ಬೆಂಗಳೂರು : ತೃತೀಯ ಭಾಷಾ ವಿಷಯದ ವಿವಾದದ ನಡುವೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಷಯವಾರು ಉಳಿದೆಲ್ಲ ವಿಷಯಗಳಿಗಿಂತ ತೃತೀಯ ಭಾಷೆಯಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಸಾಗಿದ್ದಾರೆ. ಅಷ್ಟೇ ಅಲ್ಲ, ಶೇ.100ಕ್ಕೆ ನೂರು ಫಲಿತಾಂಶ ಪಡೆದವರ ಸಂಖ್ಯೆಯೂ ಈ ವಿಷಯದಲ್ಲೇ ಅಧಿಕ. ಬರೋಬ್ಬರಿ 31,700ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೃತೀಯ ಭಾಷೆಯಲ್ಲಿ ಶೇ.100ಕ್ಕೆ ನೂರು ಅಂಕ ಪಡೆದಿದ್ದಾರೆ.
9 ವಿಷಯಗಳನ್ನು ತೃತೀಯ ಭಾಷೆಯಾಗಿ ಅಧ್ಯಯನ
ಈ ಬಾರಿ ಹಿಂದಿ ಸೇರಿ ಇತರೆ 9 ವಿಷಯಗಳನ್ನು ತೃತೀಯ ಭಾಷೆಯಾಗಿ ಅಧ್ಯಯನ ಮಾಡಿದ್ದ ಒಟ್ಟು 7,69,751 ತರಗತಿ ವಿದ್ಯಾರ್ಥಿಗಳಲ್ಲಿ 7,58,623 ಮಂದಿ ಉತ್ತೀರ್ಣರಾಗುವ ಮೂಲಕ ಶೇ.98.55ರಷ್ಟು ಫಲಿತಾಂಶ ಬಂದಿದೆ. 11,128 ಮಂದಿ ತೃತೀಯ ಭಾಷೆಯಲ್ಲಿ ಫೇಲಾಗಿದ್ದಾರೆ. ಇನ್ನು ತೃತೀಯ ಭಾಷೆ ಪೈಕಿ ಅತಿ ಹೆಚ್ಚು 7,06,751 ಮಂದಿ ಹಿಂದಿಯನ್ನೇ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆದಿದ್ದು, ಇದರಲ್ಲಿ 6,97,264 ಮಂದಿ (ಶೇ.98.65) ಉತ್ತೀರ್ಣರಾಗಿದ್ದಾರೆ. 9487 ಮಂದಿ ಫೇಲಾಗಿದ್ದಾರೆ.
ರಾಜ್ಯದ ವಿದ್ಯಾರ್ಥಿಗಳಿಗೆ ಹಿಂದಿ ಸೇರಿ ತೃತೀಯ ಭಾಷೆ ಅಧ್ಯಯನದ ಹೊರೆ ಕಡಿಮೆ ಮಾಡಲು ಆ ವಿಷಯಗಳಲ್ಲಿ ಅಂಕಗಳ ಬದಲು ಗ್ರೇಡಿಂಗ್ ನೀಡಲು ಸರ್ಕಾರ ಕೈಗೊಂಡಿದ್ದ ತರಾತುರಿ ನಿರ್ಧಾರಕ್ಕೆ ಹೈಕೋರ್ಟ್ ಈ ಬಾರಿ ಬ್ರೇಕ್ ಹಾಕಿದೆ. ಹಾಗಾಗಿ ತೃತೀಯ ಭಾಷೆಯಲ್ಲೂ ಅಂಕಗಳನ್ನೇ ಪರಿಗಣಿಸಿ ಒಟ್ಟು ಆರು ವಿಷಯಗಳಿಂದ 625 ಅಂಕಗಳಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ನೀಡಲಾಗಿದೆ. ಆದರೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅಧಿಕೃತ ಅಧಿಸೂಚನೆ ಮೂಲಕ ತೃತೀಯ ಭಾಷೆಗೆ ಗ್ರೇಡಿಂಗ್ ಪದ್ಧತಿ ಜಾರಿಗೊಳಿಸುವುದು ಖಚಿತ ಎನ್ನಲಾಗುತ್ತಿದೆ. ಈಗಾಗಲೇ ಸಂಬಂಧ ಕರಡು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆ ಆಹ್ವಾನಿಸಲಾಗಿದೆ.
ತೃತೀಯ ಭಾಷಾ ವಿಷಯಗಳ ಫಲಿತಾಂಶ
ಭಾಷೆ ಹಾಜರಾತಿ ತೇರ್ಗಡೆ ಶೇಕಡಾವಾರು
ಹಿಂದಿ 7,06,751 6,97,264 98.55%
ಇಂಗ್ಲಿಷ್ 28,497 27,317 95.9%
ಕನ್ನಡ 10,237 9948 97.2%
ಸಂಸ್ಕೃತ 5059 5059 100%
ಅರೇಬಿಕ್ 317 317 100%
ಕೊಂಕಣಿ 34 34 100%
ಉರ್ದು 5163 5157 99.9%
ತುಳು 788 787 99.9%
ಮರಾಠಿ 3 3 100%
ವಿಪರ್ಯಾಸ ಎಂದರೆ ಪ್ರಥಮ ಭಾಷೆಯಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಫೇಲಾಗಿದ್ದಾರೆ. ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಬಹುತೇಕ ಮಕ್ಕಳು ಕನ್ನಡವನ್ನೇ ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಬಾರಿ ಪ್ರಥಮ ಭಾಷೆಯಲ್ಲಿ ಪರೀಕ್ಷೆ ಬರೆದ 7,69,926 ವಿದ್ಯಾರ್ಥಿಗಳಲ್ಲಿ 7,48,660 ಮಂದಿ ಉತ್ತೀರ್ಣರಾಗಿದ್ದು ಶೇ.97.24ರಷ್ಟು ಫಲಿತಾಂಶವಿದೆ. ಇನ್ನು, ಕನ್ನಡವನ್ನು ಪ್ರಥಮ ಭಾಷೆಯಾಗಿ ಅಧ್ಯಯನ ಮಾಡಿದ 10,341 ಮಂದಿ ಶೇ.100ಕ್ಕೆ ನೂರು ಫಲಿತಾಂಶ ಪಡೆದಿದ್ದಾರೆ.
