ಬೆಳ್ಳೂರು ಗ್ರಾಮ: ಹುಲಿ ಸೆರೆಗೆ ಕಾರ್ಯಾಚರಣೆ

| Published : Dec 02 2024, 01:20 AM IST

ಸಾರಾಂಶ

ಹುಲಿ ದಾಳಿ ನಡೆಸಿ ಹಸು ಕೊಂದಿರುವ ಸ್ಥಳಕ್ಕೆ ಮೇರಿಯಂಡ ಸಂಕೇತ್‌ ಪೂವಯ್ಯ ಭೇಟಿ ನೀಡಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದಿರುವ ಸ್ಥಳಕ್ಕೆ ಬೆನ್ನಲ್ಲೇ ಭಾನುವಾರ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿ ಕೂಡಲೇ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲು ಅರಣ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸ್ಥಳದಲ್ಲಿಯೇ ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿದ್ದಾರೆ.

ಶನಿವಾರ ಬೆಳ್ಳೂರು ಗ್ರಾಮದ ಬೆಳೆಗಾರ ನೂರೇರ ರಮೇಶ್ ಅವರ ಹಸುವನ್ನು ಹುಲಿ ಬಲಿ ಪಡೆದಿದ್ದು, ಈ ಬಗ್ಗೆ ಶಾಸಕ ಎ. ಎಸ್. ಪೊನ್ನಣ್ಣ ಅವರೊಂದಿಗೆ ಸಮಾಲೋಚಿಸಿ, ಅವರ ನಿರ್ದೇಶನದಂತೆ ಹುಲಿಸೆರೆಗೆ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದರು.

ಭಾನುವಾರ ಬೆಳ್ಳೂರು ಗ್ರಾಮಸ್ಥರೊಂದಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಂಕೇತ್ ಪೂವಯ್ಯ ಯವರು ನೆಮ್ಮಲೆ ಗ್ರಾಮದಲ್ಲಿ ಹಾಗೂ ಬಾಳೆಲೆ ರಾಜಪುರ ವ್ಯಾಪ್ತಿಯಲ್ಲಿ ಅರಣ್ಯಕ್ಕೆ ಹುಲಿಯನ್ನು ತೆರಳುವಂತೆ ನಡೆಸಿದ ಯಶಸ್ವಿ ಕಾರ್ಯಾಚರಣೆಯಂತೆಯೇ ಬೆಳ್ಳೂರು ಗ್ರಾಮದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳಲಾಗುವುದು. ತಕ್ಷಣದಿಂದಲೇ ಕಾರ್ಯಾಚರಣೆ ಆರಂಭಿಸಲಾಗಿದೆ ಕಾರ್ಯಾಚರಣೆಯ ಉಸ್ತುವಾರಿಯನ್ನು ತಿತಿಮತಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಹಾಗೂ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು

ಈಗಾಗಲೇ ಹಸುವನ್ನು ಹುಲಿ ಕೊಂದಿರುವ ಸ್ಥಳದಲ್ಲಿ ಎರಡು ಬೋನುಗಳನ್ನು ಹುಲಿ ಸೆರೆಗೆ ಇರಿಸಲಾಗಿದೆ. ಹುಲಿಯ ಗುರುತಿಗೆ ವಿವಿಧಡೆ ಕ್ಯಾಮರಾ ಅಳವಡಿಸಲಾಗಿದೆ. ಶನಿವಾರ ರಾತ್ರಿ ಹುಲಿಯು ಗ್ರಾಮದ ಕೆಳವೆಡೆ ಚಲನವಲನದ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಆ ಭಾಗದಲ್ಲಿಯೂ ಕ್ಯಾಮೆರಾ ಅಳವಡಿಸಲಾಗುವುದು ಎಂದು ತಿಳಿಸಿದರು.

ಭಾನುವಾರ ಹುಲಿ ಸುಳಿವು ಪತ್ತೆಯಾಗದಿದ್ದರೆ ಸೋಮವಾರದಿಂದ ಕ್ಷಿಪ್ರ ಅರಣ್ಯ ಕಾರ್ಯಪಡೆ ಹಾಗೂ ಕಾಡಾನೆ ಕಾರ್ಯಾಚರಣೆ ತಂಡವನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದ ಅವರು, ಗ್ರಾಮಸ್ಥರು ಆತಂಕ ದೂರಮಾಡಿ ಹುಲಿ ಕಾರ್ಯಾಚರಣೆ ಯಶಸ್ವಿಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಸಾಕಾನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿಲ್ಲ. ಕಾಡಾನೆಗಳನ್ನು ತೋಟದ ಒಳಗೆ ಬಳಸುವುದರಿಂದ ಕಾಫಿ ಬೆಳೆಗೆ ನಷ್ಟ ಉಂಟಾಗುವ ಹಿನ್ನೆಲೆ ಕಾಡಾನೆಗಳನ್ನು ಹೊರತುಪಡಿಸಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮದ ನಾಲ್ಕು ದಿಕ್ಕಿನಿಂದ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗುವುದು, ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಸಾಧ್ಯವಾಗದಿದ್ದರೆ ಶಾಸಕ ಪೊನ್ನಣ್ಣ ಅವರ ಮಾರ್ಗದರ್ಶದಂತೆ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಗಮನ ಸೆಳೆದು ಅರವಳಿಕೆ ಮೂಲಕ ಹುಲಿ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು

ಹುಲಿಯನ್ನು ಅರಣ್ಯಕ್ಕೆ ಅಟ್ಟುವ ಅಥವಾ ಸೆರೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು, ಕಾಫಿ ಕುಯಿಲು, ತೋಟ ಕೆಲಸ, ಭತ್ತ ಕುಯಿಲು ಕೆಲಸ ಹಿನ್ನಲೆ ತೋಟ ಗದ್ದೆಯಲ್ಲಿ ಬೆಳೆಗಾರರು, ಕಾರ್ಮಿಕರು ಕೆಲಸದಲ್ಲಿ ನಿರತರಾಗಿರುತ್ತಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಸ್ಥಳೀಯರಾದ ಚಂಗುಲಂಡ ಸೂರಜ್, ಇಟ್ಟಿರ ಪೊನ್ನಣ್ಣ, ನೂರೆರ ರಮೇಶ್, ಮನೋಜ್, ಮನೋಹರ್, ಇಟ್ಟಿರ ಭವಿನ್ ಕುಶಾಲಪ್ಪ ಮತ್ತಿತರರು ಹಾಜರಿದ್ದರು.