ರಾಜ್ಯದ 800 ಸರ್ಕಾರಿ ಶಾಲೆಗಳನ್ನು 3,200 ಕೋಟಿ ರು. ವೆಚ್ಚದಲ್ಲಿ ‘ಕರ್ನಾಟಕ ಪಬ್ಲಿಕ್‌ ಶಾಲೆ’ ಆಗಿ  ಉನ್ನತೀಕರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ವಿಸ್ತೃತ ಯೋಜನಾ ವರದಿ ತಯಾರಿಸಲು  ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡಲು ಶಿಕ್ಷಣ ಇಲಾಖೆ ಆಯುಕ್ತರಿಗೆ ಅಧಿಕಾರ ನೀಡಲು ಸಂಪುಟ ಸಭೆ ನಿರ್ಧರಿಸಿದೆ.

ಬೆಂಗಳೂರು : ರಾಜ್ಯದ 800 ಸರ್ಕಾರಿ ಶಾಲೆಗಳನ್ನು 3,200 ಕೋಟಿ ರು. ವೆಚ್ಚದಲ್ಲಿ ‘ಕರ್ನಾಟಕ ಪಬ್ಲಿಕ್‌ ಶಾಲೆ’ ಆಗಿ (ಕೆಪಿಎಸ್‌) ಉನ್ನತೀಕರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ವಿಸ್ತೃತ ಯೋಜನಾ ವರದಿ ತಯಾರಿಸಲು (ಡಿಪಿಆರ್‌) ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡಲು ಶಿಕ್ಷಣ ಇಲಾಖೆ ಆಯುಕ್ತರಿಗೆ ಅಧಿಕಾರ ನೀಡಲು ಸಂಪುಟ ಸಭೆ ನಿರ್ಧರಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, 800 ಪ್ರಮುಖ ಸರ್ಕಾರಿ ಶಾಲೆಗಳನ್ನು (ಮ್ಯಾಗ್ನೆಟ್‌) ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಉನ್ನತೀಕರಿಸಲು ತೀರ್ಮಾನಿಸಲಾಗಿದೆ.

ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ನೆರವಿನಿದ 474 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಉನ್ನತೀಕರಿಸಲು ನಿರ್ಧರಿಸಲಾಗಿದೆ.

100 ತಾಲೂಕುಗಳಲ್ಲಿ 100 ಶಾಲೆ ಉನ್ನತೀಕರಿಸಲು ತೀರ್ಮಾನ

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ನಿಧಿಯಿಂದ (ಕೆಕೆಆರ್‌ಡಿಬಿ) 200 ಶಾಲೆ ಹಾಗೂ ಸಿಇಪಿಎಂಐಝಡ್‌ ನಿಧಿಯಿಂದ 100 ತಾಲೂಕುಗಳಲ್ಲಿ 100 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಉನ್ನತೀಕರಿಸಲು ಶಾಲಾ ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಹೇಳಿದರು.

ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕು. ಪೂರ್ವ ಪ್ರಾಥಮಿಕ ತರಗತಿಯಿಂದ 12ನೇ ತರಗತಿವರರೆಗೆ ಒಂದೇ ಆವರಣದಲ್ಲಿ ಗರಿಷ್ಠ 1200 ವಿದ್ಯಾರ್ಥಿಗಳ ಸಾಮರ್ಥ್ಯ ಇರುವ ಶಾಲೆಗಳನ್ನು ಮಾತ್ರ ಆಯ್ಕೆ ಮಾಡಬೇಕು. ಮೂಲಸೌಕರ್ಯ ಸೇರಿ ಶಿಕ್ಷಣ ಗುಣಮಟ್ಟ ಉತ್ತಮಪಡಿಸಲು ಅಗತ್ಯವಿರುವ ಸೌಲಭ್ಯ ಕಲ್ಪಿಸಲು 3 ಕೋಟಿ ರು.ಗಳಿಂದ 4 ಕೋಟಿ ರು. ವೆಚ್ಚವಾಗಲಿದೆ.

ಈ ಬಗ್ಗೆ ಒಟ್ಟು ಯೋಜನಾ ವೆಚ್ಚ 2,400 ಕೋಟಿ ರು.ಗಳಿಂದ 3,200 ಕೋಟಿ ರು.ವರೆಗೆ ಅಂದಾಜಿಸಲಾಗಿದೆ. ಈ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ಡಿಪಿಆರ್‌ ಸಲ್ಲಿಸಲು ಸಂಸ್ಥೆಯನ್ನು ಶಿಕ್ಷಣ ಇಲಾಖೆ ಆಯುಕ್ತರೇ ಆಯ್ಕೆ ಮಾಡುವಂತೆ ಸಂಪುಟ ನಿರ್ಧರಿಸಿದೆ ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.

ಕೆಲ ಶಾಲೆ ಮುಚ್ಚಬೇಕಾಗಬಹುದು: ಎಚ್‌ಕೆಪಿ

ಕೆಪಿಎಸ್‌ ಶಾಲೆ ಉನ್ನತೀಕರಿಸುವ ವೇಳೆ ಕೆಲ ಶಾಲೆಗಳನ್ನು ವಿಲೀನ ಮಾಡುವುದಾಗಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದು, ಕೆಲ ಶಾಲೆ ಮುಚ್ಚಬೇಕಾಗಬಹುದು ಎಂದೂ ಹೇಳಿದ್ದಾರೆ.

ಪ್ರತಿ ಕೆಪಿಎಸ್‌ ಕೆಪಿಎಸ್‌ ಶಾಲೆಗೂ ಸುತ್ತಮುತ್ತಲ ಐದಾರು ಕಿ.ಮೀ. ವ್ಯಾಪ್ತಿಯ ಕನಿಷ್ಠ 5ರಿಂದ ಗರಿಷ್ಠ 10 ಶಾಲೆಗಳ ವಿಲೀನ ಮಾಡಲಿದ್ದು, ಸದ್ದಿಲ್ಲದೆ ಅಂದಾಜು 6-7 ಸಾವಿರ ಶಾಲೆ ಮುಚ್ಚಲ್ಪಡಲಿವೆ ಎಂದು ಕನ್ನಡಪ್ರಭ ನ.14 ರಂದು ವಿಶೇಷ ವರದಿ ಪ್ರಕಟಿಸಿತ್ತು.

ಈ ವೇಳೆ ಕೆಪಿಎಸ್‌ ಶಾಲೆ ಮಾಡುವಾಗ ಒಂದೂ ಶಾಲೆ ಮುಚ್ಚುವುದಿಲ್ಲ ಎಂದು ಪ್ರಾಥಮಿಕ ಶಿಕ಼್ಣಣ ಸಚಿವ ಮಧು ಬಂಗಾರಪ್ಪ ಹೇಳಿದ್ದರು.

ಗುರುವಾರ ನಡೆದ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್‌, ಶಾಲೆಗಳನ್ನು ವಿಲೀನ ಮಾಡುವುದು ನಮ್ಮ ಆದ್ಯತೆ. ಕೆಲ ಶಾಲೆಗಳನ್ನು ಮುಚ್ಚಲೂ ಬೇಕಾಗಬಹದು ಎಂದು ಹೇಳಿದ್ದಾರೆ.