ಸಾರಾಂಶ
ರಾಜ್ಯಾದ್ಯಂತ ಸೋಮವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗುತ್ತಿದ್ದರೂ ರಾಜಧಾನಿ ಬೆಂಗಳೂರಿನಲ್ಲಿ ಸಿಬ್ಬಂದಿ ಕೊರತೆ, ಸಿದ್ಧತೆ ವಿಳಂಬದ ಹಿನ್ನೆಲೆಯಲ್ಲಿ ಸಮೀಕ್ಷೆ ತುಸು ತಡವಾಗಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯಾದ್ಯಂತ ಸೋಮವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗುತ್ತಿದ್ದರೂ ರಾಜಧಾನಿ ಬೆಂಗಳೂರಿನಲ್ಲಿ ಸಿಬ್ಬಂದಿ ಕೊರತೆ, ಸಿದ್ಧತೆ ವಿಳಂಬದ ಹಿನ್ನೆಲೆಯಲ್ಲಿ ಸಮೀಕ್ಷೆ ತುಸು ತಡವಾಗಲಿದೆ.ರಾಜ್ಯ ಸರ್ಕಾರದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಹಾಗೂ ಐದು ಪಾಲಿಕೆಗಳ ರಚನೆಯ ಆಡಳಿತಾತ್ಮಕ ಪ್ರಕ್ರಿಯೆಗಳಿಂದ ಬೆಂಗಳೂರು ನಗರದಲ್ಲಿ ಸಮೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಸಾಧ್ಯವಾಗಿಲ್ಲ. ಇನ್ನೂ 2-3 ದಿನ ವಿಳಂಬವಾಗುವ ಸಾಧ್ಯತೆಯಿದೆ.
ಸೆ.17ರಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ.ಮಹೇಶ್ವರರಾವ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ಸಮೀಕ್ಷೆಗೆ ಅಗತ್ಯವಿರುವ ಬಿ ಮತ್ತು ಸಿ ವೃಂದದ 22,672 ಮಂದಿ ಸಿಬ್ಬಂದಿಯನ್ನು ವಿವಿಧ ಇಲಾಖೆಗಳಿಂದ ನಿಯೋಜಿಸಿಕೊಳ್ಳಲು ಅನುಮತಿ ಕೋರಿದ್ದಾರೆ. ಈ ಸಂಬಂಧ ಸೆ.18 ರಂದು ಶಾಲಿನಿ ರಜನೀಶ್ ಅವರು ತುರ್ತು ಆದೇಶ ಹೊರಡಿಸುವಂತೆ ಎಲ್ಲಾ ಇಲಾಖೆಗಳ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದರು.ತರಬೇತಿ ತಡವಾಗಿ ಆರಂಭ:
ಶಿಕ್ಷಣ ಇಲಾಖೆಯಿಂದ 5,132, ಬಿಬಿಎಂಪಿಯಿಂದ (ಹಿಂದಿನ) 1,684, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ 1,566, ಬೆಂಗಳೂರು ಜಲಮಂಡಳಿಯಿಂದ 936, ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 860, ಕೆಪಿಟಿಸಿಎಲ್‌ನಿಂದ 810, ತಾಂತ್ರಿಕ ಶಿಕ್ಷಣ ಇಲಾಖೆಯಿಂದ 806 ಹೀಗೆ 152 ಇಲಾಖೆ ಹಾಗೂ ಸಂಸ್ಥೆಗಳಿಂದ 22,672 ಮಂದಿ ಸಿಬ್ಬಂದಿ ಒದಗಿಸಲು ಕೋರಿದ್ದರು. ನಿಯೋಜನೆಗೊಂಡಿರುವ ಸಿಬ್ಬಂದಿಗೆ ತಡವಾಗಿ ಸಮೀಕ್ಷೆ ತರಬೇತಿ ಆರಂಭವಾಗಿದೆ. ಹೀಗಾಗಿ ತರಬೇತಿ ಹಾಗೂ ಅಗತ್ಯ ಸಿದ್ಧತೆ ಪೂರ್ಣಗೊಂಡ ಬಳಿಕ ಬೆಂಗಳೂರು ನಗರದಲ್ಲಿ ಸಮೀಕ್ಷೆಗೆ ಚಾಲನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.ಸಮೀಕ್ಷೆ ದಿನಾಂಕವೂ ವಿಸ್ತರಣೆ:
ಸಮೀಕ್ಷೆಯು ಸೆ.22 ರಂದು ಆರಂಭವಾಗಿ ಅ.2ರವರೆಗೆ ನಡೆಯಬೇಕಾಗಿತ್ತು. ಆದರೆ, ಬೆಂಗಳೂರಿನಲ್ಲಿ ತಡವಾಗಿ ಶುರುವಾಗುತ್ತಿರುವುದರಿಂದ ಅಂತಿಮ ದಿನಾಂಕವೂ ವಿಸ್ತರಣೆಯಾಗಲಿದೆ. ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಸಮೀಕ್ಷೆ ನಡೆಯಲಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.2-3 ದಿನ ತಡ:
ಬೆಂಗಳೂರು ನಗರದ ಸಮೀಕ್ಷೆಗೆ ಹೆಚ್ಚುವರಿ ಸಿಬ್ಬಂದಿ ಅಗತ್ಯವಿತ್ತು. ಹೀಗಾಗಿ ಬೇರೆ ಬೇರೆ ಇಲಾಖೆಗಳಿಂದ ನೇಮಿಸಲಾಗಿದ್ದು, ಸಿಬ್ಬಂದಿಗೆ ತರಬೇತಿ ನೀಡುವುದು ತಡವಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಸಮೀಕ್ಷೆಯು 2-3 ದಿನ ತಡವಾಗಿ ಆರಂಭವಾಗಲಿದೆ.- ಮಧುಸೂದನ್ ನಾಯಕ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು
ಅನುಮತಿ ಪಡೆದು ಸಮೀಕ್ಷೆ:ಬೆಂಗಳೂರಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಹೆಚ್ಚಿನ ಸಿಬ್ಬಂದಿ ಬೇಕಿತ್ತು. ಈ ಕುರಿತು ಸಿದ್ಧತೆ ನಡೆಸುತ್ತಿದ್ದರಿಂದ ಸೆ.22 ರಿಂದ ಸಮೀಕ್ಷೆ ಶುರುವಾಗುತ್ತಿಲ್ಲ. ಆಯೋಗದ ಬಳಿ ಅನುಮತಿ ಪಡೆದು ಸಮೀಕ್ಷೆ ಆರಂಭವಾಗುವ ದಿನಾಂಕ ನಿಗದಿ ಪಡಿಸಲಾಗುವುದು.
- ಎಂ.ಮಹೇಶ್ವರ್ ರಾವ್, ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ