ಕೆ.ವಿ.ಮನು

ಕನ್ನಡಪ್ರಭ ವಾರ್ತೆ ಕನಕಪುರ

ಏಷ್ಯಾದ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶ ಎಂದು ಹೆಸರುಗಳಿಸಿರುವ ಹಾರೋಹಳ್ಳಿ ಹಾಗೂ ಕನಕಪುರ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ್ ಸೇರಿ ಉತ್ತರ ಭಾರತದ ಯುವಕರು ಹೊರಗುತ್ತಿಗೆ ಆಧಾರದ ಮೇಲೆ ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, ಅಂದಾಜು 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 8 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬಿಹಾರ್, ಅಸ್ಸಾಂ, ಉತ್ತರಪದೇಶ, ಮಣಿಪುರದವರು. ಈ ವಲಸೆ ಕಾರ್ಮಿಕರು ಬನ್ನಿಕುಪ್ಪೆ, ಹುಲೇ ಸಿದ್ದೇಗೌಡನದೊಡ್ಡಿ, ರಾಮಸಾಗರ, ಯರೇಹಳ್ಳಿ, ಗಾಣಳುದೊಡ್ಡಿ, ಹಾರೋಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿ ಗ್ರಾಮಗಳಲ್ಲಿ ಹಾಗೂ ಕನಕಪುರದಲ್ಲಿ ಮನೆಬಾಡಿಗೆ ಪಡೆದು ವಾಸವಾಗಿದ್ದಾರೆ. ಸ್ಥಳೀಯ ಮನೆ ಮಾಲೀಕರು ಗುರುತಿನ ಚೀಟಿ, ಆಧಾರ್ ಕಾರ್ಡ್ ಸೇರಿ ಯಾವುದೇ ರೀತಿ ಮಾಹಿತಿ ಪಡೆಯದೆ ಮನೆ ಬಾಡಿಗೆ ನೀಡುತ್ತಿದ್ದು, ಅಕ್ರಮಗಳು ನಡೆದರೆ ಯಾರು ಹೊಣೆ ಎಂಬತಾಗಿದೆ.

ಒಂದೇ ಮನೆಯಲ್ಲಿ 10-20 ಮಂದಿ ವಾಸವಿದ್ದು, ಪಾಳಿಯಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ. ಹಲವು ಕಾರ್ಖಾನೆಗಳ ಆಡಳಿತ ಮಂಡಳಿ ಒಟ್ಟಿಗೆ ಕಾರ್ಮಿಕರನ್ನು ಕರೆ ತಂದು ಬಾಡಿಗೆ ಮನೆಗಳಲ್ಲಿ ಇರುಸುತ್ತಿದ್ದು ಯಾರು ಯಾವ ಸಮಯದಲ್ಲಿ ಬರುತ್ತಾರೆ ಹೋಗುತ್ತಾರೆ ಎಂಬ ಮಾಹಿತಿಯೇ ಇರುವುದಿಲ್ಲ.ಸ್ಥಳೀಯರಲ್ಲಿ ಆತಂಕ:


ಬಾಡಿಗೆ ಮನೆಯಲ್ಲಿ ವಾಸ ಮಾಡುವ ಯುವಕರ ವರ್ತನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೆಲವು ಬಾರಿ ದಿನದ 24 ಗಂಟೆಯೂ ಯುವಕರ ಕಾರುಬಾರು ಕಂಡು ಬರುತ್ತಿದ್ದು ಸ್ಥಳೀಯ ಬಾಡಿಗೆದಾರರಲ್ಲಿ ಆತಂಕ ಹೆಚ್ಚಾಗುತ್ತಿದೆ. ಮನೆ ಬಾಡಿಗೆ ನೀಡುವ ಮಾಲೀಕರು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಬಾಡಿಗೆದಾರರ ಅಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿ ಸಹಿತ ವಿವರಣೆ ನೀಡಬೇಕೆಂಬ ನಿಯಮವಿದ್ದರೂ ಅದು ಕೇವಲ ಕಾಗದದಲ್ಲಿ ಮಾತ್ರ ಉಳಿದು ಕೊಂಡಿದೆ. ಮಕ್ಕಳ ಕಾಯುವ ಚಿಂತೆ:

ಹಲವು ಸಾಮಾಜ ಘಾತುಕ ಪ್ರಕರಣದಿಂದ ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಹಾಗೂ ಚಿಂತೆ ಶುರುವಾಗಿದೆ. ಕನಕಪುರ ಪಟ್ಟಣ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು, ಕಾರ್ಖಾನೆ ಮಾಲೀಕರು ಹಾಗೂ ಬಾಡಿಗೆಗೆ ಮನೆ ನೀಡಿರುವ ಮಾಲೀಕರಿಗೆ ಪೊಲೀಸರು ಸೂಕ್ತ ಎಚ್ಚರಿಕೆ ನೀಡಿ ಅವರ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಬೇಕೆಂಬ ಆಗ್ರಹ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.-ಕೋಟ್‌-

ಬೃಹತ್ ಕೈಗಾರಿಕೆಗಳು ಹಾಗೂ ಸಣ್ಣ ಕೈಗಾರಿಕೆ ಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಒಂದೊಂದು ಮನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ವಾಸವಿದ್ದು, ಗುರುತಿನ ಚೀಟಿ ಸೇರಿದಂತೆ ಸೂಕ್ತ ದಾಖಲೆಗಳನ್ನು ಸಲ್ಲಿಸದೆ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ.

ಜಯಸಿಂಹ, ಕನ್ನಡ ಸೇನೆ ತಾಲೂಕು ಅಧ್ಯಕ್ಷ --------------

ಪೊಲೀಸ್ ಇಲಾಖೆಯು ಕಾರ್ಮಿಕರ ಕುರಿತು ಸಂಬಂಧಪಟ್ಟ ಕೈಗಾರಿಕೆಗಳ ಮಾಲೀಕರು ಹಾಗೂ ಬಾಡಿಗೆಗೆ ಕೊಟ್ಟಿರುವ ಮನೆಗಳ ಮಾಲೀಕರ ಜೊತೆ ಸಭೆ ನಡೆಸುವುದರ ಜೊತೆಗೆ ಅವರಿಗೆ ಕಾನೂನು ತಿಳಿವಳಿಕೆ ನೀಡಬೇಕು. ಅಹಿತಕರ ಘಟನೆಗಳಿಗೆ ಆಸ್ಪದ ಕೊಟ್ಟರೆ ಕಾನೂನು ಕ್ರಮದ ಎಚ್ಚರಿಕೆ ನೀಡಬೇಕು, ರಾತ್ರಿ ವೇಳೆ ಪೊಲೀಸ್ ಬೀಟ್ ಹೆಚ್ಚಿಸಬೇಕು, ವಲಸೆ ಕಾರ್ಮಿಕರ ಗುರುತಿನ ಚೀಟಿ ಮತ್ತು ವಿಳಾಸದ ಮಾಹಿತಿ ಪಡೆದು ಎಚ್ಚರ ವಹಿಸಬೇಕು.

ಕುಮಾರಸ್ವಾಮಿ, ರಾಜ್ಯ ಸಲಹೆಗಾರ ಜಯ ಕರ್ನಾಟಕ ಜನಪರ ವೇದಿಕೆ