ಸಾರಾಂಶ
ಬೆಂಗಳೂರು : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಬೆಂಗಳೂರು ನಿವಾಸಿ ಭರತ್ ಭೂಷಣ್ ಮೃತಪಟ್ಟಿದ್ದಾರೆ. ಭರತ್ ಭೂಷಣ್ ಹಾವೇರಿ ಜಿಲ್ಲೆ ರಾಣೇಬೆನ್ನೂರು ಮೂಲದವರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭರತ್ ಭೂಷಣ್ ಬೆಂಗಳೂರಿನ ಮತ್ತಿಕೆರೆ ಜೆ.ಪಿ.ಪಾರ್ಕ್ ಬಳಿ ಕುಟುಂಬದೊಂದಿಗೆ ನೆಲೆಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಪತ್ನಿ ಸುಜಾತಾ ಮತ್ತು ಮೂರು ವರ್ಷದ ಮಗು ಜತೆಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು.
ಮಂಗಳವಾರ ಪಹಲ್ಗಾಮ್‌ನಲ್ಲಿ ಪತ್ನಿ ಮತ್ತು ಮಗುವಿನ ಎದುರೇ ಭರತ್ ಭೂಷಣ್ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಉಗ್ರರ ಭೀಕರ ದಾಳಿಯ ಬಗ್ಗೆ ಸುಜಾತಾ ಅವರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಪ್ರವಾಸದಲ್ಲಿ ಇದ್ದಾಗ ಬಂದೂಕು ಧಾರಿ ವ್ಯಕ್ತಿಯೊಬ್ಬ ಭರತ್ ಭೂಷಣ್ ಬಳಿ ಬಂದು ಹೆಸರು ಮತ್ತು ಧರ್ಮದ ಬಗ್ಗೆ ಕೇಳಿದ್ದಾನೆ. ಇದಕ್ಕೆ ಭರತ್ ಭೂಷಣ್ ತಾನು ಹಿಂದೂ ಎಂದು ಹೇಳಿದ ತಕ್ಷಣ ಆ ವ್ಯಕ್ತಿ ತಲೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಈ ವೇಳೆ ಸುಜಾತಾ ಅವರು ತಮ್ಮ ಮೂರು ವರ್ಷದ ಮಗುವನ್ನು ಎತ್ತಿಕೊಂಡು ಸ್ವಲ್ಪ ದೂರು ಓಡಿದರು ಎಂದು ತಿಳಿದು ಬಂದಿದೆ.
ಪಹಲ್ಗಾಮ್ ದಾಳಿ ಹೇಯ: ಬೊಮ್ಮಾಯಿ
ಕನ್ನಡಪ್ರಭ ವಾರ್ತೆ ಬೆಂಗಳೂರುಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ಹಲ್ಲೆ ಮಾಡಿರುವುದು ಹೇಯ ಕೃತ್ಯ ಮತ್ತು ಭಯೋತ್ಪಾದನೆ ಮರುಸ್ಥಾಪಿಸುವ ಪ್ರಯತ್ನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಘಟನೆಯನ್ನು ಪ್ರತಿಯೊಬ್ಬ ನಾಗರಿಕರು ಖಂಡಿಸುತ್ತೇವೆ. ಧರ್ಮದ ಹೆಸರು ಕೇಳಿ ಗುಂಡು ಹಾರಿಸಿರುವುದು ದೇಶದ ವಿರೋಧಿ ಶಕ್ತಿಗಳ ಕೈವಾಡ ಇರುವುದು ಬಹಳ ಸ್ಪಷ್ಟ. ಇದನ್ನು ಕೂಡಲೇ ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಮಟ್ಟ ಹಾಕಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ.ಜಮ್ಮು ಕಾಶ್ಮೀರ ಕಣಿವೆಯಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರಲು ರಾಜ್ಯ ಸರ್ಕಾರ ಎಲ್ಲ ವ್ಯವಸ್ಥೆಯನ್ನು ಮಾಡಬೇಕು. ಘಟನೆಯಲ್ಲಿ ಮೃತರಾದವರ ಕುಟುಂಬದವರಿಗೆ ಅವರ ಅಗಲಿಕೆಯ ದುಖವನ್ನು ಭರಿಸುವ ಭಗವಂತ ಶಕ್ತಿ ಕೊಡಲಿ ಎಂದಿದ್ದಾರೆ.
ಉಗ್ರರ ದಾಳಿ ಹೇಯ ಕೃತ್ಯ: ಎಚ್‌ಡಿಕೆ ಕಿಡಿ
ಬೆಂಗಳೂರುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಯು ಹೇಯ ಕೃತ್ಯವಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವದಲ್ಲಿ ಕಣಿವೆ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಯಾಗಿದೆ. ಹೇಗಾದರೂ ಅದನ್ನು ಹಾಳು ಮಾಡುವ ದುರುದ್ದೇಶದಿಂದ ಉಗ್ರರು ಈ ಕುಕೃತ್ಯ ಎಸಗಿದ್ದಾರೆ. ಭಯೋತ್ಪಾದನೆ ಎಂದಿಗೂ ಭಾರತವನ್ನು ಅಧೀರಗೊಳಿಸುವುದಿಲ್ಲ. ಇಂತಹ ವಿನಾಶಕಾರಿ ಶಕ್ತಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಭಾರತ ಹೊಂದಿದೆ. ಅಮಾನವೀಯ ದಾಳಿಯಲ್ಲಿ ಹುತಾತ್ಮರಾದ ಎಲ್ಲರಿಗೂ ಚಿರಶಾಂತಿ ಸಿಗಲಿ ಮತ್ತು ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಗಳಿಗೆ ದಯಪಾಲಿಸಲಿ ಎಂದಿದ್ದಾರೆ.
ಸಾವಿನ ಮನೆಯಲ್ಲಿ ಬೇಳೆ ಬೇಯಿಸಲೆತ್ನ: ಅಶೋಕ್
ಬೆಂಗಳೂರು : ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ನೋವಿನ ಆಕ್ರಂದನವಿದ್ದರೂ ಸಾವಿನ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ರಂತಹ ಕಾಂಗ್ರೆಸ್ ನಾಯಕರಿಗೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಇಡೀ ದೇಶ ಆಘಾತದಲ್ಲಿದೆ. ನೋವಿನ ಮಡುವಿನಲ್ಲಿರುವ ಸಂತ್ರಸ್ತ ಕುಟುಂಬಗಳ ಆಕ್ರಂದನ ಕಂಡು ಕಣ್ಣೀರಿಡುತ್ತಿದೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ, ಸಾವಿನ ಮನೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದಿನೇಶ್ ಗುಂಡೂರಾವ್ ಅವರಂತಹ ಕಾಂಗ್ರೆಸ್ ನಾಯಕರಿಗೆ ನಿಜಕ್ಕೂ ನಾಚಿಕೆಯಾಗಬೇಕು. ಕನಿಷ್ಠ ಸಂವೇದನೆಯೂ ಇಲ್ಲದ, ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲದ ಇಂತಹವರಿಗೆ ಮಂತ್ರಿಗಿರಿ ಕೊಟ್ಟು ಕೂರಿಸಿರುವ ಪುಣ್ಯಾತ್ಮರು ಯಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ಳುವ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಾಠ ಕಲಿಯಬೇಕಾ? ಲಜ್ಜೆಗೇಡಿತನಕ್ಕೂ ಒಂದು ಮಿತಿ ಇರಬೇಕು ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ವಾಗ್ದಾಳಿ ನಡೆಸಿದ್ದಾರೆ.