ಬೆಳ್ತಂಗಡಿ: ತುಂಬಿದ ಕೆರೆ ಗೇಟು ತೆಗೆಯಲು ಹರಸಾಹಸ

| Published : Aug 04 2024, 01:15 AM IST

ಬೆಳ್ತಂಗಡಿ: ತುಂಬಿದ ಕೆರೆ ಗೇಟು ತೆಗೆಯಲು ಹರಸಾಹಸ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಗೇಟ್ ತೆರೆದುಕೊಂಡಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿದ್ದು, ಕೆರೆ ದಂಡೆ ಒಡೆಯುವ ಭಯ ದೂರವಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಪುರಾತನ ಕೆರೆ ಪೂರ್ಣ ತುಂಬಿದ್ದು, ಇದರ ಗೇಟು ತೆರೆಯಲು ಹರಸಾಹಸ ಪಟ್ಟ ಘಟನೆ ನಡೆದಿದೆ. ಕೊನೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ತಂಡದವರು ಯಶಸ್ವಿ ಕಾರ್ಯಾಚರಣೆ ನಡೆಸಿ ಸಂಭವನೀಯ ಅಪಾಯ ತಪ್ಪಿಸಿದ್ದಾರೆ.ಅರಣ್ಯ ಭಾಗದಲ್ಲಿ 27.47 ಎಕರೆ ಪ್ರದೇಶದಲ್ಲಿರುವ ಈ ಕೆರೆ ಗ್ರಾಮದ ಸುಮಾರು 300ಕ್ಕಿಂತ ಅಧಿಕ ಕುಟುಂಬಗಳಿಗೆ ಬೇಸಿಗೆಯ ಕೃಷಿ ನೀರಿಗೆ ಆಧಾರವಾಗಿದೆ. ಈ ಕೆರೆಯ ನೀರನ್ನು ಇಲ್ಲಿಯ ಮಂದಿ ಕೃಷಿ ಸಹಿತ ನಿತ್ಯ ಉಪಯೋಗಕ್ಕೂ ಬಳಸುತ್ತಾರೆ. ಹೂಳು ತುಂಬಿ ಶಿಥಿಲಾವಸ್ಥೆ ತಲುಪಿರುವ ಈ ಕೆರೆ ಮತ್ತು ಸುತ್ತಲ ಪ್ರದೇಶದ ಅಭಿವೃದ್ಧಿಗೆ ನಬಾರ್ಡ್ ದೊಡ್ಡ ಮೊತ್ತದ ಯೋಜನೆ ರೂಪಿಸಿದ್ದು, ಹಲವಾರು ಸಮೀಕ್ಷೆಗಳನ್ನು ನಡೆಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆದು ಕೆರೆ ಅಭಿವೃದ್ಧಿಗೆ ಒಪ್ಪಿಗೆ ಪಡೆದಿದೆ. ಮುಂದಿನ ಬೇಸಿಗೆಯಲ್ಲಿ ಈ ಕೆರೆಯ ಅಭಿವೃದ್ಧಿ ಕೆಲಸಗಳು ಆರಂಭವಾಗುವ ನಿರೀಕ್ಷೆ ಇದೆ.* ತುಂಬಿದ ಕೆರೆಈ ಬಾರಿ ಮಳೆಗೆ ಕೆರೆಯು ಸಂಪೂರ್ಣ ತುಂಬಿದೆ. ಕೆರೆ ನೀರು ಹೊರ ಬಿಡಲು ಅಳವಡಿಸಲಾದ ಗೇಟು ಮುಚ್ಚಿದ್ದು, ಅದನ್ನು ತೆರೆಯಲು ಪಂಚಾಯಿತಿ ಮತ್ತು ಸ್ಥಳೀಯರು ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಕೆರೆಯಲ್ಲಿ ಹೆಚ್ಚಿನ ನೀರು ತುಂಬಿದ್ದರಿಂದ ಸಾಧ್ಯವಾಗಿಲ್ಲ. ಗೇಟು ತೆರೆದಾಗ ನೀರು ಸ್ಥಳೀಯ ತೋಡಿಗೆ ಹರಿದು ಕೆರೆಯಲ್ಲಿ ನೀರಿನ ಮಟ್ಟ ಹಾಗೂ ನೀರಿನ ಒತ್ತಡ ಕಡಿಮೆಯಾಗುತ್ತದೆ. ನೀರನ್ನು ಹೀಗೆ ಬಿಟ್ಟರೆ ಕೆರೆದಂಡೆ ಒಡೆಯುವ ಸಾಧ್ಯತೆಯಿದ್ದು, ಈ ಪರಿಸರದ ನೆಲ್ಲಿಗುಡ್ಡೆ, ಕಂಚಾರಿ ಕಂಡ, ಬೇಂದ್ರಾಳ ಮೊದಲಾದ ಪ್ರದೇಶಗಳ ಜನರಿಗೆ ತೀವ್ರ ಸಮಸ್ಯೆ ಹಾಗೂ ಅಪಾಯವು ಉಂಟಾಗುವ ಸಾಧ್ಯತೆ ಇತ್ತು.

ತೆರವು ಕಾರ್ಯಾಚರಣೆಈಶ್ವರ್ ಮಲ್ಪೆ ಅವರ ತಂಡ ಶನಿವಾರ ಸ್ಥಳಕ್ಕಾಗಮಿಸಿ ಸುಮಾರು 20 ಅಡಿ ಆಳಕ್ಕೆ ಮುಳುಗಿ ಬೇಸಿಗೆ ಕಾಲದಲ್ಲಿ ನೀರು ಸಂಗ್ರಹಿಸಲು ಇಟ್ಟಿದ್ದ ಮರಳಿನ ಗೋಣಿಗಳು ಗೇಟಿಗೆ ಸಿಲುಕಿದ್ದನ್ನು ಸ್ಥಳಾಂತರಿಸಿ ಗೇಟು ತೆರೆಯುವ ಕಾರ್ಯಾಚರಣೆ ನಡೆಸಿದರು.ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ಅರಣ್ಯ, ಪೊಲೀಸ್, ಅಗ್ನಿಶಾಮಕ ದಳ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಗ್ರಾ.ಪಂ. ಅಧ್ಯಕ್ಷೆ ಶಾರದಾ, ವಿಎ ಹೆರಾಲ್ಡ್ ಡಿಸೋಜ, ಪಿಡಿಒ ಪುರುಷೋತ್ತಮ, ಪಂಚಾಯಿತಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಇದ್ದರು.ಪ್ರಸ್ತುತ ಗೇಟ್ ತೆರೆದುಕೊಂಡಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿದ್ದು, ಕೆರೆ ದಂಡೆ ಒಡೆಯುವ ಭಯ ದೂರವಾಗಿದೆ.