ಸಾರಾಂಶ
ರಾಮನಗರ: ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಮುಗಿದಿದ್ದು, ಮತದಾರರು ಯಾರ ಪರವಾಗಿ ಒಲವು ತೋರಿರಬಹುದು ಎಂದು ರಾಜಕೀಯ ನಾಯಕರು, ಕಾರ್ಯಕರ್ತರು ಮಾತ್ರವಲ್ಲದೆ ಸಾರ್ವಜನಿಕರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
2ನೇ ಹಂತದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಚುನಾವಣೆ ಮುಗಿದಿದೆ. ಇದರೊಂದಿಗೆ ಇಲ್ಲಿನ ಚುನಾವಣಾ ರಾಜಕೀಯ ಚಟುವಟಿಕೆಗಳಿಗೂ ತೆರೆ ಬಿದ್ದಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.
ಚುನಾವಣಾ ಕಣದಲ್ಲಿ ಪ್ರಮುಖ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಡಿ.ಕೆ. ಸುರೇಶ್ , ಬಿಜೆಪಿಯ ಡಾ.ಸಿ.ಎನ್ .ಮಂಜುನಾಥ್ ಅವರ ನಡುವೆ ತೀವ್ರ ಹಣಾಹಣಿ ಕಂಡುಬಂದಿತ್ತು. ಆದ್ದರಿಂದ, ಇವರಿಬ್ಬರಲ್ಲಿ ಯಾರ ಕೈ ಮೇಲಾಗಿದೆ, ಯಾರಿಗೆ ಹೊಡೆತ ಬಿದ್ದಿದೆ, ಜನರು ಯಾರಿಗೆ ಜೈ ಎಂದಿದ್ದಾರೆ, ಅದಕ್ಕೆ ಕಾರಣವಾಗಿರುವ ಅಂಶಗಳೇನು ಎಂಬಿತ್ಯಾದಿ ವಿಷಯಗಳ ಮೇಲೆ ಚರ್ಚೆಗಳು ಮತ್ತು ವಿಶ್ಲೇಷಣೆಗಳು ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷದವರ ವಲಯದಲ್ಲಿ ನಡೆಯುತ್ತಿವೆ. ಮತದಾನೋತ್ತರ ವಿಶ್ಲೇಷಣೆಗಳು-ಚರ್ಚೆಗಳು ಕುತೂಹಲ ಕೆರಳಿಸಿವೆ.
ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದವರು, ಆ ಪಕ್ಷಗಳ ಬೆಂಬಲಿಗರು ಮತ್ತು ಕಾರ್ಯಕರ್ತರು ತಮ್ಮದೇ ಆದ ವಿಶ್ಲೇಷಣೆಗಳನ್ನು ಮಾಡುತ್ತಾ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದಾರೆ. ಮತದಾರರು ನಮ್ಮನ್ನು ಈ ಕಾರಣಕ್ಕಾಗಿ ಬೆಂಬಲಿಸಿದ್ದಾರೆ ಅಥವಾ ಬೆಂಬಲಿಸಿರಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ಚುನಾವಣೆಯ ಸೋಲು-ಗೆಲುವಿನ ಲೆಕ್ಕಾಚಾರದ್ದೇ ಪ್ರಮುಖ ಪಾತ್ರ ವಹಿಸಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಪರವಾಗಿ ಖುದ್ದು ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ, ಮಾಜಿ ಪ್ರಧಾನಿ ದೇವೇಗೌಡರವರು ಬಂದು ಪ್ರಚಾರ ಮಾಡಿದ್ದರು. ಕಾಂಗ್ರೆಸ್ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಚಾರ ನಡೆಸಿ ಮತ ಯಾಚಿಸಿದ್ದರು. ಕ್ಷೇತ್ರದಲ್ಲಿ ಇಬ್ಬರೂ ನಾಯಕರು ಪ್ರತಿಷ್ಠೆಯನ್ನು ಪಣವಾಗಿ ಇಟ್ಟಿದ್ದರು. ಇವರಲ್ಲಿ ಯಾರ ಮನವಿಗೆ ಜನರು ಬೆಂಬಲ ನೀಡಿದ್ದಾರೆ ಎನ್ನುವುದು ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ. ಚುನಾವಣೆಯ ಸೋಲು, ಗೆಲುವಿನ ಲೆಕ್ಕಾಚಾರಗಳಿಗೆ ಜೂನ್ 4ರಂದು ಉತ್ತರ ದೊರೆಯಲಿದೆ.
ಮತದಾನ ಪ್ರಮಾಣ ಹೆಚ್ಚಿಸಿದ ಎದೆ ಬಡಿತ!
2019ರಲ್ಲಿ ನಡೆದಿದ್ದ ಚುನಾವಣೆಗಿಂತ ಈ ಬಾರಿ ಮತದಾನ ಪ್ರಮಾಣ ಶೇ.3.4ರಷ್ಟು ಹೆಚ್ಚಾಗಿದೆ. ಇದರಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ಆ ಪಕ್ಷದ ನಾಯಕರು ವಿಶ್ಲೇಷಿಸುತ್ತಿದ್ದರೆ, ಇದು ಕಾಂಗ್ರೆಸ್ ಗೆಲುವಿಗೆ ನೆರವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಹೇಳುತ್ತಿದ್ದಾರೆ.
ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾನ ಆಗಲು ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾರಣ ಎಂದು ಕಾಂಗ್ರೆಸ್ಸಿಗರು ವಾದಿಸುತ್ತಿದ್ದರೆ, ಇದು ಹೊಸ ಮತದಾರರ ಎಫೆಕ್ಟ್ , ಇದರಿಂದ ಏನಿದ್ದರೂ ಬಿಜೆಪಿಗೆ ಲಾಭ ಎಂದು ಕಮಲ ಪಕ್ಷದವರು ವಿಶ್ಲೇಷಿಸುತ್ತಿದ್ದಾರೆ.
ಕ್ಷೇತ್ರದಲ್ಲಿರುವ 8 ವಿಧಾನಸಭಾ ಕ್ಷೇತ್ರವಾರು ಮತಗಟ್ಟೆವಾರು ಮತದಾನ ಪ್ರಮಾಣದ ಪಟ್ಟಿಗಳನ್ನು ಇಟ್ಟುಕೊಂಡು ನಾಯಕರುಗಳು ತಮ್ಮ ಬೆಂಬಲಿಗರೊಂದಿಗೆ ಒಂದು ಸುತ್ತಿನ ವಿಶ್ಲೇಷಣೆ ನಡೆಸಿದ್ದಾರೆ. ಯಾವ ಕ್ಷೇತ್ರ ಅಥವಾ ಮತಗಟ್ಟೆಗಳಲ್ಲಿ ಯಾರಿಗೆ ಹೆಚ್ಚಿನ ಬೆಂಬಲ ಸಿಕ್ಕಿರಬಹುದು ಯಾರಿಗೆ ಯಾರಿಂದ ಒಳೇಟು ಬಿದ್ದಿರಬಹುದು ಎಂಬ ಊಹೆಗಳ ಆಧಾರದ ಮೇಲೆ ಚರ್ಚೆಗಳು ರೆಕ್ಕೆಪುಕ್ಕ ಪಡೆದುಕೊಳ್ಳುತ್ತಿವೆ.ಬಾಕ್ಸ್........
ಕ್ಷೇತ್ರದಲ್ಲಿ ಏನೆಲ್ಲ ಚರ್ಚೆಗಳು ನಡೆಯುತ್ತಿವೆ ?
-ಬಡಜನರ ಸೇವಕ ಡಾ.ಸಿ.ಎನ್. ಮಂಜುನಾಥ್ ಹಾಗೂ ಉತ್ತಮ ಕೆಲಸಗಾರ ಡಿ.ಕೆ. ಸುರೇಶ್ ಪೈಕಿ ಗೆಲ್ಲೋರು ಯಾರು ?
-ಮಂಜುನಾಥ್ ರವರು ಮೊದಲ ಪ್ರಯತ್ನದಲ್ಲಿಯೇ ಗೆದ್ದು ಸಂಸತ್ ಪ್ರವೇಶಿಸುವರೇ?. ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಸಚಿವರಾಗುವರೇ ? ಅಥವಾ ಹ್ಯಾಟ್ರಿಕ್ ವಿಜೇತ ಡಿ.ಕೆ.ಸುರೇಶ್ ನಾಲ್ಕನೇ ಬಾರಿಯೂ ಗೆದ್ದು ಹೊಸ ದಾಖಲೆ ಬರೆಯುತ್ತಾರೆಯೇ ?
-ಈ ಬಾರಿಯೂ ಮೋದಿ ಅಲೆ ಕೆಲಸ ಮಾಡಿದೆಯೇ? ಅಥವಾ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಹಿಡಿದಿವೆಯೇ ?
-ಬಿಜೆಪಿ - ಜೆಡಿಎಸ್ ಮೈತ್ರಿಯನ್ನು ಮತದಾರರು ಮಾನ್ಯ ಮಾಡಿದ್ದಾರ ಅಥವಾ ತಿರಸ್ಕರಿಸಿದ್ದಾರಾ ?
-ಅಮಿತ್ ಶಾ - ದೇವೇಗೌಡ, ಯಡಿಯೂರಪ್ಪ- ಕುಮಾರಸ್ವಾಮಿ, ಅಶ್ವತ್ಥ ನಾರಾಯಣ, ಸಿ.ಪಿ.ಯೋಗೇಶ್ವರ್, ಎ.ಮಂಜುನಾಥ್ ಜಂಟಿ ಪ್ರಚಾರ ಕೆಲಸ ಮಾಡಿದೆಯೇ?
-ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದಂತೆ ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ಜೋಡಿ ಮ್ಯಾಜಿಕ್ ಮಾಡಿದೆಯೇ? ಚಿತ್ರನಟ ದರ್ಶನ್ ಪ್ರಚಾರ ಪ್ರಭಾವ ಬೀರಿದೆಯೇ?
-ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಗಡಿಯಲ್ಲಿ ಎ.ಮಂಜುನಾಥ್ ಮತ್ತು ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದರು. ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿದ ಜೆಡಿಎಸ್ ಈ ಬಾರಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರನ್ನು ಗೆಲ್ಲಿಸಿ ಸೇಡು ತೀರಿಸಿಕೊಳ್ಳುವರೇ?
-ಬಿಜೆಪಿ - ಜೆಡಿಎಸ್ ಮೈತ್ರಿ ಕೂಟ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಲೀಡ್ ಬರಬಹುದು. ಮೂರು ಪಕ್ಷಗಳ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದಾರ ಅಥವಾ ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಹೆಚ್ಚು ಮತಗಳನ್ನು ಕೊಡಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರಾ?