಾನಿ ಎಂದು ಕರೆಸಿಕೊಳ್ಳುತ್ತಿರುವ ಬಳ್ಳಾರಿಗೆ ಜೀನ್ಸ್‌ ಅಪರೆಲ್ ಪಾರ್ಕ್ ನಿರ್ಮಾಣದಿಂದ ಬೇಡಿಕೆಯಷ್ಟು ಕಚ್ಚಾವಸ್ತುಗಳ ಲಭ್ಯತೆ, ಅತ್ಯಾಧುನಿಕ ಉತ್ಪಾದನಾ ಘಟಕಗಳ ಸ್ಥಾಪನೆ, ನೀರು, ವಿದ್ಯುತ್ ಸೇರಿದಂತೆ ಉದ್ಯಮಿಗಳಿಗೆ ಪೂರಕ ಸೌಕರ್ಯಗಳು, ಸಿದ್ಧ ಉಡುಪಿನಲ್ಲಿ ಮತ್ತಷ್ಟೂ ಗುಣಮಟ್ಟದ ಸಾಧ್ಯತೆ, ಸಿದ್ಧ ಉಡುಪುಗಳ ರಫ್ತಿಗೆ ಬೇಕಾದ ಪೂರಕ ಕ್ರಮಗಳಾಗಲಿವೆ. ಈ ಎಲ್ಲಕ್ಕಿಂತ ಪ್ರಮುಖವಾಗಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆಸ್ಪದವಾಗುತ್ತದೆ. ಸಣ್ಣಪುಟ್ಟ ಜೀನ್ಸ್ ವ್ಯಾಪಾರಿಗಳು ಹಾಗೂ ಜೀನ್ಸ್ ಸಿದ್ಧ ಉಡುಪುಗಳ ತಯಾರಿಕರಿಗೂ ಹೆಚ್ಚಿನ ಉತ್ತೇಜನ ಸಿಗುತ್ತದೆ. ಅಪರೆಲ್ ಪಾರ್ಕ್ ನಿರ್ಮಾಣದಿಂದ ಜೀನ್ಸ್‌ ಉಡುಪುಗಳ ಕಟ್ ಟು ಪ್ಯಾಕ್ ಒಂದೇ ಸೂರಿನಡಿನಲ್ಲಾಗುತ್ತದೆ.

ಉದ್ಯಮಕ್ಕೆ ಸಹಕಾರಿ: ಜೀನ್ಸ್ ಅಪರೆಲ್ ಪಾರ್ಕ್ ನಿರ್ಮಾಣದಿಂದ ಜೀನ್ಸ್ ಸಿದ್ಧ ಉಡುಪು ಉದ್ಯಮಕ್ಕೆ ಸಹಕಾರಿಯಾಗಲಿದೆ. ಈ ಉದ್ಯಮದ ಪ್ರಗತಿಗೆ ಸರ್ಕಾರ ಗಮನ ಹರಿಸಬೇಕು. ಪಾರ್ಕ್ ನಿರ್ಮಾಣಕ್ಕೆ ನೀಡಿದ ಭರವಸೆಯಂತೆ ಅನುದಾನ ನೀಡಬೇಕು ಎಂದು ಜೀನ್ಸ್‌ ಉಡುಪು ಟೈಲರಿಂಗ್ ಸಂಘದ ಅಧ್ಯಕ್ಷ ಇಬ್ರಾಹಿಂ ಬಾಬು ತಿಳಿಸಿದರು.