ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್ ಮಾತ್ರ ನೀಡುವ ಶಿಕ್ಷಣ ಇಲಾಖೆಯ ಪರಿಷ್ಕೃತ ಮೌಲ್ಯಮಾಪನ ಪದ್ಧತಿ ಜಾರಿಗೊಳಿಸದಂತೆ ಈ ಹಿಂದೆ ಮಾಡಿದ್ದ ಆದೇಶ ಮರುಪರಿಶೀಲಿಸಲು ಹೈಕೋರ್ಟ್ ನಿರಾಕರಿಸಿದೆ.

ಪರೀಕ್ಷೆ ನಡೆದ ನಂತರ ಹೊಸ ಪದ್ಧತಿ ಜಾರಿಗೆ ತರಲಾಗುತ್ತಿದೆ. ಅಲ್ಲದೆ, ಈ ಕುರಿತು ಸರ್ಕಾರದಿಂದ ನೋಟಿಫಿಕೇಷನ್ ಕೂಡ ಹೊರಡಿಸಿಲ್ಲ ಎಂದು ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಅವರು ಅಭಿಪ್ರಾಯಪಟ್ಟು ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಇತ್ಯರ್ಥಪಡಿಸಿದರು.

ರಾಜ್ಯ ಸರ್ಕಾರವು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದ ಬಳಿಕ ಅಂದರೆ ಏ.10ರಂದು ಕರಡು ಅಧಿಸೂಚನೆ ಪ್ರಕಟಿಸಿದೆ. ಇನ್ನೂ, ಅಂತಿಮ ಅಧಿಸೂಚನೆ ಹೊರಡಿಸಿಲ್ಲ. ಕಾನೂನಿನ ಅನ್ವಯ ನಿಯಮಗಳು ಜಾರಿಯಲ್ಲಿಲ್ಲ. ಹೊಸ ಪದ್ಧತಿ ಜಾರಿ ಮಾಡುವಂತಿದ್ದರೆ ಪರೀಕ್ಷೆ ದಿನಾಂಕ ಪ್ರಕಟಿಸುವ ಮೊದಲೇ ಘೋಷಿಸಬೇಕಿತ್ತು. ಹೀಗಾಗಿ, ಹಿಂದಿನ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.


ಫೇಲಾಗುವ ಕಾರಣ ಗ್ರೇಡಿಂಗ್:

ಸರ್ಕಾರ ಪರ ವಾದಿಸಿದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ, ಕಳೆದ ವರ್ಷ ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರನೇ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲಿ ದ್ವಿಭಾಷಾ ನೀತಿಯಿಲ್ಲ. ಇಲ್ಲಿ ತ್ರಿಭಾಷಾ ನೀತಿಯಿದೆ. ಗ್ರೇಡ್‌ ನೀಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. 15-16ನೇ ವಯಸ್ಸಿನಲ್ಲಿ ಅನುತ್ತೀರ್ಣರಾಗುವುದರಿಂದ ಮಕ್ಕಳಿಗೆ ಒತ್ತಡವಾಗುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹಿಂದಿಯಲ್ಲಿ ಹೆಚ್ಚು ಅನುತ್ತೀರ್ಣರಾಗುತ್ತಿದ್ದಾರೆ ಎಂದರು.

ಎಸ್‌ಎಸ್‌ಎಲ್‌ಸಿ 3ನೇ ಭಾಷೆಯ ಪರೀಕ್ಷೆಗೆ ಅಂಕಗಳ ಬದಲು ಗ್ರೇಡಿಂಗ್ ನೀಡುವ ಶಿಕ್ಷಣ ಇಲಾಖೆಯ ಆದೇಶದ ವಿರುದ್ಧ ಮೂವರು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಪರೀಕ್ಷೆ ನಡೆಯುವ ವೇಳೆ ಹೊಸ ಪದ್ಧತಿ ಜಾರಿಗೊಳಿಸಲಾಗದು. ಹೀಗಾಗಿ, ಪರೀಕ್ಷೆಯ ದಿನಾಂಕ ಘೋಷಣೆ ವೇಳೆ ಇದ್ದ ಪದ್ಧತಿಯ ಪ್ರಕಾರ ಮೌಲ್ಯಮಾಪನ ಮಾಡಿ ಅಂಕ ಪ್ರಕಟಿಸುವಂತೆ ಶಿಕ್ಷಣ ಇಲಾಖೆಗೆ ಕಳೆದ ವಾರ ಸೂಚನೆ ನೀಡಿತ್ತು.

ಹೈಕೋರ್ಟ್‌ ಹೇಳಿದ್ದೇನು?

1. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಅಂದರೆ ಏ.10ರಂದು ಸರ್ಕಾರ ಗ್ರೇಡಿಂಗ್‌ ಜಾರಿಗೆ ಅಧಿಸೂಚನೆ ಹೊರಡಿಸಿದೆ

2. ಅದು ಕೂಡ ಕರಡು ಅಧಿಸೂಚನೆ. ಇನ್ನೂ ಅಂತಿಮ ಸೂಚನೆ ಪ್ರಕಟವಾಗಿಲ್ಲ. ಹೀಗಾಗಿ ನಿಯಮಗಳು ಜಾರಿಯಲ್ಲಿಲ್ಲ

3. ಹೊಸ ನಿಯಮ ಜಾರಿ ಮಾಡುವಂತಿದ್ದರೆ, ಪರೀಕ್ಷೆ ದಿನಾಂಕ ಪ್ರಕಟಿಸುವ ಮೊದಲೇ ಘೋಷಣೆ ಮಾಡಬೇಕಾಗಿತ್ತು

4. ಹೀಗಾಗಿ ಗ್ರೇಡಿಂಗ್‌ ಬದಲು ಅಂಕವನ್ನೇ ನೀಡುವಂತೆ ಈ ಹಿಂದೆ ಹೊರಡಿಸಿದ್ದ ಆದೇಶದಲ್ಲಿ ಮಧ್ಯಪ್ರವೇಶ ಇಲ್ಲ

ವಿದ್ಯಾರ್ಥಿಗಳಿಗೆ ಸಂಕಷ್ಟ?

1. ತೃತೀಯ ಭಾಷೆ ಪರೀಕ್ಷೆಗೆ ಮುನ್ನ ಗ್ರೇಡಿಂಗ್‌ ಪದ್ಧತಿ ಪ್ರಕಟಿಸಿದ್ದ ರಾಜ್ಯ ಸರ್ಕಾರ

2. ಒಟ್ಟು ಅಂಕಕ್ಕೆ ಹಿಂದಿ ಸೇರಿ ತೃತೀಯ ಭಾಷೆಯ ಅಂಕ ಪರಿಗಣಿಸಲ್ಲ ಎಂದು ಪ್ರಕಟ

3. ಈ ಘೋಷಣೆ ನಂಬಿ ಓದಿದ್ದರೂ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸದವರಿಗೆ ಸಂಕಷ್ಟ

4. ಪರೀಕ್ಷೆಗೆ ಅಂತಿಮ ಸಿದ್ಧತೆ ನಡೆಸದ ವಿದ್ಯಾರ್ಥಿಗಳಿಗೂ ಈಗ ಅಂಕ ಕುಸಿತದ ಆತಂಕ