ಭ್ರಷ್ಟರ ಸಿಂಹಸ್ವಪ್ನ ಎಸ್ಪಿಗೆ ವರ್ಷದಿಂದ ಸಿಗದ ಹುದ್ದೆ : ರಾಜ್ಯ ಸರ್ಕಾರದ ಕ್ರಮ ಇಲಾಖೆಯಲ್ಲಿ ಚರ್ಚೆ

| N/A | Published : Mar 01 2025, 10:10 AM IST

KSRP

ಸಾರಾಂಶ

  ಮಹತ್ವದ ಪ್ರಕರಣಗಳ ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡಗಳಲ್ಲಿ (ಎಸ್‌ಐಟಿ) ಕಾರ್ಯನಿರ್ವಹಿಸಿದ್ದ ಎಸ್ಪಿ ಸಿ.ಎ.ಸೈಮನ್‌ ಅವರಿಗೆ ವರ್ಷದಿಂದ ಹುದ್ದೆ ತೋರಿಸದೆ ಮನೆಯಲ್ಲಿ ಕುರಿಸಿರುವ ರಾಜ್ಯ ಸರ್ಕಾರದ ಕ್ರಮ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು : ನಕಲಿ ಛಾಪಾ ಕಾಗದ ಹಗರಣ ಹಾಗೂ ಲೋಕಾಯುಕ್ತ ಸಂಸ್ಥೆ ಭ್ರಷ್ಟಾಚಾರ ಪ್ರಕರಣ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡಗಳಲ್ಲಿ (ಎಸ್‌ಐಟಿ) ಕಾರ್ಯನಿರ್ವಹಿಸಿದ್ದ ಎಸ್ಪಿ ಸಿ.ಎ.ಸೈಮನ್‌ ಅವರಿಗೆ ವರ್ಷದಿಂದ ಹುದ್ದೆ ತೋರಿಸದೆ ಮನೆಯಲ್ಲಿ ಕುರಿಸಿರುವ ರಾಜ್ಯ ಸರ್ಕಾರದ ಕ್ರಮ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆ.

ಇತ್ತ ಕೆಲಸವು ಇಲ್ಲದೆ ಅತ್ತ ಸಂಬಳವೂ ಇಲ್ಲದೆ ಎಸ್ಪಿ ಸೈಮನ್ ಅ‍ವರು ಅತಂತ್ರ ಪರಿಸ್ಥಿತಿ ಸಿಲುಕಿದ್ದಾರೆ. ವರ್ಷದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಲೋಕಾಯುಕ್ತ ಎಸ್ಪಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಲೋಕಸಭಾ ಚುನಾವಣೆ ಮುನ್ನ ಸ್ವಂತ ಜಿಲ್ಲೆ ಎಂಬ ಕಾರಣ ನೀಡಿ ಸೈಮನ್ ಅವರನ್ನು ವರ್ಗಾಣೆಗೊಳಿಸಿದ ಸರ್ಕಾರವು, ಆನಂತರ ಯಾವುದೇ ಹುದ್ದೆ ನೀಡಿಲ್ಲ.2000ದಲ್ಲಿ ರಾಜ್ಯ ಅಪರಾಧ ತನಿಖಾ ಇಲಾಖೆಗೆ ಡಿಟೆಕ್ಟಿವ್‌ ಸಬ್‌ ಇನ್‌ಸ್ಪೆಕ್ಟರ್‌ ಆಗಿ ಸೈಮನ್‌ ನೇಮಕ ಗೊಂಡಿದ್ದರು. ಆನಂತರ ಸೇವಾ ಜೇಷ್ಠತೆ ಆಧರಿಸಿ ಹಂತ ಹಂತವಾಗಿ ಮುಂಬಡ್ತಿ ಆಗಿ ಪ್ರಸ್ತುತ ಎಸ್ಪಿ ಆಗಿದ್ದಾರೆ. ಹಲವು ವರ್ಷಗಳು ಸಿಐಡಿಯಲ್ಲಿ ಕಾರ್ಯನಿರ್ವಹಿಸಿದ್ದ ಅವರನ್ನು ಲೋಕಾಯುಕ್ತ ಸಂಸ್ಥೆಗೆ ಕಳೆದ ಸರ್ಕಾರದ ಅವಧಿಯಲ್ಲಿ ವರ್ಗಾವಣೆ ಮಾಡಲಾಗಿತ್ತು.

ಪ್ರಜ್ವಲ್‌, ಮುನಿರತ್ನ ಕೇಸ್ ತನಿಖೆ:

ಮಂಗಳೂರಿನಿಂದ ವರ್ಗವಾದ ಬಳಿಕ ಹುದ್ದೆ ನಿರೀಕ್ಷೆಯಲ್ಲಿದ್ದ ಸೈಮನ್‌ ಅವರನ್ನು ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣ ಹಾಗೂ ಮಾಜಿ ಸಚಿವ ಹಾಗೂ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣಗಳ ತನಿಖೆಗೆ ರಚಿತವಾದ ಎಸ್‌ಐಟಿಗಳಿಗೆ ಎಸ್ಪಿಯಾಗಿ ಸರ್ಕಾರ ನಿಯೋಜಿಸಿತ್ತು. ಈ ಎರಡು ಎಸ್‌ಐಟಿಗಳಲ್ಲಿ ಕೆಲಸ ಮಾಡಿದ ಬಳಿಕವು ಅವರಿಗೆ ಕಾಯಂ ಹುದ್ದೆ ಸರ್ಕಾರ ನಿರ್ಲಕ್ಷ್ಯಿಸಿತು. ಈ ಪ್ರಕರಣ ತನಿಖೆ ಭಾಗಶಃ ಮುಗಿದ ಬಳಿಕ ಅವರನ್ನು ತನಿಖಾ ತಂಡದಿಂದ ಸಹ ಬಿಡುಗಡೆಗೊಳಿಸಲಾಗಿದೆ. ಇದಾದ ಬಳಿಕ ಮಂಗಳೂರಿಗೆ ಸೈಮನ್ ಮರಳಿದ್ದಾರೆ.