ಸಾರಾಂಶ
46 ಹಿಂದೂ ಜಾತಿಗಳ ಜತೆ ಕ್ರಿಶ್ಚಿಯನ್ ಸೇರಿಸಿ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ 33 ಕ್ರಿಶ್ಚಿಯನ್ ಜತೆಗಿನ ಹಿಂದೂ ಜಾತಿಗಳ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ.
ಬೆಂಗಳೂರು : ಲಿಂಗಾಯತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಹೀಗೆ ವಿವಿಧ 46 ಹಿಂದೂ ಜಾತಿಗಳ ಜತೆ ಕ್ರಿಶ್ಚಿಯನ್ ಸೇರಿಸಿ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ 33 ಕ್ರಿಶ್ಚಿಯನ್ ಜತೆಗಿನ ಹಿಂದೂ ಜಾತಿಗಳ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದಾಗಿ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ.
ಈ ಜಾತಿಗಳ ಜನ ಸ್ವಇಚ್ಛೆಯಿಂದ ಜಾತಿ ಹೆಸರು ನಮೂದಿಸಬೇಕಾಗಿದ್ದರೆ ಇತರೆ ಕಾಲಂನಲ್ಲಿ ನಮೂದಿಸಬಹುದು. ಬಳಿಕ ಆಯೋಗವು ಕ್ರೋಢೀಕರಿಸಿ ವರದಿ ಸಿದ್ಧಪಡಿಸಲಿದೆ.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಹಿಂದುಳಿದ ವರ್ಗಗಳ ಆಯೋಗದ ಪಟ್ಟಿಯಲ್ಲಿ ಜಾತಿಗಳ ಕುರಿತು ಅನಗತ್ಯ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ 1,561 ಜಾತಿಗಳ ಪಟ್ಟಿಯಲ್ಲಿ 33 ಜಾತಿಗಳ ಪಟ್ಟಿಯನ್ನು ಸಮೀಕ್ಷಾ ನಮೂನೆಯಿಂದ ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೆಲ ಅನಗತ್ಯ ವಿವಾದ ಪರಿಹರಿಸಲು ಆಯೋಗ ಈ ಕ್ರಮ ತೆಗೆದುಕೊಂಡಿದೆ. ಜಾತಿಗಳನ್ನು ಸೃಷ್ಟಿಸುವ ಕೆಲಸವನ್ನು ಆಯೋಗ ಮಾಡಿಲ್ಲ. ಹಿಂದಿನ ವರ್ಷಗಳಲ್ಲೇ ಈ ಜಾತಿಗಳು ಅಸ್ತಿತ್ವದಲ್ಲಿದ್ದವು. ಹೀಗಾಗಿ ಸಮೀಕ್ಷೆದಾರರ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್‌ನಲ್ಲಿ ಡ್ರಾಪ್ ಡೌನ್‌ನಲ್ಲಿ ಪಟ್ಟಿ ಮಾಡಿ ಒದಗಿಸಲಾಗಿತ್ತು. ಇದು ಜಾತಿಗಳನ್ನು ಸುಲಭವಾಗಿ ಗುರುತಿಸುವ ಉದ್ದೇಶದಿಂದ ಮಾಡಿದ್ದ ಪಟ್ಟಿಯೇ ಹೊರತು ಬೇರೆ ಉದ್ದೇಶಕ್ಕೆ ಬಳಸಲು ಸಾಧ್ಯವಿಲ್ಲ ಎಂದು ಮಧುಸೂದನ್ ನಾಯಕ್ ಸ್ಪಷ್ಟಪಡಿಸಿದರು.
ಈ ಪಟ್ಟಿ ಬಗ್ಗೆ ವಿನಾಕಾರಣ ಸುಳ್ಳು ಸಂದೇಶ ಹರಡಲಾಗಿದೆ. ಇದರಿಂದ ಜನ ಆತಂಕಕ್ಕೆ ಒಳಗಾಗುವುದನ್ನು ಪರಿಗಣಿಸಿ ಡ್ರಾಪ್‌ಡೌನ್ ಆಯ್ಕೆಯಲ್ಲಿ ಕೆಲ ಜಾತಿಗಳ ಹೆಸರು ನಿಷ್ಕ್ರಿಯಗೊಳಿಸಲಾಗಿದೆ. ಹಾಗಂತ, ಆ ಜಾತಿಗಳನ್ನು ಜನ ನೋಂದಣಿ ಮಾಡಲು ಸಾಧ್ಯವೇ ಇಲ್ಲ ಎಂದಲ್ಲ. ಯಾವುದೇ ಹೆಸರನ್ನು ಸ್ವ-ಇಚ್ಛೆಯಿಂದ ನಮೂದಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಏನಿದು ಕ್ರಿಶ್ಚಿಯನ್ ಜಾತಿಗಳ ವಿವಾದ?:
ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್ ಹೀಗೆ 46 ಹಿಂದೂ ಜಾತಿಗಳ ಜತೆಗೆ ಕ್ರಿಶ್ಚಿಯನ್ ಸೇರಿ ಜಾತಿಗಳ ಪಟ್ಟಿ ನೀಡಲಾಗಿತ್ತು. ಇದು ಹಿಂದಿನ ಕಾಂತರಾಜ ಆಯೋಗದ ಅವಧಿಯಲ್ಲಿನ ಪಟ್ಟಿಯಲ್ಲೂ ಇತ್ತು ಎಂಬುದು ಆಯೋಗದ ವಾದವಾಗಿತ್ತು. ಆದರೆ, ಈ ಬಗ್ಗೆ ಹಲವು ಜಾತಿಗಳ ಮಠಾಧೀಶರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 33 ಜಾತಿಗಳನ್ನು (ಮೀಸಲಾತಿಗೆ ಅರ್ಹ ಎಸ್ಸಿ/ಎಸ್ಟಿಯ 13 ಜಾತಿ ಹೊರತುಪಡಿಸಿ) ಪಟ್ಟಿಯಿಂದ ಕೈಬಿಡಲಾಗಿದೆ.
ಈ ಜಾತಿಗಳವರು ಸ್ವಇಚ್ಛೆಯಿಂದ ಜಾತಿ ಹೆಸರು ನಮೂದಿಸಬೇಕಾಗಿದ್ದರೆ ಇತರೆ ಕಾಲಂನಲ್ಲಿ ನಮೂದಿಸಬಹುದು. ಬಳಿಕ ಆಯೋಗವು ಕ್ರೋಢೀಕರಿಸಿ ವರದಿ ಸಿದ್ಧಪಡಿಸಲಿದೆ.