ಸಾರಾಂಶ
ಹಾವೇರಿ: ಹಿಂದುಳಿದ ವರ್ಗಗಳ ನಾಯಕ, ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಅಹಿಂದ ಒಕ್ಕೂಟದಿಂದ ಅ. ೩ರಂದು ಹುಬ್ಬಳ್ಳಿಯಿಂದ ಬೆಂಗಳೂರಿನವರೆಗೆ "ಸಂವಿಧಾನ ಪೀಠಿಕೆ ಜ್ಞಾಪಕ ಜನ ಜಾಗೃತಿ ಜಾಥಾ " ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಒಕ್ಕೂಟದ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ಹೇಳಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಷಿತ ಸಮುದಾಯಗಳ ಮುಖಂಡ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಅನಗತ್ಯ ಆರೋಪಗಳನ್ನು ಹೊರಿಸಿ ಅವರು ಅಧಿಕಾರ ನಡೆಸಲು ತೊಂದರೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೇಂದ್ರ ಸರ್ಕಾರ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಯೇತರ ಸರ್ಕಾರಗಳು ಇರುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ತೊಂದರೆ ನೀಡಿ ಅಲ್ಲಿನ ಸರ್ಕಾರಗಳನ್ನು ಅಸ್ಥಿರಗೊಳಿಸಿ ಬಿಜೆಪಿ ಸರ್ಕಾರ ತರಲು ಹುನ್ನಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಹಿಂದ ನಾಯಕರ ಉಳಿವಿಗಾಗಿ, ಸಂವಿಧಾನದ ಪೀಠಿಕೆ ಇರಿಸಿಕೊಂಡು ಕ್ಯಾಂಟರ್ ವಾಹನದ ಮೂಲಕ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದರು. ಅಹಿಂದ ಒಕ್ಕೂಟದ ಕಾರ್ಯಾಧ್ಯಕ್ಷ ಗುರನಗೌಡ ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ನಾಯಕರು ಹುನ್ನಾರ ನಡೆಸಿ ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಸಿದ್ದರಾಮಯ್ಯ ಬೆಂಬಲಿಸಿ ಅ. ೩ರಂದು ಬೆಳಗ್ಗೆ ೧೧.೩೦ಕ್ಕೆ ಹುಬ್ಬಳ್ಳಿಯಿಂದ ಜಾಥಾ ಆರಂಭಗೊಳ್ಳಲಿದೆ. ಮಾರ್ಗ ಮಧ್ಯ ಶಿಗ್ಗಾಂವಿ, ದಾವಣಗೆರೆಯಲ್ಲಿ ಅಂಬೇಡ್ಕರ್, ಕಿತ್ತೂರ ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಚಿತ್ರದುರ್ಗದಲ್ಲಿ ವಾಸ್ತವ್ಯ ಮಾಡಲಾಗುವುದು. ಅ. ೪ರಂದು ಬೆಳಗ್ಗೆ ಮತ್ತೆ ಜಾಥಾ ಆರಂಭಗೊಂಡು ತುಮಕೂರಿನ ಸಿದ್ದಾರ್ಥ ಕಾಲೇಜಿನಲ್ಲಿ ಸಮಾವೇಶ, ಅಲ್ಲಿಂದ ಬೆಂಗಳೂರಿನ ವಿಧಾನಸೌಧ ತಲುಪುತ್ತದೆ. ಅಲ್ಲಿ ಸಿದ್ದರಾಮಯ್ಯ ಅವರಿಗೆ ಮಧ್ಯಾಹ್ನ ೪ಕ್ಕೆ ಬೆಂಬಲ ವ್ಯಕ್ತಪಡಿಸಿ, ಸಂಜೆ ೬ಕ್ಕೆ ಫ್ರೀಡಂ ಪಾರ್ಕನಲ್ಲಿ ಬಹಿರಂಗ ಸಮಾವೇಶ ನಡೆಸಲಾಗುವುದು. ಈ ಜಾಥಾದಲ್ಲಿ ನೂರಾರು ನಾಯಕರು ಸ್ವಯಂಪ್ರೇರಿತ ಬೆಂಬಲ ನೀಡಿದ್ದು ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ ಎಂದರು. ಅಹಿಂದ ಒಕ್ಕೂಟದ ನಾಯಕರಾದ ಹನುಮಂತಪ್ಪ ಬಂಡಿವಡ್ಡರ, ಬಸವರಾಜ ಹಾದಿಮನಿ, ಉಡಚಪ್ಪ ಮಾಳಗಿ, ಮಹದೇವಗೌಡ, ಶ್ರೀಧರ ದೊಡ್ಡಮನಿ ಇತರರು ಇದ್ದರು.