18 ಲಕ್ಷ ರೈತರಿಗೆ ₹500 ಕೋಟಿ ಪರಿಹಾರ: ಕೃಷ್ಣ ಬೈರೇಗೌಡ

| Published : Jun 25 2024, 09:20 AM IST

Farmers Loan Waiver
18 ಲಕ್ಷ ರೈತರಿಗೆ ₹500 ಕೋಟಿ ಪರಿಹಾರ: ಕೃಷ್ಣ ಬೈರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

 ಬೆಳೆ ನಷ್ಟದಿಂದ ತುಂಬಾ ಕಂಗಾಲಾಗಿದ್ದು, ಅವರ ಜೀವನೋಪಾಯ ನಷ್ಟ ಭರಿಸಲು ಸುಮಾರು 18 ಲಕ್ಷ ರೈತರಿಗೆ ತಲಾ 3,000 ರು.ನಂತೆ 500 ಕೋಟಿ ರು. ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಈ ಹಣ ಜಮೆಯಾಗಲಿದೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕಲಬುರಗಿ : ರಾಜ್ಯದಲ್ಲಿ ಕಳೆದ ವರ್ಷ ಬರಗಾಲ ಕಾರಣ ಸಣ್ಣ, ಅತೀ ಸಣ್ಣ ರೈತರು ವಾರ್ಷಿಕ ಬೆಳೆ ನಷ್ಟದಿಂದ ತುಂಬಾ ಕಂಗಾಲಾಗಿದ್ದು, ಅವರ ಜೀವನೋಪಾಯ ನಷ್ಟ ಭರಿಸಲು ಸುಮಾರು 18 ಲಕ್ಷ ರೈತರಿಗೆ ತಲಾ 3,000 ರು.ನಂತೆ 500 ಕೋಟಿ ರು. ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಈ ಹಣ ಜಮೆಯಾಗಲಿದೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸೋಮವಾರ ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ‌ ಮಾತನಾಡಿದ ಅವರು, ಕಳೆದ ವರ್ಷ ಅತ್ಯಂತ‌ ಭೀಕರ‌ ಬರಗಾಲದಿಂದ ರೈತ ಸಮುದಾಯ ತತ್ತರಿಸಿತು. ಹೀಗಾಗಿ ರೈತ ಸಮುದಾಯದ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂದರು.

ಕಳೆದ ವರ್ಷ ಬರಗಾಲ ಕಾರಣ ಕೇಂದ್ರ ಸರ್ಕಾರ ಕಾಲಮಿತಿಯಲ್ಲಿ ರೈತರಿಂದ ಅರ್ಜಿ ಕಾಯದೆ ಪರಿಹಾರ ನೀಡದ ಕಾರಣ ಸುಮಾರು 40 ಲಕ್ಷ ರೈತರಿಗೆ ರಾಜ್ಯ ಸರ್ಕಾರವೆ ಎಸ್.ಡಿ.ಆರ್.ಎಫ್. ನಿಧಿಯಡಿ 2,451 ಕೋಟಿ ರು.‌ ಬರಗಾಲ ಪರಿಹಾರ ನೀಡಿದೆ. ಇದು ದೇಶದಲ್ಲಿ ದೊಡ್ಡ ಮೊತ್ತದ ಪರಿಹಾರ ಆಗಿದೆ ಎಂದರು.

ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ ಹಣ ಬಿಡುಗಡೆಯಲ್ಲಿ‌ ವಿಳಂಬ‌ ಧೋರಣೆ ಅನುಸರಿಸಿದ ಕಾರಣ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದ ಕಾರಣ ಕೇಂದ್ರ ಹಣ ಬಿಡುಗಡೆ ಮಾಡಿತು. ಆ ಹಣ ಸಹ ರೈತರಿಗೆ ನೀಡಲಾಗಿದೆ. ಇನ್ನು ಬೆಳೆ ವಿಮೆಯಡಿ 1,756 ಕೋಟಿ ರು. ಪರಿಹಾರ ರೈತರ ಖಾತೆಗೆ ಹಣ ನೀಡಲಾಗಿದೆ. ಒಟ್ಟಾರೆ ಬರಗಾಲ ಕಾರಣ ರಾಜ್ಯ, ಕೇಂದ್ರ ಹಣ, ಬೆಳೆ ವಿಮೆ, ಪ್ರಕೃತಿ ವಿಕೋಪ ಪರಿಹಾರ ಹೀಗೆ ಸುಮಾರು 6,000 ಕೋಟಿ ರು. ಪರಿಹಾರ ಅನ್ನದಾತರಿಗೆ ಡಿಬಿಟಿ ಮೂಲಕ ನೀಡಲಾಗಿದೆ ಎಂದರು.

ಇನ್ನ ಹಳೇ ವರ್ಷದ ಅತಿವೃಷ್ಟಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಇದಕ್ಕೆ ಇತಿಶ್ರೀ ಹಾಡಲು ಮುಂದಿನ‌ ಒಂದು ವಾರದೊಳಗೆ ಕಾಮಗಾರಿ ಹಣ ಬಿಡುಗಡೆಗೆ ಡಿಸಿಗಳು ಪ್ರಸ್ತಾವನೆ ಸಲ್ಲಿಸಬೇಕು. ಇದುವೇ ಡೆಡ್ ಲೈನ್ ಎಂದು ಸ್ಪಷ್ಟವಾಗಿ ಸೂಚನೆ ನೀಡಿದರು.

ಕೆರೆ‌ ಸಂರಕ್ಷಣೆಗೆ ಮುಂದಾಗಿ:

ಜಿಲ್ಲೆಗಳಲ್ಲಿ ಜಿವ ಜಲದ‌ ಮೂಲವಾಗಿರುವ ಸಂರಕ್ಷಣೆಗೆ ಕೆರೆಗಳ ಸಂರಕ್ಷಣೆಗೆ ವಿಮೆ, ಆರ್‌ಐ, ಸರ್ವೆ ಇಲಾಖೆ‌ ಮುಂದಾಗಬೇಕು. ಗಡಿ ಗುರುತಿಸಲು ಬಂಡ್ ಅಥವಾ ಸಾಧ್ಯವಾದರೆ ಫೆನ್ಸಿಂಗ್ ಹಾಕಬೇಕು. ತಹಶೀಲ್ದಾರರು ಇದರ ಮುಂದಾಳತ್ವ ವಹಿಸಬೇಕು ಎಂದರು.

ರಾಜ್ಯ ನೈಸರ್ಗಿಕ ವಿಕೋಪ ಪ್ರಾಧಿಕಾರದ ವೈಜ್ಞಾನಿಕ ಅಧಿಕಾರಿ ಡಾ.ಶಿವಕುಮಾರ ಇದೂವರೆಗೆ ಮಳೆ ಬಿದ್ದ ಪ್ರಮಾಣ ಮತ್ತು ಮುಂದೆ ಪ್ರವಾಹಕ್ಕೆ ತುತ್ತಾಗಬಹುದಾದ ಪ್ರದೇಶಗಳ ಕುರಿತು ಪ್ರ್ಯಾತ್ಯಕ್ಷಿಕೆ ಮೂಲಕ ಸಭೆಗೆ ಮಾಹಿತಿ ನೀಡಿದರು.